ಕುಂಬಾರರ ಗುಡಿ ಕೈಗಾರಿಕೆ ಸಹಕಾರ ಸಂಘ ಉಪ್ಪಿನಂಗಡಿ ಶಾಖೆ ಉದ್ಘಾಟನೆ
ಪುತ್ತೂರು : ಸಾರ್ಥಕ ಸೇವೆ ನೀಡುವ ಕುಂಬಾರರು ಸಜ್ಜನರು, ಸಮಾಜದೊಂದಿಗೆ ಹೊಂದಾಣಿಕೆಯಿಂದ ಬೆರೆತು ಬಾಳುವವರು, ಸೌಹಾರ್ದಯುತ ಬದುಕಿಗೆ ಅರ್ಥ ಕಲ್ಪಿಸಿದವರು ಎಂದು ಶ್ರೀಕ್ಷೇತ್ರ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಫೆ. 3 ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಉಪ್ಪಿನಂಗಡಿ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿದರು. ಕುಂಬಾರರು ಸಂಘಟಿತ ಮನೋಭಾವದಿಂದ ಸಹಕಾರಿ ತತ್ವದ ಅಡಿಯಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿ ಇದೀಗ ಬಹಳ ಎತ್ತರಕ್ಕೆ ಬೆಳೆದು ನಿಂತಿರುವುದು ಮಾದರಿ ಆಗಿದೆ, ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ ಜಾತಿ ಸಂಘಟನೆಗಳು ಸಂಘಟಿತರಾಗಿ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕುವುದು ಒಳ್ಳೆಯ ಸಂಪ್ರದಾಯವಾಗಿದ್ದು, ಅದು ಸಮುದಾಯದ ಅಭಿವೃದ್ಧಿಗೆ ದ್ಯೋತಕವಾಗಿದೆ, ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಉದಾರೀಕರಣ ಆಗಿದ್ದು, ಅದರ ಉಪಯೋಗ ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಎಲ್ಲರೂ ಮುಂದೆ ಬರಬೇಕು ಎಂದರು.
ಕನ್ಯಾನ ಭಾರತ್ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಗಣಕ ಯಂತ್ರ ಉದ್ಘಾಟಿಸಿ ಮಾತನಾಡಿ ಹಿಂದೆಲ್ಲಾ ಕುಂಬಾರರು ಮಡಕೆ ಮಾಡುತ್ತಾ ನೀಡುತ್ತಿದ್ದ ಸೇವೆ ಅವಿಸ್ಮರಣೀಯವಾಗಿದ್ದು, ಅವರ ಜೀವನ ಮಟ್ಟವನ್ನು ಮೇಲಕ್ಕೆ ತರುವಲ್ಲಿ ಸಂಘಟನೆ ಸಹಕಾರಿ ಆಗಿದೆ, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ರೈ ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿ ಕುಂಬಾರರು ಸಮಾಜದ ಮುತ್ತುಗಳು, ಅವರುಗಳು ಸಂಘಟನೆ ಮತ್ತು ಬಿ.ಎಸ್. ಕುಲಾಲ್ ಅವರ ಕಲ್ಪನೆ ಸಮಾಜ ಬೆಳಗುವಲ್ಲಿ ಸಹಕಾರಿ ಆಗಿದೆ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ ಉಪ್ಪಿನಂಗಡಿಯಲ್ಲಿ ಶಾಖೆ ತೆರೆಯಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಈ ಸಂಸ್ಥೆ ಕೇವಲ ಕುಂಬಾರಿಗೆ ಮಾತ್ರ ಅಲ್ಲ ಎಂದ ಅವರು ಎಲ್ಲಾ ಸಮುದಾಯದ ಜನರಿಗೂ ಇಲ್ಲಿ 4 ದಿವಸದಲ್ಲಿ ಸಾಲ ಮಂಜೂರು ಮಾಡಲಾಗುವುದು, ಜೊತೆಗೆ ಉತ್ತಮ ಸೇವೆ ನೀಡಲಾಗುವುದು ಎಂದರು.
ಉಪ್ಪಿನಂಗಡಿಯ ಉದ್ಯಮಿ ಯು. ರಾಮ ಪಾಲುಪತ್ರ ಬಿಡುಗಡೆ ಮಾಡಿದರು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕರಾಯ ರಾಮಚಂದ್ರ ನಾಯಕ್, ನೋಟರಿ, ವಕೀಲ ಶಿವಪ್ರಸಾದ್, ವಕೀಲ ಭಾಸ್ಕರ ಕೋಡಿಂಬಾಳ, ಲಕ್ಷ್ಮೀ ಆರ್ಕೆಡ್ ಕಟ್ಟಡ ಮಾಲಕ ಕರಾಯ ಸತೀಶ್ ನಾಯಕ್, ಉದ್ಯಮಿ ಸುಧಾಕರ ಶೆಟ್ಟಿ, ಬಾಲಕೃಷ್ಣ ಗೌಡ ಕೆದುವಡ್ಕ, ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ದಿನೇಶ್ ಪಿ.ವಿ., ಕುಲಾಲ ಸಹಕಾರಿ ಸಂಘದ ಉಪಾಧ್ಯಕ್ಷ ಸಚ್ಚಿದಾನಂದ, ಕುಲಾಯಿ ಕುಲಾಲ ಸಂಘದ ಅಧ್ಯಕ್ಷ ನಾಗೇಶ್ ಬಜಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಲಾಲ ಸಹಕಾರಿ ಸಂಘದ ನಿರ್ದೇಶಕ ಎಚ್. ಪದ್ಮಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಎಸ್. ಜನಾರ್ದನ ಮೂಲ್ಯ ವಂದಿಸಿದರು. ಶಾಖಾ ಪ್ರಬಂಧಕಿ ಸುಜಾತ, ನಿರ್ದೇಶಕರುಗಳಾದ ಕೃಷ್ಣಪ್ಪ, ಗಣೇಶ್ ಪಿ., ವಸಂತ ಮೂಲ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.