ಸಮಾವೇಶಗಳಿಂದ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತದೆ ಎಂಬುದು ತಪ್ಪು ಭಾವನೆ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು
ಮಂಡ್ಯ: ಅತಿ ಹಿಂದುಳಿದ ಮತ್ತು ಶೋಷಿತ ಸಮುದಾಯ ಗಳು ತಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ನಡೆಸುವ ಸಮಾವೇಶಗಳಿಂದ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತದೆ ಎಂಬುದು ತಪ್ಪು ಭಾವನೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಅಭಿಪ್ರಾಯ ಪಟ್ಟರು.
ತಾಲೂಕಿನ ಹಳುವಾಡಿ ಗ್ರಾಮದ ಶ್ರೀನಿವಾಸ ಸಮುದಾಯ ಭವನದಲ್ಲಿ ಮಂಡ್ಯ ತಾಲೂಕು ಕುಂಬಾರ ಸಂಘ ಆಯೋಜಿಸಿದ್ದ ಕುಂಬಾರರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಸಮಾವೇಶಗಳನ್ನು ನಡೆಸುವುದು ತಪ್ಪಲ್ಲ. ನಿರ್ಲಕ್ಷಿತ ಸಮುದಾಯಗಳಿಗೆ ಸಾಂವಿಧಾನಿಕ ಹಕ್ಕುಗಳಿಗಾಗಿ ಸಮಾವೇಶದ ಮೂಲಕ ಹೋರಾಡುತ್ತಾರೆ. ಇದರಿಂದ ಎಲ್ಲಾ ಸಮಾಜಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಜಾತಿ-ಜಾತಿಗಳ ನಡುವಿನ ಅಸಮಾನತೆ ದೂರವಾಗಿ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದು ವಿಶ್ಲೇಷಿಸಿದರು.
ಹಿಂದುಳಿದವರು ಒಗ್ಗಟ್ಟಾಗಿ ನಿಲ್ಲಬೇಕು. ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ತಮ್ಮ ಪಾಲನ್ನು ಪಡೆದು ಮುಂದುವರೆಯಬೇಕು. ಸಂವಿಧಾನ ರಚನೆ ಆದಾಗಿನಿಂದ ಇದುವರೆಗೆ ಸಮಾನ ಹಂಚಿಕೆಯಾಗಿಲ್ಲ. ಆದ್ದರಿಂದಲೇ ಅಸಮಾನತೆ ಉಂಟಾಗಿದೆ ಎಂದ ಅವರು, ಸಾಮಾಜಿಕ ನ್ಯಾಯ ಎಂದರೆ ಅದು ದೇಶದ ಸಂಪತ್ತನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವುದು ಎಂದು ವಿವರಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮ. ನಿರ್ಲಕ್ಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆದಿದೆ. ಇದರಿಂದ ಸಮ ಸಮಾಜದ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ ಎಂದು ಆಶಿಸಿದರು.
ಆರ್ಥಿಕವಾಗಿ ಅತ್ಯಂತ ದುಸ್ಥಿತಿಯನ್ನು ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸಿರುವ ಕುಂಬಾರ ಸಮಾಜದ ಮೂಲ ಅಗತ್ಯತೆಗಳನ್ನು ದಕ್ಕಿಸಿಕೊಳ್ಳಲು ಹೋರಾಡಬೇಕಿದೆ. ಮಣ್ಣಿನ ಮಡಿಕೆಯಂತಿರುವ ಕುಂಬಾರರ ಬದುಕು ಮತ್ತು ರಕ್ಷಣೆಯೇ ಬಹು ದೊಡ್ಡ ಸವಾಲಾಗಿದೆ. ಈ ಸಮುದಾಯದ ಮುಖಂಡರನ್ನು ನಾಮಕರಣ ಮಾಡುವ ಮೂಲಕ ರಾಜಕೀಯ ಶಕ್ತಿ ನೀಡಬೇಕು ಎಂದು ಹೇಳಿದರು.
ಕ್ಯಾಲೆಂಡರ್ ಬಿಡುಗಡೆ ಮಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಡಿ.ಗೋಪಾಲ್ ಮಾತನಾಡಿ, ಕುಂಬಾರರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳಿಂದ ಅಭಿವೃದ್ಧಿ ಹೊಂದಬೇಕು. ಸರ್ಕಾರದ ಸವಲತ್ತುಗಳ ಕುರಿತು ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸ ಬೇಕು ಎಂದು ಕರೆ ನೀಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಧ್ವನಿ ಇಲ್ಲದ ಸಮುದಾಯಗಳಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಟಿಕೆಟ್ ನೀಡಿ ರಾಜಕೀಯ ಶಕ್ತಿ ತುಂಬಬೇಕು. ಪ್ರಮುಖ ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯವನ್ನು ತಮ್ಮ ಅಜೆಂಡಾವನ್ನಾಗಿ ಇಟ್ಟುಕೊಳ್ಳ ಬೇಕು ಎಂದರು.
ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಎಂ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕ್ರೆಡಿಟ್-ಐ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಪಿ.ವರ್ಷ ಹಾಗೂ ಮಾಲೂರು ವೈದ್ಯಾಧಿಕಾರಿ ಡಾ.ನಾಗರಾಜು ಅವರಿಗೆ ಕುಂಭರತ್ನ ಪ್ರಶಸ್ತಿಯನ್ನು ಕೆಪಿಸಿಸಿ ಕಾರ್ಯದರ್ಶಿ ಸೌಂದರ್ಯ ಪಿ.ಮಂಜಪ್ಪ ಮತ್ತು ದಕ್ಷಿಣಾಮೂರ್ತಿ ಪ್ರದಾನ ಮಾಡಿದರು.
ಅಖಿಲ ಕರ್ನಾಟಕ ಕುಂಬಾರ ಸೇನಾ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಶ್ರೀನಿವಾಸ್, ಕೋಲಾರ ಕುಂಬಾರ ಸಂಘದ ಅಧ್ಯಕ್ಷ ಕಲ್ಲಂದೂರು ಶ್ರೀನಿವಾಸಪ್ಪ, ಕುಂಬೇಶ್ವರ ಕೋ-ಆಪರೇಟೀವ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಸಿದ್ದನಂಜಶೆಟ್ಟಿ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್, ಕುಂಬಾರ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಲ್.ಶ್ರೀನಿವಾಸ್, ಬಿಜೆಪಿ ಮುಖಂಡ ತಬಲ ಎನ್.ರಾಜು, ಮೈಸೂರು ಕುಂಬಾರ ಸಂಘದ ಅಧ್ಯಕ್ಷ ಪ್ರಕಾಶ್, ಕುಂಭೋದಯ ಪತ್ರಿಕೆ ಸಂಪಾದಕ ಸೋಮಸುಂದರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಚಿತ್ರದುರ್ಗ ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕುಂಬಾರ ಸಂಘದ ಪತ್ರಿಕಾ ಕಾರ್ಯದರ್ಶಿ ಪಿ.ಎನ್.ಕಾಂತರಾಜು ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಪ್ರದೀಪ್ ಇತರರಿದ್ದರು.