ಬೆಳ್ತಂಗಡಿ: ಆ ವ್ಯಕ್ತಿ ಇಲ್ಲಿನ ತಾಲೂಕು ಕಚೇರಿಯ ಸಮೀಪ ತಮ್ಮ ಕರ್ತವ್ಯ ಮಾಡುತ್ತಿದ್ದರೆ ಯಾವುದೋ ಕಾರಣದಿಂದ ಅವರ ಕೈ ಬೆರಳುಗಳು ಊನ ಆಗಿರಬೇಕು ಎಂದು ಭಾವಿಸಿದವರೇ ಅಧಿಕ. ಆದರೆ ಊನಗೊಂಡ ಕೈ ಹಾಗೂ ಕಾಲು ಬೆರಳುಗಳ ಹಿಂದೆ ದೇಶಭಕ್ತಿಯ ಸತ್ಯ ಇದೆ, ಬೆರಳು ಕರಗಿದ ಕಥನ ಇದೆ, ದೇಶಕ್ಕಾಗಿ ದೇಹ ಸವೆಸಿದ ಹೆಮ್ಮೆ ಇರುವುದು ಅನೇಕರಿಗೆ ಗೊತ್ತಿಲ್ಲ. ಅವರ ಎರಡೂ ಕೈಗಳ, ಕಾಲುಗಳ ಬೆರಳುಗಳು ಕರಗಿವೆ. ನಡೆಯುವಾಗ ದೇಹದೊಳಗೆ ಅದೇನೋ ಯಾತನೆ, ಆಯಾಸ. ನರಗಳು ಕೂಡ ಸುವ್ಯವಸ್ಥಿತವಾಗಿಲ್ಲ.
ಬೆಳ್ತಂಗಡಿ ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು ನಾವರ, ಕುದ್ಯಾಡಿ, ಕುಕ್ಕೇಡಿ, ನಿಟ್ಟಡೆ ಗ್ರಾಮಗಳ ಗ್ರಾಮ ಕರಣಿಕ, ಮಡಂತ್ಯಾರು ಸಮೀಪದ ಮಾಲಾಡಿಯ ನವುಂಡದ ಉಮೇಶ್ ಕುಲಾಲ್ (40) ಅವರು 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ತಮ್ಮ ಸೇನಾ ಸೇವಾವಧಿಯ ಬಹುತೇಕ ಅವಧಿಯನ್ನು ಚಳಿ ಪ್ರದೇಶದಲ್ಲಿ – 20, -40 ಡಿಗ್ರಿ ಚಳಿ ಪ್ರದೇಶದಲ್ಲಿ ನಿರಂತರ ಹಿಮಪಾತ ಆಗುವ ಪ್ರಾಂತ್ಯಗಳಲ್ಲೇ ಕಳೆದ ಕಾರಣ ಉಮೇಶ್ ಅವರ ದೇಹ ಚಳಿಗೆ ಕುಗ್ಗಿದೆ.
ನೆನಪುಗಳ ಸುರುಳಿ
30 ವರ್ಷದಲ್ಲಿ 869 ಮಂದಿ ಬಲಿಯಾದ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಾಗೂ ಚಳಿಪ್ರದೇಶದ ಮಿಲಿಟರಿ ದಿನಗಳ ಕುರಿತು ಅವರ ಮಾತುಗಳಲ್ಲೇ ಕೇಳುವುದಾದರೆ; ಸಿಯಾಚಿನ್ ಸಮೀಪದ ತಂಗ್ದಾರ್ ಸೆಕ್ಟರ್ನಲ್ಲಿ ನನಗೆ 1996ರಿಂದ ಕರ್ತವ್ಯ ನಿಯೋಜಿಸಲಾಗಿತ್ತು. ಕರ್ತವ್ಯ ಮುಗಿಸಿ ಒಂದು ಪರ್ವತದಿಂದ ಇನ್ನೊಂದು ಪರ್ವತದ ಕಡೆಗೆ ನಡೆದು ಬರುತ್ತಿದ್ದೆವು. ದಿಢೀರಾಗಿ ಹಿಮದ ಬೆಟ್ಟಗಳೇ ಕುಸಿದು ಬಿದ್ದಂತೆ ಭಾರೀ ಗಾತ್ರದ ಕಾಂಕ್ರೀಟ್ ಸ್ಲಾಬ್ನಂತಹ ಹಿಮದ ಗಟ್ಟಿಗಳು ಬಿದ್ದವು. ದೊಡ್ಡದರಲ್ಲಿ ಆಗುವ ಅವಘಡ ಸಣ್ಣದರಲ್ಲಿ ಆಗಿ ನಾವು ಪಾರಾದೆವು. ಅಂತಹ ಪ್ರದೇಶದಲ್ಲಿ ವರ್ಷಾನುಕಾಲ ಕರ್ತವ್ಯ ನಿರ್ವಹಿಸುವಾಗ ನನ್ನ ಕೈ – ಕಾಲುಗಳ ಬೆರಳುಗಳು ಕರಗಿದವು.
ಜಮ್ಮು-ಕಾಶ್ಮೀರದ ಲಡಾಖ್ ಪ್ರಾಂತ್ಯದಲ್ಲಿ, ಭಾರತದ ಗಡಿಯ ತುತ್ತತುದಿಯಲ್ಲಿ; ಸಮುದ್ರ ಮಟ್ಟದಿಂದ 21,000 ಅಡಿ ಎತ್ತರದಲ್ಲಿದೆ ಸಿಯಾಚಿನ್. 6,330 ಅಡಿ ಎತ್ತರದ ಕರ್ನಾಟಕದ ಅತಿ ಎತ್ತರದ ಪರ್ವತ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಗಿಂತ ಸಿಯಾಚಿನ್ನ ಎತ್ತರ ಮೂರು ಪಟ್ಟು. ಭಾರತ ಹಾಗೂ ಪಾಕಿಸ್ಥಾನ ನಡುವಣ ಗಡಿ ನಿಯಂತ್ರಣ ರೇಖೆ ಅಂತ್ಯವಾಗುವುದು ಇಲ್ಲೇ. ಕ್ಯಾಂಪಿನಿಂದ ಒಂದು ಎಸ್ಟಿಡಿ ಕರೆ ಮಾಡಬೇಕಿದ್ದರೆ 50 ಕಿ.ಮೀ. ದೂರ ಬರಬೇಕು. ಅಲ್ಲಿ ಸಾಲಿನಲ್ಲಿ ನಿಲ್ಲಬೇಕು. ಹಾಗೆ ನಿಂತಾಗ ಬೇರೆಯವರದ್ದು ಮಾತನಾಡಿ ಮುಗಿವಾಗ ನಮ್ಮ ಕ್ಯಾಂಪ್ಗೆ ಮರಳುವ ಸಮಯ ಆಗಿದ್ದರೆ ಮತ್ತೆ ದೂರವಾಣಿ ಕರೆ ಮಾಡಲು ಅದೆಷ್ಟೋ ದಿನ ಕಾಯಬೇಕು. ಆ ದಿನಗಳಲ್ಲಿ ಮೊಬೈಲ್ ಕೂಡ ಇರಲಿಲ್ಲ. .
ಊಟ ತಿಂಡಿ ಇಲ್ಲ
ಇಲ್ಲಿ ಅಕ್ಟೋಬರ್ನಿಂದ ಹಿಮಪಾತ ಆರಂಭವಾಗುತ್ತದೆ. ಡಿಸೆಂಬರ್ ಅನಂತರ -40 ಡಿಗ್ರಿಯ ಚಳಿ ಪ್ರಾರಂಭ ಆಗುತ್ತದೆ. ತಿನ್ನಲು ಖರ್ಜೂರ, ಕಾಜು, ಬಾದಾಮಿ ಮೊದಲಾದ ಒಣ ಹಣ್ಣುಗಳು, ರೆಡಿಮೇಡ್ ಆಹಾರ ಮಾತ್ರ. 2003ರಲ್ಲಿ ಜಮ್ಮುವಿನ ದ್ರಾಸ್ನಲ್ಲಿ 4 ತಿಂಗಳ ಕಾಲ ಇದ್ದೆ. ಲೇಹ್ ಲಡಾಕ್ನಲ್ಲಿದ್ದೆ. 2 ವರ್ಷಗಳ ಕಾಲ ಜಮ್ಮು ಪಾಕ್ ಗಡಿ ಅಕ್ನೂರ್ ಸೆಕ್ಟರ್ನಲ್ಲಿದ್ದೆ. ಬಳಿಕ ಅರುಣಾಚಲಪ್ರದೇಶದ ತವಾಂಗ್ನಲ್ಲಿ ಚೀನಾ ಭಾರತ ಗಡಿಯಲ್ಲಿದ್ದೆ. ಕಾರ್ಗಿಲ್ ಯುದ್ಧಕ್ಕೆ ಐದು ತಿಂಗಳು ಇರುವಾಗ ಹರಿದ್ವಾರದ ಯುನಿಟ್ನಿಂದ ಮತ್ತೆ ಸಿಯಾಚಿನ್ ಪ್ರಾಂತ್ಯಕ್ಕೆ ಹೋಗುವ ಸಂದರ್ಭ ಬಂತು. ಆದರೆ ನನ್ನ ದೇಹದಲ್ಲಿ ಚಳಿಯಿಂದಾಗಿ ಆದ ಬದಲಾವಣೆಯಿಂದಾಗಿ ರಾಜಸ್ಥಾನಕ್ಕೆ ಕಳುಹಿಸಿದರು.
ಪಾರಾದೆವು
1997ರಲ್ಲಿ ಪಾಕ್ನಿಂದ ಸಿಡಿಗುಂಡುಗಳು ಜಾಸ್ತಿ ಬೀಳುತ್ತಿತ್ತು. ನಾನು ಸೇನಾ ವಸ್ತುಗಳನ್ನು ಸಾಗಿಸುವ ವಾಹನ ಚಾಲಕನಾಗಿದ್ದೆ. ನಾವು ತಂಗ್ದಾರ್ ಸೆಕ್ಟರ್ನಲ್ಲಿ ಸೇನಾ ವಾಹನ ನಿಲ್ಲಿಸಿದ್ದಾಗ ಅಲ್ಲೇ ಪಕ್ಕದಲ್ಲಿ ಪಾಕ್ ಬಾಂಬ್ ಸಿಡಿದಿತ್ತು. ನಾವು ಪಕ್ಕದ ವಾಹನದಡಿಯಲ್ಲಿ ಮಲಗಿ ರಕ್ಷಿಸಿಕೊಂಡೆವು. ನನ್ನ ಜತೆಗಿದ್ದ ಯೋಧನ ಬಟ್ಟೆಯೆಲ್ಲಾ ಛಿದ್ರಗೊಂಡಿತು. ಹೀಗೆ ನೆನಪಿನ ಸುರುಳಿ ಬಿಚ್ಚಿದ ಉಮೇಶ್ ಅವರಿಗೆ ಪತ್ನಿ, ಇಬ್ಬರು ಪುತ್ರರು. ಮಡಂತ್ಯಾರ್ನಲ್ಲಿ ಹೈಸ್ಕೂಲು ಮುಗಿಸಿ, ಪುಂಜಾಲಕಟ್ಟೆ ಸರಕಾರಿ ಕಾಲೇಜಿನಲ್ಲಿ ಪಿಯುಸಿ ಮಾಡಿದ್ದರು.
ಚಳಿ ಪ್ರದೇಶದಲ್ಲೇ
ನನ್ನ ಸೇನಾವಧಿಯ ಹೆಚ್ಚಿನ ಅವಧಿ ಚಳಿ ಪ್ರದೇಶಗಳಲ್ಲೇ ನಡೆದಿದೆ. 1996-98 ತಂಗ್ದಾರ್ ಸೆಕ್ಟರ್ನಲ್ಲಿದ್ದೆ. ಮೂರು ತಿಂಗಳ ಕಾಲ ಹಿಮಭೂಮಿಯಲ್ಲಿದ್ದು ನಂತರ ಬೇಸ್ಕ್ಯಾಂಪ್ಗೆ ಬಂದಿದ್ದೆ. ಸಿಯಾಚಿನ್ನಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 50 ಡಿಗ್ರಿ ಸೆಲ್ಸಿಯಸ್ವರೆಗೂ ಇರುತ್ತದೆ. ಉಷ್ಣಾಂಶ ಶೂನ್ಯ ಡಿಗ್ರಿಗೆ ಕುಸಿಯುತ್ತಿದ್ದಂತೆ ನೀರು ಹೆಪ್ಪುಗಟ್ಟುತ್ತದೆ. ಉಷ್ಣಾಂಶ ಮೈನಸ್ 50 ಡಿಗ್ರಿವರೆಗೂ ಕುಸಿಯುವುದರಿಂದ ಮೂಳೆ ನಡುಗಿಸುವಂತಹ ಚಳಿ ಅಲ್ಲಿರುತ್ತದೆ. ಜತೆಗೆ ಸೂರ್ಯನ ಶಾಖ ಬಿದ್ದರೆ ಚರ್ಮ ಸುಟ್ಟುಹೋಗುತ್ತದೆ. ಶೂನ್ಯಕ್ಕಿಂತ ಕೆಳಗಿನ ತಾಪಮಾನ ಹಾಗೂ ಶೀತ ಗಾಳಿಯಿಂದಾಗಿ ಯೋಧರು ಖನ್ನತೆಗೂ ಒಳಗಾಗುತ್ತಾರೆ. ಇಲ್ಲಿ ಮಾತನಾಡಲೂ ಕಷ್ಟ ಪಡಬೇಕಾದ ಪರಿಸ್ಥಿತಿ ಇದೆ.
– ಲಕ್ಷ್ಮೀ ಮಚ್ಚಿನ, ಬೆಳ್ತಂಗಡಿ (ಉದಯವಾಣಿ)