ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಸಿ.ಎಸ್.ಟಿ – ಮುಲುಂಡ್ – ಮಾನ್ ಖುರ್ದ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ಅಸಲ್ಪದ ಗೀತಾಂಬಿಕ ಮಂದಿರದ ಸಭಾಗೃಹದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಸ್ಥಳೀಯ ಸದಸ್ಯರಿಂದ ಭಜನೆ ಸಂಕೀರ್ತನೆಯನ್ನು ಆಯೋಜಿಸಲಾಗಿತ್ತು. ಕುಮಾರಿ ಸುರ್ವಿ ಎಸ್. ಹಂಡೇಲ್ ಇವರ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು .
ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಕುಲಾಲ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚೇತ ಡಿ. ಬಂಜನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ವೇದಿಕೆಯಲ್ಲಿ ಕುಲಾಲ ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಜೆ ಅಂಚನ್, ಕೋಶಾಧಿಕಾರಿ ಲತಾ ಎಸ್. ಮೂಲ್ಯ, ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಆರ್. ಬಂಜನ್, ಕಾರ್ಯದರ್ಶಿ ಮಲ್ಲಿಕಾ ಎಸ್. ಮೂಲ್ಯ , ಕೋಶಾಧಿಕಾರಿ ಜ್ಯೋತಿ ಎಸ್. ಹಂಡೇಲ್ ಉಪಸ್ಥಿತರಿದ್ದರು .
ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಆರ್. ಬಂಜನ್ ಸ್ವಾಗತಿಸುತ್ತಾ “ನಮ್ಮ ಈ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಪ್ರಥಮ ಬಾರಿಗೆ ಪ್ರತ್ಯೇಕವಾಗಿ ಹಳದಿ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದಕ್ಕೆ ಸ್ಪಂದಿಸಿ ಇಲ್ಲಿ ಸೇರಿದ ಮಹಿಳೆಯರನ್ನು ಕಂಡು ಹರ್ಷವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸದಸ್ಯರು ಪಾಲ್ಗೊಳ್ಳುವಲ್ಲಿ ಪ್ರಯತ್ನಿಸಬೇಕು. ಔಷಧೀಯ ಅಂಶ ಇರುವ ವರ್ಣ ದ್ರವ್ಯ ಅರಸಿನ ಮತ್ತು ದೈವಿಕ ಶಕ್ತಿ ಇರುವ ಕುಂಕುಮ ವಿನಿಮಯದ ಇಂದಿನ ಅರಸಿನ-ಕುಂಕುಮ ಕಾರ್ಯಕ್ರಮದ ಯಶಸ್ಸಿನಲ್ಲಿ ಸ್ಥಳೀಯ ಸಮಿತಿಯ ಸದಸ್ಯರ ಶ್ರಮ ಶ್ಲಾಘನೀಯ” ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಚೇತ ಡಿ. ಬಂಜನ್ “ಮಾನವ ದೇಹದ ಏಳು ಶಕ್ತಿ ಕೇಂದ್ರಗಳಲ್ಲಿ ಆರನೇಯ ಚಕ್ರವಾದ ಹಣೆಯನ್ನು ಮೂರನೆ ಕಣ್ಣು ಎಂದು ಹೇಳುತ್ತಾರೆ. ಕಣ್ಣು ಹುಬ್ಬುಗಳ ನಡುವೆ ಇರುವ ಬಿಂದುವನ್ನು ಆಧ್ಯಾತ್ಮಿಕವಾಗಿ ದೈವಿಕ ಶಕ್ತಿ ಇರುವ ಸ್ಥಳ ಎನ್ನಲಾಗುತ್ತದೆ. ಇಲ್ಲಿ ನಾವು ಹಚ್ಚುವ ಕುಂಕುಮವು ದೈವಿಕ ಶಕ್ತಿ ಹೊಂದಿದೆ. ಹಾಗೆಯೇ ಔಷಧೀಯ ಗುಣವುಳ್ಳ ಅರಸಿನವು ದೇಹದ ರೋಗರುಜಿನಗಳಿಗೆ ರಾಮಬಾಣವಾಗಿದ್ದು, ಆಯುರ್ವೇದದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.” ಎಂದು ಅರಸಿನ-ಕುಂಕುಮದ ವಿಶಿಷ್ಟತೆಯನ್ನು ವಿವರಿಸಿದರು.”ಪಾಲಕರು ಮಕ್ಕಳಿಗೆ ಸಂಘ ಪರಿವಾರಗಳ ಮಹತ್ವವನ್ನು ತಿಳಿಸಿ ಅವರನ್ನು ಸಂಘದ ಕಾರ್ಯಕ್ರಮಗಳಿಗೆ ಒಟ್ಟಿಗೆ ಕರೆತರಬೇಕು. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಆರೋಗ್ಯ ವೃದ್ದಿಸುತ್ತದೆ” ಎಂದು ತಿಳಿಸಿದರು.
ಕುಲಾಲ ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಜೆ ಅಂಚನ್ ರವರು ಮಾತನಾಡುತ್ತಾ “ಎಲ್ಲಾ ಸ್ಥಳೀಯ ಮಹಿಳಾ ವಿಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಮಹಿಳಾ ವಿಭಾಗದ ವತಿಯಿಂದ ಇನ್ನೂ ಹೆಚ್ಚು ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಮಹಿಳೆಯರನ್ನು ಪ್ರೋತ್ಸಾಹಿಸಬೇಕು. ದೈವಿಕತೆಯ ಪ್ರತೀಕವಾದ ಹಳದಿ ಕುಂಕುಮದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರ ಉತ್ಸುಕತೆ ಕಂಡು ಖುಷಿಯಾಗುತ್ತಿದೆ. ಪ್ರತಿಯೊಬ್ಬರೂ ಬೇಧ-ಭಾವ ಮರೆತು ಪ್ರೀತಿ ವಾತ್ಸಲ್ಯದಿಂದ ಒಟ್ಟು ಸೇರಿ ಆಯೋಜಿಸಿದ ಪ್ರತಿಯೊಂದು ಕಾರ್ಯಗಳು ಖಂಡಿತಾ ಯಶಸ್ವಿಯಾಗುತ್ತದೆ. ಸಂಘದ ಮುಖಾಂತರ ಸಿಗುವ ಶೈಕ್ಷಣಿಕ ಮತ್ತು ವೈದ್ಯಕೀಯ ಸವಲತ್ತುಗಳ ಕುರಿತು ಅಗತ್ಯವಿರುವ ಸಮಾಜ ಭಾಂದವರಿಗೆ ತಿಳಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು.” ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ರವರು ಮಾತನಾಡುತ್ತಾ “ಈ ಪರಿಸರದಲ್ಲಿ ವಾಸವಾಗಿರುವ ಇನ್ನೂ ಹೆಚ್ಚು ಕುಲಾಲರನ್ನು ಗುರುತಿಸುವ ಪ್ರಯತ್ನ ನಾವು ಮಾಡಬೇಕಾಗಿದೆ. ಈವರೆಗೆ ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದ್ದು, ಪರಿಸರದ ಪ್ರತಿಯೊಂದು ಮನೆಗೂ ಕುಲಾಲ ಸಂಘದ ಕಾರ್ಯವೈಖರಿಗಳನ್ನು ತಲುಪಿಸುವ ಕಾರ್ಯಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಲಾಲ ಭವನದ ಧನಸಂಗ್ರಹದ ಕಾರ್ಯದಲ್ಲೂ ಮಹಿಳೆಯರು ಪಾಲ್ಗೊಂಡು, ಆದಷ್ಟು ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವಲ್ಲಿ ಸಹಕರಿಸಿ” ಎಂದು ನುಡಿದರು.
ಈ ಸಂದರ್ಭದಲ್ಲಿ ತನ್ನ 48ನೇ ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆ ಬರೆದು ತೇರ್ಗಡೆಗೊಂಡ ಶಾಂತ ಕೆ. ಮೂಲ್ಯ ಮತ್ತು ಸ್ಥಳೀಯ ಪರಿಸರದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಮಮತಾ ಜಿ ಸಾಲ್ಯಾನ್ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಪರಸ್ಪರ ಹಣೆಗೆ ಅರಸಿನ ಕುಂಕುಮ ಹಚ್ಚಿ ಹಳದಿ-ಕುಂಕುಮ ಆಚರಿಸಿದರು ಹಾಗೂ ಸ್ಥಳೀಯ ಸದಸ್ಯರ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಕವಿತಾ ಸಿ. ಹಂಡಾ , ನಯನಾ ನಟೇಶ್ ಮತ್ತು ಪವಿತ್ರ ಮೂಲ್ಯ ನಿರೂಪಿಸಿದರೆ , ಜ್ಯೋತಿ ಎಸ್. ಹಂಡೇಲ್ ಧನ್ಯವಾದ ಅರ್ಪಿಸಿದರು.
ಚಿತ್ರ-ವರದಿ : ಶಶಿಕುಮಾರ್ ಕುಲಾಲ್