ಪುಣೆ: ಕುಲಾಲ ಸಂಘ ಪಿಂಪ್ರಿ – ಚಿಂಚ್ವಾಡ್ ಇದರ ವಾರ್ಷಿಕೋತ್ಸವ ಹಾಗೂ ಕುಲಾಲ ರತ್ನ ಬಿರುದು ಪ್ರದಾನ ಸಮಾರಂಭವು ಫೆ. 28ರಂದು ಪಿಂಪ್ರಿಯ ಮದುಸೂಧನ್ ತೋಕೆ ಸಭಾಂಗಣದಲ್ಲಿ ಜರಗಿತು. ಸಂಘದ ಅಧ್ಯಕ್ಷ ನ್ಯಾಯವಾದಿ ಅಪ್ಪು ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಮಹಾತ್ಮಾ ಗಾಂಧೀಜಿ ಅವರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಶ್ರೇಷ್ಠ ಸಮಾಜ ಸೇವಕ, ಕುಲಾಲ ಬಂಧು ದಿ| ಡಾ| ಅಮ್ಮೆಂಬಳ ಬಾಳಪ್ಪ ಅವರಿಗೆ ಮರಣೋತ್ತರ ಕುಲಾಲ ರತ್ನ ಬಿರುದನ್ನು ಪ್ರದಾನಿಸಲಾಯಿತು.
ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಪ್ಪು ಮೂಲ್ಯ ಅವರು, ಶ್ರೇಷ್ಠ ಮಾನವತಾವಾದಿ, ಗಾಂಧಿವಾದಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿ| ಅಮ್ಮೆಂಬಳ ಬಾಳಪ್ಪ ಅವರು ಓರ್ವ ಧೀಮಂತ ವ್ಯಕ್ತಿಯಾಗಿ ಬಾಳಿ-ಬದುಕಿ ತನ್ನ ಜೀವನವನ್ನು ದೇಶಕ್ಕಾಗಿ ಹಾಗೂ ಬಡವರ ಕಲ್ಯಾಣಕ್ಕಾಗಿ ಮೀಸಲಿಟ್ಟವರು. ಇಂದಿನ ಪೀಳಿಗೆಗೆ ಪ್ರೇರಕ ಶಕ್ತಿಯಾಗಿರುವ ಅವರು ಅಪ್ರತಿಮ ದೇಶ ಪ್ರೇಮಿಯಾಗಿದ್ದು, ರಾಜಕೀಯ ದಿಂದ ದೂರ ಉಳಿದಿದ್ದರು. ಅನ್ಯರ ಸೇವೆಯಲ್ಲಿಯೇ ತೃಪ್ತಿ ಕಾಣುತ್ತಿದ್ದ ಅಪರೂಪದ ವ್ಯಕ್ತಿ ಅವರಾಗಿದ್ದರು. ಅವರ ನಿಸ್ವಾರ್ಥ ಸೇವಾ ಮನೋಭಾವ, ಸನ್ನಡತೆಯ ಹಾದಿಯನ್ನು ನಮ್ಮ ಮಕ್ಕಳು ಅನುಸರಿಸುವಂತಾಗಬೇಕು. ಈ ದಿಸೆ ಯಲ್ಲಿ ಅವರನ್ನು ಸದಾ ಸ್ಮರಿಸುವಂತೆ ಮಾಡಲು, ಅವರ ಕುರಿತಾದ ವಸ್ತು ಸಂಗ್ರಹಾಲಯವೊಂದನ್ನು ಎಲ್ಲರ ಸಹಕಾರದಿಂದ ಆರಂಭಿಸುವ ಬಗ್ಗೆ ಚಿಂತಿಸುತ್ತಿದ್ದೇವೆ. ಅಂತೆಯೇ ಸಮಾಜ ಬಾಂಧವರೆಲ್ಲರು ಸಂಘದ ಮೇಲೆ ಅಭಿಮಾನದಿಂದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರು ವುದು ಸಂತೋಷ ತಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದೊಂದಿಗೆ ಸಂಘವು ಬೆಳೆಯಲು ಸಾಧ್ಯ. ನಿಮ್ಮ ಸಹಕಾರ ನಿರಂತರವಾಗಿರಲಿ ಎಂದರು.
ಸಂಘದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಮಹಾಬಲ ಮೂಲ್ಯ ಅವರು, ನಮ್ಮ ಕಷ್ಟ ಸುಖಗಳಲ್ಲಿ ಪರಸ್ಪರ ಒಗ್ಗಟ್ಟಿನಿಂದ ವ್ಯವಹರಿಸಲು ಸಂಘಟನೆ ನಮಗೆ ಸೇತುವೆಯಾಗಿದೆ. ನಾವೆಲ್ಲರೂ ಸಂಘವನ್ನು ಅಭಿವೃದ್ಧಿಯತ್ತ ಸಾಗಿಸಬೇಕು ಎಂದು ನುಡಿದರು.
ಸಂಘದ ಉಪಾಧ್ಯಕ್ಷ ದೊಡ್ಡಣ್ಣ ಸಿ. ಮೂಲ್ಯ ಮಾತನಾಡಿ, ನಮ್ಮ ಸಂಘದ ಅಧ್ಯಕ್ಷರಾದ ಅಪ್ಪು$ ಮೂಲ್ಯ ಅವರ ಅವಿರತ ಹೋರಾಟದಿಂದ ನಮ್ಮ ಸಮಾಜಕ್ಕೆ ಸರಕಾರದಿಂದ ಓಬಿಸಿ ಮಾನ್ಯತೆ ಲಭಿಸಿದೆ. ಸಮಾಜ ಬಾಂಧ ವರು ಇದರ ಸದುಪಯೋಗವನ್ನು ಸರ ಕಾರದಿಂದ ಪಡೆಯಬೇಕು ಎಂದರು.
ಸಂಘದ ವಿಶ್ವಸ್ತ ರಮೇಶ್ ಕೊಡ್ಮಾನ್ಕರ್ ಮಾತನಾಡಿ, ಸಂಘದ ಸದಸ್ಯರು ನಮ್ಮ ಸಮಾಜದ ಬಂಧುಗಳನ್ನು ಅವರ ಮನೆಗಳಿಗೆ ತೆರಳಿ ಭೇಟಿ ಮಾಡಿ ಸಂಘದೊಂದಿಗೆ ಕೈಜೋಡಿಸುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಬೇಕು. ಇದರಿಂದ ಸಂಘಟನೆಯ ಧ್ಯೇಯೋದ್ಧೇಶಗಳು ಯಶಸ್ಸು ಕಾಣಲು ಸಾಧ್ಯ ಎಂದು ನುಡಿದರು.
ವೇದಿಕೆಯಲ್ಲಿ ನ್ಯಾಯವಾದಿ ಪದ್ಮನಾಭ ಬೆಳ್ಚಡ ಉಪಸ್ಥಿತರಿದ್ದರು. ಜೀವಮಾನದ ಸೇವೆಗಾಗಿ ಸಂಘದ ವಿಶ್ವಸ್ತ ಮಹಾಬಲ ಮೂಲ್ಯ ಮತ್ತು ರತ್ನಾ ಮೂಲ್ಯ ದಂಪತಿಯನ್ನು ಉಪಾಧ್ಯಕ್ಷ ಸದಾನಂದ ಮೂಲ್ಯ ಹಾಗೂ ರತ್ನಾವತಿ ಮೂಲ್ಯ ದಂಪತಿಗಳು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಜತೆ ಕೋಶಾಧಿಕಾರಿ ಜಯ ಮೂಲ್ಯ ಮತ್ತು ಮಂಗಳಾ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಸಾಲ್ಯಾನ್ ವಂದಿಸಿದರು. ಸಂಘದ ಪದಾಧಿಕಾರಿಗಳಾದ ಸಂಜೀವ ಮೂಲ್ಯ, ರವಿ ಕೆ ಮೂಲ್ಯ, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ರತಿ ಮೂಲ್ಯ, ಉಪ ಕಾರ್ಯಾಧ್ಯಕ್ಷೆ ಮೇಘನಾ ಆರ್. ಮೂಲ್ಯ, ಕೋಶಾಧಿಕಾರಿ ಮನಿಷಾ ಮೂಲ್ಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕೃಪೆ : ಉದಯವಾಣಿ