ವಿಟ್ಲ: ವಿಷಜಂತು ಕಚ್ಚಿದ ಪರಿಣಾಮ ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ಅಳಿಕೆ ಗ್ರಾಮದ ಎರುಂಬು ಎಂಬಲ್ಲಿ ನಡೆದಿದೆ. ಅಳಿಕೆ ಗ್ರಾಮದ ಎರುಂಬು ತಿಮ್ಮಪ್ಪ ಮೂಲ್ಯ ಅವರ ಪುತ್ರ, ಪಡಿಬಾಗಿಲು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ 3ನೇ ತರಗತಿ ವಿದ್ಯಾರ್ಥಿ ಭರತೇಶ್ ಮೂಲ್ಯ(9 ವರ್ಷ) ವಿಷಜಂತು ಕಚ್ಚಿ ಸಾವನ್ನಪ್ಪಿದ್ದಾರೆ.
ತನ್ನ ಅಜ್ಜನ ಮನೆಗೆ ಬಂದಿದ್ದ ಭರತೇಶ್ ತೋಟಕ್ಕೆ ನೀರು ಹಾಯಿಸಲು ತೆರಳಿದ್ದು, ಶುಕ್ರವಾರ ರಾತ್ರಿ 7.30ಕ್ಕೆ ಆತ ಅಜ್ಜನೊಂದಿಗೆ ಮನೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ವಿಷಜಂತು ಕಚ್ಚಿತ್ತು. ತಕ್ಷಣವೇ ಸ್ಥಳೀಯ ನಾಟಿ ವೈದ್ಯರೊಬ್ಬರ ಬಳಿ ಕರೆದೊಯ್ದು ಚಿಕಿತ್ಸೆ ನೀಡಿ ಮನೆಗೆ ಕರೆತರಲಾಗಿತ್ತು. ಮನೆಯವರು ಬೆಳಗ್ಗೆ ಕ್ಷೀಣವಾದ ಆತನ ಧ್ವನಿಯನ್ನು ಗಮನಿಸಿ, ಆಸ್ಪತ್ರೆಗೆ ಒಯ್ಯಲು ಸಿದ್ಧರಾಗುತ್ತಿದ್ದಾಗಲೇ ಆತ ಅಸುನೀಗಿದ್ದ. ಮೃತರ ಶೋಕಾರ್ಥ ಪಡಿಬಾಗಿಲು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಗೆ ರಜೆ ನೀಡಲಾಗಿತ್ತು.
Posted by :Dinesh Bangera Iravthur/27/03/2016