ಮೈಸೂರು : ಕುಂಬಾರ ಕಲಾ ಅಭಿವೃದ್ಧಿ ಮಂಡಳಿಗೆ ನಾಲ್ವರನ್ನು ನಿರ್ದೇಶಕರನ್ನಾಗಿ ನೇಮಿಸುವಂತೆ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಚೌಡಶೆಟ್ಟಿ ಸರಕಾರಕ್ಕೆ ಮನವಿ ಮಾಡಿದರು.
ಮೈಸೂರಿನಲ್ಲಿ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ೧೫ ಲಕ್ಷ ಕುಂಬಾರ ಸಮುದಾಯದವರಿದ್ದಾರೆ. ಈ ಪೈಕಿ ಶೇ. ೨ರಷ್ಟು ಜನರು ಕುಂಬಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕುಂಭ ಕಲಾ ಅಭಿವೃದ್ಧಿ ಮಂಡಳಿಗೆ ಸರಕಾರ ಪ್ರಸ್ತುತ ವಾರ್ಷಿಕ ೩ ಕೋಟಿ ರೂಪಾಯಿ ಬಿಡುಗಡೆಗೊಳಿಸುತ್ತಿದೆ. ಆದರೆ ಈ ಅನುದಾನ ಸಮುದಾಯದ ಅಭಿವೃದ್ಧಿಗೆ ಸಾಕಾಗುತ್ತಿಲ್ಲ. ಹೀಗಾಗಿ ಪ್ರತಿವರ್ಷ ೧೦ ಕೋಟಿ ರೂ. ಬಿಡುಗಡೆಗೊಳಿಸಬೇಕು ಒತ್ತಾಯಿಸಿದರು.
ಇದೇ ಸಂದರ್ಭ ಸಂಘದ ೨೦೧೬ನೆಯ ಸಾಲಿನ ನೂತನ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಯುವ ಘಟಕದ ಅಧ್ಯಕ್ಷ ಕೆ. ಸ್ವಾಮಿ, ಸದಸ್ಯರಾದ ತಿಮ್ಮ ಶೆಟ್ಟಿ, ಲೋಕೇಶ್ ಹಾಗೂ ನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.