ಬಂಟ್ವಾಳ: ಪ್ರಸ್ತುತ ಸನ್ನಿವೇಶದಲ್ಲಿ ಸಂಘಟನೆ ಅಗತ್ಯವಾಗಿದ್ದು ಕುಲಾಲ ಸಮುದಾಯದ ಹಿರಿಯರು ಹಾಕಿಕೊಟ್ಟ ಸಂಸ್ಕಾರ ಹಾಗೂ ಆದರ್ಶದ ಹಾದಿಯಲ್ಲಿ ಯುವ ಪೀಳಿಗೆ ಮುಂದುವರಿಯಲು ಅವಕಾಶ ಮಾಡಿಕೊಡ ಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಬಿ.ಸಿ.ರೋಡಿನ ಪೊಸಳ್ಳಿ ಎಂಬಲ್ಲಿ ನಿರ್ಮಾಣಗೊಂಡ ನೂತನ ಕುಲಾಲ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕುಲಾಲ ಸಮುದಾಯ ಇಡೀ ಜಗತ್ತನ್ನೇ ಪ್ರೀತಿಸುವ ಸಂದೇಶವನ್ನು ನೀಡಿದ ಸಮುದಾಯ. ಕೃತಜ್ಞತಾ ಮನೋಭಾವನೆ ಈ ಸಮುದಾಯ ಜನರಲ್ಲಿ ಹಾಸುಹೊಕ್ಕಾಗಿದೆ. ಕುಂಬಾರಿಕೆಯ ಮೂಲಕ ಮಣ್ಣಿನಲ್ಲೂ ಶಕ್ತಿಯನ್ನು ಕಂಡು ಕೊಂಡಿದ್ದು ಇದನ್ನು ಮುಂದೆಯೂ ಚಿರಸ್ಥಾಯಿಗೊಳಿಸುವ ಕಾರ್ಯ ನಡೆಯಬೇಕು ಎಂದರು.
ಸಮುದಾಯ ಜನರೊಳಗೆ ಒಗ್ಗಟ್ಟು ಇರಬೇಕು ಇದರ ಕೊರತೆಯಿಂದಾಗಿಯೇ ರಾಜಕೀಯದಲ್ಲಿ ಕುಲಾಲರು ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ರಾಜಕೀಯ ಮುಖಂಡರು ಕುಲಾಲ ನಾಯಕರಿಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು. ಕುಲಾಲ ಸಮುದಾಯಕ್ಕೆ ಜಿಲ್ಲೆಯ ಮೂರು ಪ್ರತಿಷ್ಠಿತ ಧಾರ್ಮಿಕ ಕೇಂದ್ರಗಳು ಒಳಪಟ್ಟಿದೆ. ಅವುಗಳ ವಿರುದ್ದ ಅವಹೇಳಕಾರಿ ಮಾತುಗಳು ಕೇಳಿ ಬಂದಲ್ಲಿ ಸಹಿಸುವುದಿಲ್ಲ. ಈ ಸಂಬಂಧ ಯಾವುದೇ ಹೋರಾಟಕ್ಕೂ ಸಿದ್ದ. ಸಮಾಜದ ಬಮಧುಗಳು ಈ ಬಗ್ಗೆ ಎಚ್ಚರವಾಗಿರಬೇಕು ಎಂದರು.
ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ.ಎನ್. ಉಪಸ್ಥಿತರಿದ್ದರು. ಕಟ್ಟಡ ಸಮಿತಿ ಗೌರವಾಧ್ಯಕ್ಷ ಬಿ.ಗಿರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಕುಂದಾಪುರ ಮಂಜುನಾಥ ಆಸ್ಪತ್ರೆಯ ಡಾ. ಸೌಂದರ್ಯ ರಮೇಶ್, ಉದ್ಯಮಿ ಸೌಂದರ್ಯ ರಮೇಶ್, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ, ಜಿ.ಪಂ.ಸದಸ್ಯೆ ಕಸ್ತೂರಿ ಪಂಜ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಸಮಾಜ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್, ಪುರಸಭೆ ಸದಸ್ಯರಾದ ಬಿ.ಮೋಹನ್, ಭಾಸ್ಕರ ಟೈಲರ್ ಕಾಮಾಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸುನೀತಾ ನಾಯಕ್ ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಟ್ಟಡ ಸಮಿತಿ ಅಧ್ಯಕ್ಷ ಬಿ.ಕೃಷ್ಣಪ್ಪ, ವೇದಿಕೆಯಲ್ಲಿದ್ದರು.
ದ.ಕ.ಜಿಲ್ಲಾ ಪಂಚಾಯಿತಿಯ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಸ್ತೂರಿ ಪಂಜ ಅವರನ್ನು ಈ ಸಂದರ್ಭ ಸನ್ಮಾನಿಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ಸ್ವಾಗತಿಸಿ, ಕಟ್ಟಡ ಸಮಿತಿ ಕಾರ್ಯಧ್ಯಕ್ಷ ಲಿಂಗಪ್ಪ ಕೈಕುಂಜೆ ಪ್ರಸ್ತಾವಿಸಿದರು, ಸಂಘದ ಅಧ್ಯಕ್ಷ ಕೇಶವ ಮಾಸ್ತರ್ ವಂದಿಸಿದರು. ರಾಧಕೃಷ್ಣ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ, ವರದಿ : ಸಂದೀಪ್ ಸಾಲ್ಯಾನ್