ಕರಾವಳಿ ಕುಲಾಲ ಯುವವೇದಿಕೆ ಕುಂದಾಪುರ ವಕ್ವಾಡಿ ಘಟಕದ ಉದ್ಘಾಟನೆ
ಕುಂದಾಪುರ: `ಕರಾವಳಿಯಲ್ಲಿ ಯುವ ವೇದಿಕೆ ಆರಂಭವಾದಾಗ ಯುವವೇದಿಕೆ ಇಷ್ಟು ಪ್ರಬ ಲವಾಗಿ ಬೆಳೆದು ಕುಲಾಲ ಸಂಘಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತವೆ ಎಂದು ಯಾರೂ ಎಣಿಸಿರಲಿಲ್ಲ. ಯುವವೇದಿಕೆಗಳು ವಿಧಾನಸಭೆ ಜಿಲ್ಲೆ ಹಾಗು ವಿಭಾಗೀಯ ಮಟ್ಟದಲ್ಲಿ ಮಾಡುತ್ತಿರುವ ಸಾಮಾಜಿಕ.ರಾಜಕೀಯ, ಆರೋಗ್ಯ, ಶೈಕ್ಷಣಿಕ, ಜನಜಾಗ್ರತಿ, ಕ್ರೀಡಾ ಕೂಟಗಳು ಕುಲಾಲ ಸಂಘಟನೆಗಳಿಗೆ ಆನೆಬಲ ತಂದಿವೆ’ ಎಂದು ಕುಂದಾಪುರದ ಖ್ಯಾತ ವೈದ್ಯ, ಕುಲಾಲ ಮುಖಂಡ ಎಂ.ವಿ.ಕುಲಾಲ್ ಹೇಳಿದರು.
ವಕ್ವಾಡಿಯಲ್ಲಿ ಕುಲಾಲ ಯುವವೇದಿಕೆ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಇಂದು ಯುವಕರು ಸಂಘಟನೆಗಳತ್ತ ಹೆಚ್ಚು ಹೆಚ್ಚು ಬರಲಾರಂಬಿಸಿದ್ದಾರೆ.ಈ ಯುವವೇದಿಕೆಯ ಹಿಂದೆ ನಿಂತು ಯುವಕರಿಗೆ ಮಾರ್ ದರ್ಶನ ನೀಡುತ್ತಿರುವ ಡಾ.ಅಣ್ಣಯ್ಯ ಕುಲಾಲ್ ಹಾಗು ಅವರ ಯುವ ತಂಡದ ಪ್ರತಿಯೋರ್ವರೂ ಅಭಿನಂದನಾರ್ಹರು. ಯುವಕರು ಮತ್ತಷ್ಟು ಸಮಾಜಮುಖಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.
ದಿಕ್ಸೂಚಿ ಭಾಷಣ ಮಾಡಿದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು `ಕುಲಾಲ ಯುವವೇದಿಕೆ ಯಾವುದೇ ಸಂಘ ಸಂಘಟನೆಗೆ ಪರ್ಯಾಯ ಸಂಘಟನೆಯಲ್ಲ. ಸಂಘಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಯುವವೇದಿಕೆಯ ಸ್ವಯಂ ಸೇವಕರು ಪ್ರತೀ ವಿಧಾನಸಭೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಾರೆ. ಉತ್ತಮ ಸ್ವಯಂ ಸೇವಕರನ್ನು ಆಯ್ದು ಜವಾಬ್ದಾರಿ ನೀಡಿ ಮುಂದಿನ ನಾಯಕರನ್ನಾಗಿ ಮಾಡುವ ಮೂಲಕ ಪ್ರತೀ ವಿಧಾನಸಭಾ ಮಟ್ಟದಲ್ಲಿ ಕನಿಷ್ಠ ಹತ್ತು ಮಂದಿ ನಾಯಕರನ್ನ ಹುಟ್ಟು ಹಾಕಿ, ಆ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಕುಲಾಲ ಕುಂಬಾರ ನಾಯಕರನ್ನು ಸಿದ್ಧಪಡಿಸುವ ಒಂದು ಪ್ರಯತ್ನ. ಅದರಲ್ಲಿ ಈ ಬಾರಿ ನಾವು ಪಂಚಾಯತ್ ಚುನಾವಣೆಯಲ್ಲಿ ತಕ್ಕ ಮಟ್ಟಿನ ಯಶಸ್ಸನ್ನು ಸಾಧಿಸಿದ್ದೇವೆ ಎಂದರು.
ಕುಲಾಲ್ ವರ್ಲ್ಡ್ ಡಾಟ್ ಕಾಂ ಬೆಂಬಲಿಸಲು ಕರೆ :
ಯುವಕರು ವಿಶ್ವಮಟ್ಟಕ್ಕೆ ತೆರೆದುಕೊಂಡು ತಾವು ಬೆಳೆದು, ತಮ್ಮವರನ್ನು ಸಂಘಟನೆಯನ್ನು ಬೆಳೆಸಬೇಕು. ಕುಲಾಲ ಸಮಾಜದ ಸೃಜನಶೀಲ ಬರಹಗಾರರ ವೇದಿಕೆ ಹಾಗೂ ಸಮಗ್ರ ಸುದ್ದಿ ಮನೆಯಾಗಿ ಮನೆ ಮಾತಾಗಿರುವ ಕುಲಾಲ್ ವರ್ಲ್ಡ್ ಡಾಟ್ ಕಾಂ ನ್ನು ಬೆಂಬಲಿಸಲು ಕರೆ ನೀಡಿದ ಅಣ್ಣಯ್ಯ ಕುಲಾಲ್, ವೆಬ್ ಸೈಟ್ ಸುದ್ದಿಯನ್ನು ಓದುವ ಮೂಲಕ ಕುಲಾಲ ಕುಂಬಾರ ಸಮುದಾಯದ ಆಗುಹೋಗುಗಳನ್ನ ಸುದ್ದಿ ಹಳಸುವ ಮುನ್ನವೇ ತಿಳಿದುಕೊಂಡು ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವಂತೆ ಯುವಕ ಯುವತಿಯರಿಗೆ ಕರೆಕೊಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಕರಾವಳಿಯ ಕುಲಾಲ ಕುಂಬಾರ ಸಮುದಾಯದ ನಾಯಕರಾದ ರಾಮ ಕುಲಾಲ್ ಪಕ್ಕಾಲು ಪೆರ್ಡೂರು, ನಿರಂಜನ್ ಸಳ್ವಾಡಿ, ನ್ಯಾಯವಾದಿ ಸುನೀಲ್ ಕುಲಾಲ್ , ಸತೀಶ್ ಕುಲಾಲ್ ನಡೂರು, ಸಂತೋಷ ಕುಲಾಲ್ ಪೆರ್ಡೂರು, ಫಾರೆಸ್ಟ್ ಆಫೀಸರ್ ಪ್ರಭಾಕರ ಕುಲಾಲ್, ಶಂಕರ ಕುಲಾಲ್ ವಕ್ವಾಡಿ, ತೇಜ ಕುಲಾಲ್, ಗಂಗೀ ಕುಲಾಲ್ತಿ ಮುಂತಾದವರು ಉಪಸ್ಥಿತದರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ನೂತನವಾಗಿ ಉಡುಪಿ ಜಿಲ್ಲಾ ಪಂಚಾಯತ್ ಗೆ ಹಾಲಾಡಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಪ್ರೀತಾ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರ, ಬೈಂದೂರು, ಬ್ರಹ್ಮಾವರ, ಉಡುಪಿ, ಕಾಪು ವಿಧಾನಸಭಾ ವ್ಯಾಪ್ತಿಯ ಸಾವಿರಾರು ಯುವ ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.
Posted by : Dinesh Bangera Irvathur/27/03/2016