ಬೆಂಗಳೂರು : ಕನಕಪುರ ತಾಲೂಕಿನ ಕೆಂಪಯ್ಯನದೊಡ್ಡಿ ಗ್ರಾಮದ ಕುಂಬಾರ ಯುವಕ ಕೆ.ಎಸ್.ವಿದ್ಯಾಭರಣ ಮಿಸ್ಟರ್ ಇಂಡಿಯಾ ಸೌತ್-2016 ಪಟ್ಟ ತನ್ನದಾಗಿಸಿಕೊಂಡಿದ್ದಾರೆ. ಕಳೆದ ಫೆ. 14 ರಂದು ಸಿಲ್ವರ್ ಸ್ಟಾರ್ ಪ್ರೊಡಕ್ಷನ್ ಸಂಸ್ಥೆ ವತಿಯಿಂದ ಮಿಸ್ಟರ್ ಅಂಡ್ ಮಿಸ್ ಸೌತ್ ಇಂಡಿಯಾ ಸ್ಪರ್ಧೆ ಆಯೋಜಿಸಲಾಗಿತ್ತು.
ಬೆಂಗಳೂರಿನ ಕ್ಯಾಪಿಟಲ್ ಹೋಟೇಲ್ ನಲ್ಲಿ ಜರುಗಿದ ಸ್ಪರ್ಧೆಯಲ್ಲಿ 150 ಸ್ಪರ್ಧಿಗಳು ಭಾಗವಹಿಸಿದ್ದರು. ನಂತರದ ಸುತ್ತಿನಲ್ಲಿ ನಂತರ 22 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಮಿಸ್ಟರ್ ಅಂಡ್ ಮಿಸ್ ಸೌತ್ ಇಂಡಿಯಾ ಕಿರೀಟವನ್ನು ವಿದ್ಯಾಭರಣ ಮತ್ತು ಆಶಾ ಎಂಬುವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮಿಸ್ಟರ್ ಕರ್ನಾಟಕ ಕಿರೀಟವನ್ನು ದಾವಣಗೆರೆಯ ಯುವಕ ಮಯೂರ್ ಎಂಬುವರು ತನ್ನದಾಗಿಸಿಕೊಂಡಿದ್ದಾರೆ. ಮಿಸ್ ಕರ್ನಾಟಕ ಪಟ್ಟಕ್ಕೆ ಜ್ಯೂಹಿ ಭಾರತಿ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಮಿಸ್ ಇಂಡಿಯಾ ಗ್ಲಾಮರಸ್ ನ ಮೇದಿನಿಪಾಂಡೆ, ಡೈರೆಕ್ಟರ್ ಸ್ಯಾಂಡಲ್ ವುಡ್ ಮಿಸ್ಟರ್ ಅನಂತರಾಜ್, ನಟಿ ಕೀರ್ತನಾ ಪೋಡವಾಲ್, ನಿರ್ದೇಶಕ ಅಣಜಿ ನಾಗರಾಜ್, ಕೆಆರ್ ಸಿ ಸೆಕ್ರೆಟರಿ ಎನ್.ಎಂ.ಸುರೇಶ್ ಭಾಗವಹಿಸಿದ್ದರು. ಕೆ.ಎಸ್.ವಿದ್ಯಾಭರಣ ಅವರು ಕರ್ನಾಟಕ ರಾಜ್ಯ ಕುಂಬಾರ ಸಂಘದ ಅದ್ಯಕ್ಷರಾದ ಶಿವಕುಮಾರ್ ಚೌಡ ಶೆಟ್ಟಿ ಹಾಗು ಶಶಿಕಲಾ ದಂಪತಿಗಳ ಸುಪುತ್ರ.
ಸಿನಿಮಾ ನಾಯಕನಾಗಿ ಆಯ್ಕೆ
ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾಭರಣ ಸಿನಿಮಾ ರಂಗಕ್ಕೆ ಪಾದಾರ್ಪಣೆಗೈಯ್ಯುತ್ತಿದ್ದಾರೆ. ಖ್ಯಾತ ಪತ್ರಕರ್ತ, ಸಿನಿಮಾ ನಿರ್ಮಾಪಕ ಅಗ್ನಿ ಶ್ರೀಧರ್ ಅವರ ಬಳಗ `ಅಂಡರ್ ವರ್ಲ್ಡ್’ ಎಂಬ ಬಹು ಕೋಟಿ ಬಜೆಟ್ ನ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ.