ನಮ್ಮಲ್ಲಿ ಗುಡಿ ಕೈಗಾರಿಕೆಗಳು ಈಗಲೂ ಬೆರಳೆಣಿಕೆಯಷ್ಟು ಜೀವಂತವಾಗಿವೆ. ಆದರೆ ಅವುಗಳಿಗೆ ಸರಿಯಾದ ಮಾನ್ಯತೆ ದೊರಕುತ್ತಿಲ್ಲ. ಗಾಂಧೀಜಿ ಹಿಡಿದ ಚರಕಕ್ಕೆ ಧೂಳು ಮೆತ್ತಿದೆ. ಹರಳಯ್ಯನ ಚರ್ಮದ ಕಾಯಕಕ್ಕೆ ಕೀಳರಿಮೆ ಬಂದಿದೆ. ಗ್ರಾಮಸ್ಥರಲ್ಲಿ ಸ್ವಾವಲಂಬಿತನ ಕಟ್ಟಿಕೊಡುತ್ತಿದ್ದ ಇಂತಹ ಕಸುಬುಗಳನ್ನು ಯಾಂತ್ರೀಕರಣದ ಪ್ರಭಾವಕ್ಕೆ ಸಿಲುಕಿಸಿರುವ ನಮ್ಮ ನಿಲುವನ್ನು ವಿಮರ್ಶಿಸಿಕೊಳ್ಳಬೇಕಿದೆ.
ನಮ್ಮ ರಾಷ್ಟ್ರವನ್ನು ಏಕಾಏಕಿ ಅಭಿವೃದ್ಧಿಗೊಳಿಸಿ ಶ್ರೀಮಂತ ಪಾಶ್ಚಾತ್ಯ ದೇಶಗಳ ಸಮಕ್ಕೇರಿಸುವ ಹುಮ್ಮಸ್ಸಿನಲ್ಲಿ ಎಲ್ಲ ವಿಷಯಗಳಲ್ಲೂ ಅವರ ಅನುಕರಣೆ ಮಾಡಲಾಗುತ್ತಿದೆ. ಇದರ ಅಪಾಯಗಳ ಬಗ್ಗೆ ಕೆಲವು ರಾಜಕೀಯ ಮತ್ತು ಆರ್ಥಿಕ ಪ್ರಾಜ್ಞರು ಕೊಟ್ಟ ಎಚ್ಚರಿಕೆಯನ್ನೂ ನಾವು ಲೆಕ್ಕಿಸಲಿಕ್ಕಿಲ್ಲ. ಪರಿಣಾಮವಾಗಿ ಬಂಡವಾಳಶಾಹಿಗಳ ಯಾಂತ್ರೀಕರಣದ ಪ್ರಭಾವದಿಂದ ಕುಲಕಸಬುಗಳು ಹಳ್ಳ ಹಿಡಿಯುತ್ತಿವೆ. ಮನೆಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ತುಂಬಿಸಿಡುವ ಕಾಲ ದೂರವಾಗಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮೂರಿನಲ್ಲಿ ಗುಡಿಕೈಗಾರಿಕೆಗಳು ಇದ್ದವು. ಬುಟ್ಟಿ ಹೆಣೆಯುವುದು ಮತ್ತು ಮಡಿಕೆ ಮಾಡುವುದು ಚಾಲ್ತಿಯಲ್ಲಿತ್ತು. ಅವುಗಳನ್ನು ನಡೆಸಿಕೊಂಡು, ತಮ್ಮ ಜೀವನವನ್ನು ಸ್ವಾವಲಂಬಿಯಾಗಿ ರೂಪಿಸಿಕೊಂಡವರಿದ್ದರು. ಅವರಲ್ಲಿ ಕೆಲಸ ಹುಡುಕಿಕೊಂಡು ನೆರೆಹೊರೆಯ ಮನೆಯವರು ಹೋಗುತ್ತಿದ್ದರು. ಕಸುಬುದಾರರಿಗೆ ದೊಡ್ಡ ಲಾಭ ಬರದೇ ಹೋದರೂ ಇನ್ನೊಬ್ಬರ ಅಡಿಯಾಳಾಗಿ ದುಡಿಯಲು ಹೋಗುವ ಅಗತ್ಯವಿರಲಿಲ್ಲ.
ಹಿಂದೆ ಗುಡಿಕೈಗಾರಿಕೆಗಳೆಲ್ಲ ಮೂಲತಃ ಕುಲಕಸಬುಗಳಾಗಿದ್ದವು. ಕ್ರಿಸ್ತಪೂರ್ವ ಕಾಲದಲ್ಲಿ ನಮ್ಮ ದೇಶದ ಆದಿಮಾನವರು ಚಕ್ರವನ್ನು ಕಂಡುಹಿಡಿದರು. ಆಗಿನ ಕಾಲದಿಂದಲೇ ಚಕ್ರವನ್ನು ಬಳಸಿಕೊಂಡು ಮಣ್ಣಿನ ಮಡಿಕೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಮತ್ತು ಚಕ್ರದ ಸಹಾಯದಿಂದ ನೂಲು ನೇಯುವುದನ್ನು ರೂಢಿ ಮಾಡಿಕೊಂಡರು. ಆಗಿನಿಂದ ಇಲ್ಲಿಯವರೆಗೂ ಉಳಿದುಕೊಂಡು ಬಂದಿದ್ದ ಈ ಕಸಬುಗಳು ಇಂದು ಯಾಂತ್ರೀಕರಣದ ಪ್ರಭಾವಕ್ಕೆ ಒಳಪಟ್ಟು ಅತಂತ್ರ ಸ್ಥಿತಿ ತಲುಪಿವೆ.
ಹಿಂದೆ ಪ್ರೋತ್ಸಾಹ ಹೇಗಿತ್ತು?
ನಮ್ಮದು ಸಮೃದ್ಧ ದೇಶ ಎಂಬುದೇನೋ ನಿಜ. ಆದರೆ ಇದು ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಹೇಳುವಾಗ ಸ್ವಲ್ಪ ಯೋಚನೆ ಮಾಡಬೇಕಿದೆ. ಏಕೆಂದರೆ ನಮ್ಮ ಜನತೆಗೆ ಮೂಲ ಉದ್ಯೋಗವನ್ನು ಒದಗಿಸುವ ಗುಡಿ ಕೈಗಾರಿಕೆಗಳು ಮಾನ್ಯತೆಯಿಂದ ದೂರ ಉಳಿದಿವೆ.
ಈ ಗುಡಿ ಕೈಗಾರಿಕೆದಾರರು ವಸ್ತುಗಳನ್ನು ಉತ್ಪತ್ತಿ ಮಾಡುತ್ತಿದ್ದುದು ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದಲೇ. ನೇಕಾರರು ಹತ್ತಿ, ರೇಷ್ಮೆ ಮತ್ತು ತೆಂಗಿನ ನಾರಿನಿಂದ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಕುಂಬಾರರು ಮಡಿಕೆಗಳನ್ನು ಮಣ್ಣು ಮತ್ತು ಕಳ್ಳಿಗಿಡದ ನಾರನ್ನು ಬಳಸಿ ತಯಾರಿಸುತ್ತಿದ್ದರು. ಮೇದಾರರು ಬುಟ್ಟಿಗಳನ್ನು ಬಿದಿರಿನಿಂದ ತಯಾರಿಸುತ್ತಿದ್ದರು. ಕಂಬಾರರು ಭೂಮಿಯಲ್ಲಿ ದೊರೆಯುವ ಕಬ್ಬಿಣದ ಅದಿರನ್ನು ಮಾತ್ರ ಬಳಸುತ್ತಿದ್ದರು. ಚರ್ಮಕಾರರು ಚರ್ಮವನ್ನೂ, ಕುರುಬರು ಕುರಿಯ ಉಣ್ಣೆಯನ್ನೂ ಬಳಸುತ್ತಿದ್ದರು. ಇವೆಲ್ಲವೂ ಪರಿಸರದಿಂದ ಸಿಗುವುದೇ ಆಗಿದ್ದರೂ ಇವುಗಳ ಬಳಕೆಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ರಾಜಪ್ರಭುತ್ವದ ಕಾಲದಲ್ಲಿ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿತ್ತು. ರಾಜರು ಅವುಗಳನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುತ್ತಿದ್ದರು. ಏಕೆಂದರೆ ಇವು ಜನರಿಗೆ ಸುಲಭದ ಜೀವನೋಪಾಯ ಕಲ್ಪಿಸುತ್ತಿದ್ದವು ಮತ್ತು ಆರ್ಥಿಕತೆಯೂ ನಿಯಂತ್ರಣದಲ್ಲಿರುತ್ತಿತ್ತು. ಸಾಮಾನ್ಯವಾಗಿ ಈ ಕಸುಬುದಾರರೆಲ್ಲ ಕೆಳವರ್ಗದವರು. ಕಾಲಕ್ರಮೇಣ ಜಾತೀಯತೆ ತಲೆಯೆತ್ತಿ, ಗುಡಿ ಕೈಗಾರಿಕೆದಾರರಿಗೆ ಮಾನ್ಯತೆ ಕ್ಷೀಣಿಸುತ್ತಾ ಬಂತು. 20ನೇ ಶತಮಾನದ ಸುತ್ತಮುತ್ತ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆಗಳಿಗೆ ಬಹಳ ಬೇಡಿಕೆಯಿತ್ತು. ಆದರೆ, ಈಗ ಬೇಡಿಕೆ ಕಳೆದುಕೊಂಡ ನೇಯ್ಗೆಯ ಯಂತ್ರಗಳು ಅಳಿವಿನ ಅಂಚಿನಲ್ಲಿವೆ. ಕಾರಣ- ಯಾಂತ್ರೀಕರಣ.
ಗುಡಿ ಕೈಗಾರಿಕೆಗಳು ನಶಿಸಿದ್ದು ಹೇಗೆ?
1970ರ ನಂತರ ದೇಶಕ್ಕೆ ಬಂಡವಾಳಶಾಹಿಗಳ ಆಗಮನವಾಯಿತು. ನಂತರ ಗುಡಿ ಕೈಗಾರಿಕೆದಾರರಿಗೆ ವಿರುದ್ಧವಾಗಿಯೆ ಯಂತ್ರಗಳು ಹುಟ್ಟಿಕೊಂಡವು. ಇದರ ಪರಿಣಾಮವಾಗಿ ಕಸಬುಗಳು ಒಂದೊಂದಾಗಿಯೇ ಮೂಲೆಗುಂಪಾಗತೊಡಗಿದವು. ಮಡಿಕೆ-ಕುಡಿಕೆಗಳ ಬದಲಾಗಿ ಪ್ಲಾಸ್ಟಿಕ್ ಮತ್ತು ಸ್ಟೀಲ್ನಂತಹ ಲೋಹಗಳ ಪಾತ್ರೆ ಹಾಗೂ ಕೊಡಗಳ ಪರಿಚಯವಾಯಿತು. ಚರಕದ ಬದಲಾಗಿ ಬಟ್ಟೆಯ ಯಂತ್ರಗಳು, ಚರ್ಮಕಾರರ ಪಾದರಕ್ಷೆಯ ಬದಲಾಗಿ ಬಾಟಾ, ಪಾರಾಗಾನ್ನಂತಹ ದೊಡ್ಡ ಕಂಪನಿಗಳು ಹುಟ್ಟಿಕೊಂಡವು.
ಈ ಕಸುಬನ್ನು ಮುಂದುವರಿಸಲು ಇಂದು ಯಾರಿಗೂ ಆತ್ಮವಿಶ್ವಾಸವಿಲ್ಲ. ಏಕೆಂದರೆ ಅವರ ಪರಿಶ್ರಮಕ್ಕೆ ಸರಿಯಾದ ಬೆಲೆ ಸಿಗುವುದಿಲ್ಲ. ಇದರ ಪರಿಣಾಮ ಇಂದು ಕಸುಬುದಾರರು ಬಂಡವಾಳಶಾಹಿಗಳ ಅಡಿಯಾಳಾಗಿ ದುಡಿಯುತ್ತಿದ್ದಾರೆ. ಇದನ್ನು ನಾವು ಗುದ್ದಲಿ ಮತ್ತು ಪಿಕಾಸಿ ಹೆಗಲಿಗೆ ಹಾಕಿಕೊಂಡು ಬೇರೆಯವರ ಹೊಲಕ್ಕೆ ಹೋಗುವುದು ಮತ್ತು ನಗರಗಳಿಗೆ ವಲಸೆ ಹೋಗುವುದರಲ್ಲಿ ಕಾಣಬಹುದು. ಪಾಶ್ಚಿಮಾತ್ಯರ ಸಂಸ್ಕೃತಿಯನ್ನು ನಾವು ಬೆಂಬಲಿಸುತ್ತಿದ್ದೇವೆ. ಅವರಿಂದ ತಯಾರಿಸಲ್ಪಟ್ಟ ಉಡುಪುಗಳು ಮತ್ತು ಸೂಟು-ಬೂಟುಗಳಿಗೆ ಮೊರೆ ಹೋಗುತ್ತಿದ್ದೇವೆ. ಮೊದಲು ದೀಪಾವಳಿಯಲ್ಲಿ ಮಣ್ಣಿನ ಹಣತೆ ಬಳಸುತ್ತಿದ್ದೆವು. ಇಂದು ವಿದೇಶದ ಸೆರಾಮಿಕ್ಸ್ ಹಣತೆ ಬಳಸುತ್ತಿದ್ದೇವೆ. ಆಧುನಿಕ ಜಗತ್ತಿಗೆ ತಕ್ಕಂತೆ ಬದಲಾವಣೆ ಅಗತ್ಯ. ಅದರರ್ಥ ನಮ್ಮನ್ನು ನಾವೇ ಮಾರಿಕೊಳ್ಳುವುದು ಎಂದೇ? ಸ್ಥಳೀಯ ಸಂಪತ್ತುಗಳ ಮೌಲ್ಯವನ್ನು ಯಾವತ್ತೂ ಬಿಟ್ಟುಕೊಡಬಾರದು.
ದಿನನಿತ್ಯ ಬಳಸುವ ಉಡುಪು ಮತ್ತು ಪ್ಲಾಸ್ಟಿಕ್ನಂತಹ ಇನ್ನಿತರ ವಸ್ತುಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಅವುಗಳನ್ನು ಕೊಂಡುಕೊಂಡು ಬೇರೆ ದೇಶಗಳನ್ನು ಶ್ರೀಮಂತ ಮಾಡುತ್ತಿದ್ದೇವೆ. ಅದೇ ಪ್ರೋತ್ಸಾಹವನ್ನು ನಮ್ಮ ಕುಲಕಸಬುಗಳಿಗೆ ನೀಡಿದರೆ ಅವುಗಳನ್ನು ಅಭಿವೃದ್ಧಿಪಡಿಸಬಹುದು. ಅದರಿಂದ ನಮ್ಮ ಜನರು, ನಮ್ಮ ದೇಶವೇ ಶ್ರೀಮಂತವಾಗುತ್ತದೆ, ನಮ್ಮ ದೇಶದ ಆರ್ಥಿಕತೆಯೂ ಬೆಳೆಯುತ್ತದೆ.
ಮೊದಲು ಸಾವಯವ ಗೊಬ್ಬರ ಬಳಸುತ್ತಿದ್ದ ರೈತ ಉತ್ತಮ ಬೆಳೆ ತೆಗೆದು ನೆಮ್ಮದಿಯಾಗಿದ್ದ. ಈಗ ರಾಸಾಯನಿಕ ಗೊಬ್ಬರಕ್ಕೆ ಮೊರೆಹೋಗಿ ತಾನೂ ನಷ್ಟ ಮಾಡಿಕೊಳ್ಳುತ್ತಿದ್ದಾನೆ, ಭೂಮಿಯನ್ನೂ ಬಂಜರು ಮಾಡುತ್ತಿದ್ದಾನೆ.
ಅಮೆರಿಕದಲ್ಲಿ ಆಗಿದ್ದೇನು?
ಬಂಡವಾಳಶಾಹಿಗಳು ಲಾಭವನ್ನು ಉದ್ದೇಶವಾಗಿರಿಸಿಕೊಂಡು ಕೈಗಾರಿಕಾ ಬಂಡವಾಳ ವಾದವನ್ನು ಪರಿಚಯಿಸಿದರು. ಕೈಗಾರಿಕೆಯ ಮುಂದಿನ ಹಂತ 1873ರಿಂದ 1895ರ ನಡುವೆ ಕಾಣಿಸಿಕೊಂಡ ಬೃಹತ್ ಆರ್ಥಿಕ ಕುಸಿತದ ಅವಧಿಯಲ್ಲಿ ಮುಕ್ತ ಮಾರುಕಟ್ಟೆಗಳು ಸ್ಪರ್ಧಾತ್ಮಕವಾದವು. ಇದು ಏಕಸ್ವಾಮ್ಯ ಬಂಡವಾಳವಾಗಿ ಬದಲಾಯಿತು. ಇದರೊಂದಿಗೆ ಟ್ರಸ್ಟ್ಗಳ, ಕಾರ್ಟಲ್ಗಳ, ಸಿಂಡಿಕೇಟ್ಗಳ ಹಾಗೂ ಅಂತಾರಾಷ್ಟ್ರೀಯ ಏಕಸ್ವಾಮ್ಯದ ಉಳಿದ ರೂಪದ ಬಂಡವಾಳಶಾಹಿಗಳು ಕಾಣಿಸಿಕೊಂಡಿದ್ದವು. 1897ರಲ್ಲಿ ಅಮೆರಿಕದಲ್ಲಿ 1,000 ಮಿಲಿಯನ್ ಡಾಲರ್ ಹೂಡಿದ್ದ 82 ಕೈಗಾರಿಕೆಗಳಿದ್ದವು. ಆದರೆ ಬಂಡವಾಳಶಾಹಿಗಳು ವಸಾಹತುಶಾಹಿಗಳಾಗಿ ಮಾರ್ಪಾಡಾಗಿದ್ದರು. ವಸಾಹತುಶಾಹಿಯ ಆಗಮನದ ನಂತರ 1898-1900ರ ನಡುವೆ 1140 ಮಿಲಿಯನ್ ಡಾಲರ್ ಹೂಡಿದ್ದ 11 ಕೈಗಾರಿಕೆಗಳಿಗೆ ಲಾಭ ಇಳಿಮುಖವಾಗಿತ್ತು. ಏಕೆಂದರೆ ಬಂಡವಾಳವೆನ್ನುವುದು ಪ್ರಬಲವಾಗಿ ಬೆಳೆದುಬಿಟ್ಟಿತ್ತು ಮತ್ತು ಬಂಡವಾಳಶಾಹಿಗಳು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದರು. ಇದರಿಂದಾಗಿ ಯುಎಸ್ ಕಾರ್ಪೊರೇಷನ್ ಬೃಹತ್ ಆಗಿ ಬೆಳೆಯಿತು. 1929ರಲ್ಲಿ ಅಮೆರಿಕದ ಆರ್ಥಿಕ ಮಹಾಕುಸಿತದಿಂದ ವಸಾಹತುಶಾಹಿಗಳ ಹಿಡಿತದಲ್ಲಿದ್ದ ಜನರು ದಂಗೆಯೆದ್ದರು. ಇಷ್ಟೆಲ್ಲಾ ಬಂಡವಾಳಶಾಹಿಗಳ ಪ್ರಬಲ ಪೈಪೋಟಿಯ ನಡುವೆ ಗುಡಿ ಕೈಗಾರಿಕೆಗಳು ದುರ್ಬಲವಾಗಿದ್ದವು. ಏಕೆಂದರೆ, ಆರ್ಥಿಕ ಹಿನ್ನಡೆಯಿಂದ ಗುಡಿಕೈಗಾರಿಕೆದಾರರಿಗೆ ಬಂಡವಾಳಶಾಹಿಗಳ ಎದುರು ಸ್ಪರ್ಧಿಸುವ ಶಕ್ತಿಯಿರಲಿಲ್ಲ.
ನಮ್ಮಲ್ಲಿ ಆಗಬೇಕಿರುವುದೇನು?
ನಮ್ಮ ರಾಜ್ಯದ ಬಿಡಿ ಭಾಗಗಳಲ್ಲಿ ಗುಡಿ ಕೈಗಾರಿಕೆಗಳು ಈಗಲೂ ಬೆರಳೆಣಿಕೆಯಷ್ಟು ಜೀವಂತವಾಗಿವೆ. ಆದರೆ ಅವುಗಳಿಗೆ ಸರಿಯಾದ ಮಾನ್ಯತೆ ದೊರಕುತ್ತಿಲ್ಲ. ಗಾಂಧೀಜಿ ಹಿಡಿದ ಚರಕಕ್ಕೆ ಧೂಳು ಮೆತ್ತುತ್ತಿದೆ. ಹರಳಯ್ಯನ ಚರ್ಮದ ಕಾಯಕಕ್ಕೆ ಕೀಳರಿಮೆ ಬಂದಿದೆ. ಗ್ರಾಮಸ್ಥರಲ್ಲಿ ಸ್ವಾವಲಂಬಿತನ ಕಟ್ಟಿಕೊಡುತ್ತಿದ್ದ ಇಂತಹ ಕಸುಬುಗಳನ್ನು ಯಾಂತ್ರೀಕರಣದ ಪ್ರಭಾವಕ್ಕೆ ಸಿಲುಕಿಸಿರುವ ನಮ್ಮ ನಿಲುವನ್ನು ವಿಮರ್ಶಿಸಿಕೊಳ್ಳುವ ಅಗತ್ಯವಿದೆ. ಅನ್ಯ ದೇಶೀಯರ ಉತ್ಪನ್ನಗಳ ಆಮದನ್ನು ನಿಯಂತ್ರಿಸುವ ಅಗತ್ಯವಿದೆ. ಏಕೆಂದರೆ ಅದರ ಜೊತೆ ವಿದೇಶೀ ಸಂಸ್ಕೃತಿಯೂ ಆಮದಾಗಿ ನಮ್ಮ ಸಂಸ್ಕೃತಿ ನಶಿಸುತ್ತಿದೆ.
ಈಗಾಗಲೆ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಗುಡಿ ಕೈಗಾರಿಕೆಗಳಿಗೆ ಸಾಲ ಒದಗಿಸುವ ಯೋಜನೆಗಳನ್ನು ಜಾರಿಮಾಡಿದೆ. ಅವುಗಳು ಮತ್ತಷ್ಟು ಹೆಚ್ಚಳವಾಗಬೇಕಿದೆ. ಅಲ್ಲಲ್ಲಿ ಉಳಿದಿರುವ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಉಳಿಸಿಕೊಳ್ಳುವುದು ಗ್ರಾಹಕರ ಹಾಗೂ ಸರ್ಕಾರದ ಜವಾಬ್ದಾರಿ.
ವಿಜಯಕುಮಾರ ಎಂ. ಕುಟಕನಕೇರಿ, ಬದಾಮಿ


