ದೈವದ ಕೊಡಿಯಡಿಯಲ್ಲಿ ಅಸ್ಪ್ರಶ್ಯತೆ ಇಲ್ಲ, ಕೋಮು ಭಾವನೆಗಳಿಲ್ಲ : ಸಂಸದ ನಳಿನ್ ಕುಮಾರ್ ಕಟೀಲು
ಬಂಟ್ವಾಳ: ತುಳುನಾಡಿನಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ದೈವಾರಾಧನೆ ಇದೆ. ದ.ಕ. ಜಿಲ್ಲೆಯಲ್ಲಿ ಇರುವಷ್ಟು ಸಾಮಾಜಿಕ ನ್ಯಾಯ ಬೇರೆಲ್ಲೂ ಇರಲು ಸಾದ್ಯವಿಲ್ಲ. ದೈವದ ಕೊಡಿಯಡಿಯಲ್ಲಿ ಅಸ್ಪ್ರಶ್ಯತೆ ಇಲ್ಲ, ಕೋಮು ಭಾವನೆಗಳಿಲ್ಲ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಚಿ ಕಯ್ಯೂರಿನ ಶ್ರೀ ನಾಗ ಬ್ರಹ್ಮ, ಶ್ರೀ ಮಲರಾಯ ಮತ್ತು ಕಲ್ಲುರ್ಟಿ ಪಂಜುರ್ಲಿ ಸಪರಿವಾರ ದೈವಗಳ ಕ್ಷೇತ್ರದಲ್ಲಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನಾಗದರ್ಶನ ಹಾಗೂ ದೈವಗಳ ನೇಮೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಎನ್ನುವ ಮನೆಯ ದೇವರಕೋಣೆ ಭಾರತವಾದರೆ ಭಾರತದ ದೇವರ ಕೋಣೆ ದಕ್ಷಿಣ ಕನ್ನಡ ಜಿಲ್ಲೆ. ಆಗಮಶಸ್ತ್ರಗಳು ಬರುವ ಮೊದಲೇ ತುಳುನಾಡಿನಲ್ಲಿ ಪಾಡ್ದನಗಳು ಆಚರಣೆಯಲ್ಲಿದ್ದವು. ಕೃಷಿ ಪ್ರಧಾನವಾದ ಈ ನಾಡಿನಲ್ಲಿ ದೈವರಾಧನೆ ಹಾಗೂ ನಾಗಾರಾಧನೆ ಪ್ರಮುಖವಾದವು ಎಂದ ಅವರು ನ್ಯಾಯದಾನಕ್ಕೆ ಪವಿತ್ರ ಸ್ಥಾನವನ್ನು ದೈವಸ್ಥಾನಗಳು ನೀಡಿವೆ ಎಂದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚ ನೀಡಿ ಧಾರ್ಮಿಕ ಮೌಲ್ಯವನ್ನು ಉಳಿಸುವ ಕೆಲಸ ಇಂದಿನ ಅಗತ್ಯವಾಗಿದೆ ಎಂದರು. ಹಣಗಳಿಕೆಯೊಂದೇ ಜೀವನದ ಉದ್ದೇಶವಾಗ ಬಾರದು, ಆಧ್ಯಾತ್ಮ ಸಾಧನೆಯ ಪ್ರಯತ್ನವೂ ಅಗತ್ಯ, ಜ್ಞಾನ ಶಿಕ್ಷಣದೊಂದಿಗೆ ಜೀವನ ಶಿಕ್ಷಣವೂ ಅಗತ್ಯ ಎಂದರು.
ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಮಂಚಿ ಗ್ರಾ.ಪಂ.ಅಧ್ಯಕ್ಷೆ ಪ್ರಮೀಳಾ, ಯದುಕುಮಾರ್ ಶೆಟ್ಟಿ, ಮನೋಜ್ ಕೋಡಿಕೆರೆ, ರವಿಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜೀಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು, ಅಧ್ಯಕ್ಷ ಕೆ.ಎಸ್.ಆನಂದ ಪ್ರಸ್ತಾವಿಸಿದರು, ಕೋಶಾಧಿಕಾರಿ ಉಮೇಶ್ ಶ್ರೀಯಾನ್ ವಂದಿಸಿದರು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ-ವರದಿ : ಸಂದೀಪ್ ಸಾಲ್ಯಾನ್, ಬಂಟ್ವಾಳ