ಪುತ್ತೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ತುಳು ಚಲನಚಿತ್ರವು ಫೆ. ೫ರಂದು ತೆರೆ ಕಂಡಿದ್ದು, ಚಿತ್ರದ ತಾರಾಗಣದಲ್ಲಿ ಕುಲಾಲ ಸಮಾಜದದವರಾದ ಪುತ್ತೂರಿನ ಕವಿತಾ ದಿನಕರ್ ಅನಿಲಡೆ ಹಾಗೂ ಮನೋಜ್ ಅಂಗರಾಜೆ ಅಭಿನಯಿಸಿದ್ದಾರೆ. ಪುತ್ತೂರಿನ ಅರುಣಾ ಚಿತ್ರಮಂದಿರ ಸೇರಿದಂತೆ ಮಂಗಳೂರು, ಉಡುಪಿ, ಮಣಿಪಾಲ, ಬಿ.ಸಿ. ರೋಡ್ ನಕ್ಷತ್ರ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ.
ಚೆನ್ನೈನಲ್ಲಿ ನೆಲೆಸಿರುವ ಮೂಲತಃ ಎರ್ಮಾಳ್ನವರಾದ ಅನಂತರಾಮರಾವ್ ಎರ್ಮಾಳ್ ನಿರ್ಮಾಣದ ನಾಗವೆಂಕಟೇಶ್ ನಿರ್ದೇಶನದಲ್ಲಿ ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡಿರುವ ಜೆ.ಜಿ.ಕೃಷ್ಣ ಅವರ ಛಾಯಾಗ್ರಹಣ, ರಿಸೆಲ್ ಸಾಹಿ ಅವರ ಸಂಗೀತ, ಅಶೋಕ್ರಾಜ್ ಅವರ ನೃತ್ಯ ಈ ಸಿನಿಮಾಕ್ಕೆ ಇದೆ. ಸಿದ್ದರಾಜ್ ಅವರ ಸಾಹಸ ನಿರ್ದೇಶನದಲ್ಲಿ ಎರಡು ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಕರಾವಳಿಯಲ್ಲಿ ಬೀಡಿ ಉದ್ಯಮ ಬಹು ದೂಡ್ಡ ಉದ್ಯಮವಾಗಿ ಬೆಳೆದಿದ್ದು ಇದರ ಹಿಂದಿನ ನಿಜವಾದ ಆಶಯ ಹಾಗು ಪ್ರಸಕ್ತ ಬದಲಾದ ಸನ್ನಿವೇಶವನ್ನು ಚಿತ್ರದಲ್ಲಿ ವಿಭಿನ್ನವಾಗಿ ಸೃಷ್ಠಿಸಲಾಗಿದೆ. ನಾಯಕ ನಟನಾಗಿ ಶ್ರವಂತ್ ಹಾಗೂ ನಾಯಕಿ ನಟಿಯಾಗಿ ಚಿರಶ್ರೀ ಅಂಚನ್ ಮಿಂಚಿದ್ದಾರೆ.
ಕವಿತಾ ದಿನಕರ್:
ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ಅಭಿನಯಿಸಿ ಗ್ರಾಮೀಣ ಪ್ರದೇಶದಲ್ಲಿನ ಸಾಮಾನ್ಯ ಜನರ ಕಡು ಬಡತನದ ಜೀವನದ ಬಗ್ಗೆ ಪಾತ್ರದಲ್ಲಿ ಜೀವ ತುಂಬಿರುವ ಕವಿತಾ ದಿನಕರ್ ಮೂಲತಃ ಪುಂಜಾಲಕಟ್ಟೆ ಅನಿಲಡೆಯವರಾಗಿದ್ದು ಪ್ರಸ್ತುತ ಪುತ್ತೂರಿನ ಪಡೀಲ್ನಲ್ಲಿ ನೆಲೆಸಿರುತ್ತಾರೆ. ತುಳು ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಾದ ‘ದಬಕ್ ದಬಾ ಐಸಾ’, ‘ದೊಂಬರಾಟ’ ಹಾಗೂ ‘ಪಿಲಿ ಬೈಲ್ ಯಮುನಕ್ಕ’ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಇವರು ಸಂಗೀತ ಶಿಕ್ಷಕಿಯಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು. ಮಹಾಲಿಂಗೇಶ್ವರ ಭಜನಾ ತಂಡದ ಕಾರ್ಯದರ್ಶಿಯಾಗಿದ್ದಾರೆ.
ಮನೋಜ್ ಅಂಗರಾಜೆ:
ಖಳನಾಯಕನಾಗಿ ಚಿತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮನೋಜ್ ಅಂಗರಾಜೆ ಮಿತ್ತೂರಿನ ಚಂದ್ರಶೇಖರ ಕುಲಾಲ್ ಮತ್ತು ಲಲಿತಾ ಕುಲಾಲ್ ದಂಪತಿ ಪುತ್ರ. ಈ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದು, ಉತ್ತಮ ಭವಿಷ್ಯದ ಭರವಸೆಯಲ್ಲಿದ್ದಾರೆ. ‘ಕುಡ್ಲ ಕೆಫೆ’, ‘ಬಯ್ಯಮಲ್ಲಿಗೆ’, ‘ರಿಕ್ಕಿ’ ಹಾಗೂ ‘ರಂಗೋಲು’ ಚಿತ್ರಗಳಲ್ಲಿಯೂ ಅಭಿನಯಿಸುವ ಅವಕಾಶ ಪಡೆದಿದ್ದಾರೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರೈಸಿರುವ ಇವರು ಮೈಸೂರಿನ ರಂಗಾಯಣದಲ್ಲಿ ಡ್ರಾಮಾ ಕೋರ್ಸ್ ಪೂರೈಸಿದ್ದಾರೆ.
ತಾರಾಗಣದಲ್ಲಿ ಚಿರಶ್ರೀ ಅಂಚನ್, ಕುಸೇಲ್ದರಸೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಅಭಿನಯಿಸಿದ್ದಾರೆ. ಇನ್ನುಳಿದಂತೆ ಉಮೇಶ್ ಮಿಜಾರ್, ರಂಜನ್ ಬೋಳೂರು, ರಘು ಪಾಂಡೇಶ್ವರ್, ಮನೋಜ್ ಪುತ್ತೂರು, ಶೋಭಾ ರೈ, ವಿದ್ಯಾ, ಸುಪ್ರೀತ, ದೀಪಿಕಾ, ರಂಜಿತಾ ಶೇಟ್, ರಿತೇಶ್ ಮಂಗಳೂರು, ವಸಂತ್, ತಿಮ್ಮಪ್ಪ ಕುಲಾಲ್ ಮೊದಲಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕತೆಯನ್ನು ನಿರ್ಮಾಪಕ ಅನಂತರಾಮ್ ರಾವ್ ಎರ್ಮಾಳ್ ಒದಗಿಸಿದ್ದಾರೆ. ಚಿತ್ರಕತೆ, ನಿರ್ದೇಶನ: ನಾಗವೆಂಕಟೇಶ್, ಸಾಹಿತ್ಯ ಸಂಭಾಷಣೆ: ರಂಜಿತ್ ಸುವರ್ಣ.
ಕೃಪೆ : ಸುದ್ದಿ ಪುತ್ತೂರು