ಮಂಗಳೂರು : ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ನವಜಾತ ಶಿಶುವಿನ ಚಿಕಿತ್ಸೆಗೆ `ಕುಲಾಲ್ ವರ್ಲ್ಡ್ ಡಾಟ್ ಕಾಂ’ನ ವಾಟ್ಸ್ ಆಪ್ ಗ್ರೂಪಿನ ಸದಸ್ಯರು ಧನ ಸಂಗ್ರಹಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕುಲಾಲ್ ವರ್ಲ್ಡ್, ದೋಹಾ ಕುಲಾಲ್ಸ್ ಹಾಗೂ ಬೆಹರೈನ್ ಕುಲಾಲ ಮಿತ್ರರು ಸಂಯುಕ್ತವಾಗಿ ಸಂಗ್ರಹಿಸಿದ ಒಟ್ಟು 76,200 ರೂಪಾಯಿಯನ್ನು ಫೆ. 17ರಂದು ಮಗುವಿನ ಪೋಷಕರಿಗೆ ಹಸ್ತಾಂತರಿಸಿದರು.
ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಸಂತೋಷ ಮೂಲ್ಯ ಅವರ ಪತ್ನಿ ಪ್ರಫುಲ್ಲ ಅವರು ಜನವರಿ 27ರಂದು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹುಟ್ಟುವಾಗಲೇ ಮಗು ಶ್ವಾಸನಾಳದ ತೊಂದರೆಯಿಂದ ಬಳಲುತ್ತಿರುವುದು ಪರೀಕ್ಷೆಯಿಂದ ಕಂಡು ಬಂದಿತ್ತು. ಆ ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅಲ್ಲಿಯ ವೈದ್ಯರು ಚಿಕಿತ್ಸೆಗೆ ಸುಮಾರು 1,25,000 ರೂಪಾಯಿ ವೆಚ್ಚ ತಗುಲಬಹುದು ಎಂದು ತಿಳಿಸಿದ್ದರು. ಕೂಲಿ ಕೆಲಸ ಮಾಡಿ ಜೀವಿಸುತ್ತಿರುವ ಸಂತೋಷ ಮೂಲ್ಯ ಕುಟುಂಬ ಇಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಅಸಮರ್ಥರಾಗಿದ್ದು, ಸಹೃದಯಿ ದಾನಿಗಳ ನೆರವು ಯಾಚಿಸಿದ್ದರು.
ಸಂತೋಷ ಮೂಲ್ಯ ಅವರ ಸ್ಥಿತಿಯನ್ನು ಅರಿತು, ಮಾನವೀಯ ನೆಲೆಯಲ್ಲಿ ಸ್ಪಂದಿಸಿದ ದೋಹಾ ಕತಾರ್ ಕುಲಾಲ್ ಫ್ರೆಂಡ್ಸ್ 25,009 ರೂ. ಮತ್ತು ಬೆಹರೈನ್ ಕುಲಾಲ್ ಫ್ರೆಂಡ್ಸ್ ರೂ. 25,000 ಹಾಗೂ `ಕುಲಾಲ್ ವರ್ಲ್ಡ್’ ಸದಸ್ಯರು 26,191 ರೂ. ಹೀಗೆ ಒಟ್ಟು 76,200 ರೂಪಾಯಿ ಸಂಗ್ರಹಿಸಿ ,ಫೆ. 17ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ತೆರಳಿ ಹಣವನ್ನು ಸಂತೋಷ ಮೂಲ್ಯ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಣ ಸಂಗ್ರಹ ಮತ್ತು ಹಸ್ತಾಂತರದ ಜವಾಬ್ದಾರಿ ವಹಿಸಿಕೊಂಡಿದ್ದ `ಕುಲಾಲ್ ವರ್ಲ್ಡ್’ ವಾಟ್ಸ್ ಆಪ್ ಗ್ರೂಪಿನ ಸದಸ್ಯ ಹೇಮಂತ್ ಕುಮಾರ್ ಮತ್ತು ಗಣೇಶ್ ಕುಲಾಲ್ , ರಿತೇಶ್, ಉದಯ್ ಕುಲಾಲ್, ಸಂದೀಪ್ ಕುಲಾಲ್ , ಸತೀಶ್ ಕುಲಾಲ್ ನಡೂರು, ಸಂತೋಷ್ ಕುಲಾಲ್ ಪೆರ್ಡೂರು ಮುಂತಾದವರು ಉಪಸ್ಥಿತರಿದ್ದರು.
ಸಂತೋಷ ಮೂಲ್ಯ ಅವರಿಗೆ ಸಹಾಯ ಮಾಡಲಿಚ್ಛಿಸುವ ದಾನಿಗಳು ಅವರ ಸಿಂಡಿಕೇಟ್ ಬ್ಯಾಂಕ್ ನ ಬೈಲೂರು ಶಾಖೆಯ ಉಳಿತಾಯ ಖಾತೆ ಸಂಖ್ಯೆ : 01212250009615 IFSC CODE : SYNB0000121 ಗೆ ಹಣ ಕಳಿಸಿಕೊಡಲು ವಿನಂತಿಸಲಾಗಿದೆ. ಸಂತೋಷ ಮೂಲ್ಯ ಅವರ ಮೊಬೈಲ್ ಸಂಖ್ಯೆ : 9164341629.