ಮಂಗಳೂರು : ಅದು ಕನ್ನಡ ಚಿತ್ರರಂಗದ ಗತ ವೈಭವದ ದಿನಗಳು,ತುಳು ಚಿತ್ರರಂಗ ಎನ್ನುವುದು ಅಸ್ತಿತ್ವಕ್ಕೆ ಬಂದಿರದ ದಿನಗಳು, ಬರೀ ತುಳು ನಾಟಕಗಳನ್ನು ನೋಡಿ ಆನಂದಿಸುತ್ತಿದ್ದ ದಿನಗಳು. ಕನ್ನಡ ಸಿನಿಮಾಗಳನ್ನು ನೋಡಿ ತುಳುವಿನಲ್ಲೂ ಇಂತದೆ ಸಿನಿಮಾಗಳು ಯಾಕೆ ಬರಬಾರದು ಎಂದು ಜನ ಅಂದುಕ್ಕೊಂಡಿದ್ದ ದಿನಗಳು. ಆವಾಗಲೆ ನೋಡಿ ತುಳು ಚಿತ್ರರಂಗದ ಭವಿಷ್ಯದ ನಾಗಲೊಟಕ್ಕೆ ಭದ್ರ ಬುನಾದಿಯನ್ನು ಹಾಕಿದವರು ಕೆ.ಎನ್ ಟೈಲರ್ . ಅವರ ಪ್ರಯತ್ನದ ಫಲದಿಂದ ತುಳು ಚಿತ್ರರಂಗದ ಮೊದಲ ಕಪ್ಪು ಬಿಳುಪು ಸಿನೆಮಾ “ಎನ್ನ ತಂಗಡಿ”1971ರಲ್ಲಿ ಬಿಡುಗಡೆಯಾಯ್ತು ಅಲ್ಲಿಂದ ನಂತರ ನಡೆದದ್ದು ಇತಿಹಾಸ. ಇಲ್ಲೀವರೆಗೂ 67 ಸಿನೆಮಾಗಳು ಬಿಡುಗಡೆಯಾಗಿದೆ.
ಸಿನಿಮಾ ನಿರ್ದೇಶನ ಏನಿದ್ದರೂ ಪುರುಷರ ಪ್ರಪಂಚ. ಮಹಿಳೆಯರು ಚಿತ್ರದಲ್ಲಿ ಗ್ಲಾಮರ್ಗಾಗಿ ನಟಿಸಿಕೊಂಡು ಇರಬೇಕೇ ಹೊರತು, ಸಿನಿಮಾ ಗ್ರಾಮರ್ನ್ನು ಅರಗಿಸಿಕೊಳ್ಳವ ಪ್ರಯತ್ನ ಮಾಡಬಾರದು… ಎಂಬ ಮಾತುಗಳು ಕೇಳಿಬರುತ್ತಿದ್ದ ಕಾಲ. ಆಗ ಇಂತಹ ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತೂ ನೀಡದೆ ಧಗ್ಗನೆ ಎದ್ದು ನಿಂತವರು ಟಿ ಪಿ ರಾಜಲಕ್ಷ್ಮಿ.
೧೯೩೮ರಲ್ಲಿ ಬಿಡುಡೆಯಾದ ಇವರ ನಿರ್ದೇಶನದ ‘ಮಿಸ್ ಕಮಲ’ ಚಿತ್ರ ನೋಡಿದವರಿಗೆ ಇವರ ಬಗ್ಗೆ ಹೆಚ್ಚಿನ ಇಂಟ್ರಡಕ್ಷನ್ ಬೇಕಾಗಿಲ್ಲ. ಹೀಗೆ, ಆಗಿನ ಕಾಲದಲ್ಲಿ ಪುರುಷ ಸಮಾಜ ಮಹಿಳೆಗೆ ಹಾಕಿದ ಬೇಲಿಯನ್ನು ಮುರಿದು, ದಕ್ಷಿಣ ಬಾರತದ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾದವರು ಇದೇ ರಾಜಲಕ್ಷ್ಮಿ. ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಹೆಜ್ಜೆಗುರುತು ಉಳಿಸಿ ಹೋದ ಇವರನ್ನು ಇಲ್ಲಿ ನೆನೆಪಿಸಿಕೊಳ್ಳಲು ಕಾರಣ, ನಲ್ವತ್ತೈದು ವರ್ಷಗಳ ಇತಿಹಾಸವಿರುವ ತುಳು ಚಿತ್ರರಂಗದಲ್ಲಿ ಏಕಕಾಲಕ್ಕೆ ಇಬ್ಬರು ಮಹಿಳಾ ನಿರ್ದೇಶಕರು ಕಾಲಿಡುತ್ತಿದ್ದಾರೆ.
ಅಶ್ವಿನಿ ಹರೀಶ್ ನಾಯಕ್ ಎಂಬವರು `ನಮ್ಮ ಕುಡ್ಲ’ ತುಳು ಚಿತ್ರ ನಿರ್ದೆಶಿಸುತ್ತಿದ್ದರೆ, ಕುಲಾಲ ಸಮುದಾಯದ ಲಲಿತಶ್ರೀ ಅವರು “ರಾ…ರಾ” ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇವುಗಳಲ್ಲಿ ಯಾವ ಚಿತ್ರ ಮೊದಲು ಬಿಡುಗಡೆ ಭಾಗ್ಯ ಕಾಣುತ್ತದೋ ಅವರಿಗೆ ತುಳು ಸಿನಿಮಾರಂಗದ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿ ಎಂಬ ಪಟ್ಟ ದೊರೆಯಲಿದೆ.
ಲಲಿತಶ್ರೀ ಅವರು `ತಾಳಿ ಕಟ್ಟುವ ಶುಭವೇಳೆ’ ಖ್ಯಾತಿಯ ನಿರ್ದೇಶಕ ಎನ್.ಆರ್.ಕೆ. ವಿಶ್ವನಾಥ್ ಅವರ ಸಹೋದರಿ. ಬ್ಯಾಂಕ್ ಉದ್ಯೋಗಿಯಾಗಿರುವ ಲಲಿತಶ್ರೀ ಯವರ ತುಳು ಸಿನಿಮಾ”ರಾ…ರಾ”ತನ್ನ ಅಂತಿಮ ಹಂತದ ಚಿತ್ರೀಕರಣವನ್ನು ಭರದಿಂದ ಮುಂದುವರಿಸಿದೆ. ನಿರ್ದೆಶಕಿ ಲಲಿತಶ್ರೀ ಈ ಮೊದಲು ಸಾಕಷ್ಟು ಆಲ್ಬಂಗಳಿಗೆ ಸಾಹಿತ್ಯವನ್ನು ಬರೆದವರಾಗಿದ್ದು ಸಿನೆಮಾ ನಿರ್ದೇಶನದ ಬಗ್ಗೆ ಸಾಕಷ್ಟು ತಿಳಿದುಕೊಂಡು ಪೂರ್ವ ತಯಾರಿಯಿಂದ ನಿರ್ದೇಶನನಕ್ಕೆ ಧುಮುಕ್ಕಿದ್ದಾರೆ. “ರಾ…ರಾ”ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕಿಯಾಗುವ ಮೂಲಕ ತುಳು ಚಿತ್ರರಂಗದ ಪ್ರಪ್ರಥಮ ಕುಲಾಲ ಮಹಿಳಾ ನಿರ್ದೆಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದುವೇಳೆ `ನಮ್ಮ ಕುಡ್ಲ’ಕ್ಕೂ ಮುನ್ನ “ರಾ…ರಾ” ಬಿಡುಗಡೆಯಾದಲ್ಲಿ ತುಳು ಚಿತ್ರರಂಗದ ಪ್ರಪ್ರಥಮ ನಿರ್ದೆಶಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಚಿತ್ರ ವೀಕ್ಷಿಸುವ ಮೂಲಕ ಅವರಿಗೆ ಶುಭಕೋರೋಣ.
Posted by: Dinesh Bangera Irvathur/02/04/2016