ಕಟ್ಟಡದಿಂದ ಬಿದ್ದು ಮೃತಪಟ್ಟ ಯುವಕನ ಅಂಗಾಂಗ ದಾನ ಮಾಡಿದ ಹೆತ್ತವರು
ಮಂಗಳೂರು: ಆತನದಿನ್ನೂ 21ರ ಹರೆಯ, ಮುಂದೆ ಬಾಳಿ ಬದುಕಬೇಕಿತ್ತು. ಆದರೆ ವಿಧಿಲಿಖಿತ ಬೇರೆಯದ್ದೇ ಇತ್ತು. ಅದೊಂದು ಕರಾಳ ದಿನ ಕಟ್ಟಡದಿಂದ ಕೆಳಗೆ ಆಕಸ್ಮಿಕವಾಗಿ ಬಿದ್ದ ಆತ ಮತ್ತೆ ಮೇಲೇಳಲೇ ಇಲ್ಲ. ಆದರೆ ಆತನ ಹೆತ್ತವರು ತಮ್ಮ ಮಗನನ್ನು ಜೀವಂತವಾಗಿರಿಸಲು ಬಯಸಿದರು. ಅದೇ ಕಾರಣಕ್ಕೆ ಆತನ ಅಂಗಾಂಗಳನ್ನು ದಾನ ಮಾಡಲು ಮುಂದಾದರು.
ಹೀಗೆ ಅಲ್ಲದ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಆದರೂ ಅಂಗಾಂಗ ದಾನ ಮಾಡುವ ಮೂಲಕ ದೀರ್ಘಜೀವನ ಪಡೆದ ಯುವಕನ ಹೆಸರು ವಿನೀತ್ ರಾಜ್ ಮೂಲ್ಯ .
ಮಂಜೇಶ್ವರದ ಕಣಿಯೂರು, ಉಜೈರ್ ನ ನಿವಾಸಿಗಳಾದ ಕೃಷ್ಣ ಮೂಲ್ಯ ಮತ್ತು ಗೀತಾ ದಂಪತಿಯ ಹಿರಿಯ ಮತ್ತು ಏಕಮಾತ್ರ ಪುತ್ರನಾಗಿದ್ದ ವಿನೀತ್ ಐಟಿಐ ಮುಗಿಸಿ ಮಂಗಳೂರಿನಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ. ಆ ಕ್ರೂರ ದಿನದಂದು ಆತ ಮಧ್ಯಾಹ್ನ ಊಟಕ್ಕೆಂದು ಕೆಲಸ ನಿಲ್ಲಿಸಿ ಇನ್ನೇನು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.
ವಿನೀತ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಎಜೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಂಗಳವಾರದಂದು ಆತನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು.
ಒಂದೆಡೆ ಮಗನ ಸಾವಿನಿಂದ ದಿಕ್ಕು ಕಾಣದಂತಾದ ಕುಟುಂಬದ ರೋದನ ಮುಗಿಲು ಮುಟ್ಟಿದ್ದರೆ ಮತ್ತೊಂದೆಡೆ ಮಗನ ಅಂಗಾಂಗಗಳನ್ನು ದಾನ ಮಾಡುವ ಮಹತ್ವದ ಮತ್ತು ಆದರ್ಶನೀಯ ನಿರ್ಧಾರವನ್ನು ಕುಟುಂಬ ತೆಗೆದುಕೊಂಡಿತು.
ಅದಕ್ಕೆ ಅನುವು ಮಾಡಿಕೊಡಲು ಎಜೆ ಆಸ್ಪತ್ರೆಯ ವೈದ್ಯರು ಸಕಲ ಸಿದ್ಧತೆಗಳನ್ನೂ ನಡೆಸಿದರು.
ವಿನೀತ್ ನ ಯಕೃತನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿರುವ ರೋಗಿಗೆ ಅಳವಡಿಸುವ ಸಲುವಾಗಿ ಬೆಂಗಳೂರಿನ ವೈದ್ಯರ ತಂಡ ಎಜೆ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ಆಗಮಿಸಿತು.
ಇದಕ್ಕಾಗಿ ಎಜೆ ಆಸ್ಪತ್ರೆಯಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಮತ್ತು ಹೆದ್ದಾರಿಯಲ್ಲಿ ಮುಂಜಾನೆ 6 ಗಂಟೆಗೆ ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ವಿಮಾನದ ಮೂಲಕ ಯಕೃತನ್ನು ಬೆಂಗಳೂರಿಗೆ ಸಾಗಿಸಲಾಯಿತು.
ವಿನೀತ್ ನ ಒಂದು ಕಿಡ್ನಿಯನ್ನು ಈಗಾಗಲೇ ರೋಗಿಯೊಬ್ಬರಿಗೆ ದಾನ ಮಾಡಲಾಗಿದ್ದು ಇನ್ನೊಂದು ಕಿಡ್ನಿ ಕೂಡಾ ಶೀಘ್ರದಲ್ಲೇ ದಾನ ಮಾಡಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಂತೂ ದೇಹ ನಶ್ವರ ಎಂಬ ಮಾತು ನಿಜವಾಗಿದ್ದರೂ ವಿನೀತ್ ಸಾವಿನ ನಂತರ ಇತರರ ಬದುಕಿಗೆ ಜೀವ ತುಂಬುವ ಮೂಲಕ ತನ್ನ ದೇಹವನ್ನೂ ಅಮರಗೊಳಿಸಿದ.