ಬ್ರಿಟಿಷರ ಕಾಲದಲ್ಲಿ ಹೀಗೊಂದು ನ್ಯಾಯ ನಡೆಯಿತಂತೆ. ಕೂಡು ಕುಟುಂಬಕ್ಕೆ ಸಂಬಂಧಿಸಿದ ದೇವಸ್ಥಾನವೊಂದರಲ್ಲಿ ಪೂಜೆಯ ನಂತರ ತೀರ್ಥ ಪ್ರಸಾದ ಯಾರು ಕೊಡುವುದು? ಎಂಬ ವಿವಾದವದು. ತೀರ್ಥ ಪ್ರಸಾದ ಕೊಡುವಾಗ ಸ್ವಾಭಾವಿಕವಾಗಿ ಕಾಣಿಕೆ ಸಿಗುತ್ತದೆ. ಕುಟುಂಬದ ಪ್ರತಿಯೊಂದು ಕವಲುಗಳಿಗೂ ಈ ಕಾಯಕದ ಮೇಲೆ ಕಣ್ಣು. ಈ ವಿಚಾರದಲ್ಲಿ ವಾಗ್ಯುದ್ಧಗಳು ನಡೆದು ಕೈ-ಕೈ ಮಿಲಾಯಿಸಿ ಕೊನೆಗೆ ಕೊಲೆ ಮಾಡುವವರೆಗೂ ಪ್ರಕರಣ ಮುಂದುವರಿಯಿತಂತೆ. ಪ್ರಕರಣ ಗಂಭೀರವಾದಾಗ ಅದು ಬ್ರಿಟಿಷ್ ನ್ಯಾಯಾಧೀಶರಿರುವ ಕೋರ್ಟು ಹತ್ತಿತು.
ಕೂಡು ಕುಟುಂಬದ ಪ್ರತಿಯೊಂದು ವಿಭಾಗಗಳೂ ತೀರ್ಥ ಪ್ರಸಾದ ಕೊಡುವ ಬಗ್ಗೆ ತಮ್ಮ ತಮ್ಮ ಹಕ್ಕುಗಳ ಬಗ್ಗೆ ವಾದ ಪ್ರತಿವಾದ ಮಾಡಲಾರಂಭಿಸಿತು. ಹಲವಾರು ಬಾರಿ ಮುಂದೂಡಲ್ಪಟ್ಟ ಕೇಸು ಕೊನೆಗೊಂದು ತೀರ್ಮಾನದ ಹಂತಕ್ಕೆ ಬಂದಾಗ ಬ್ರಿಟಿಷ್ ನ್ಯಾಯಾಧೀಶ ತಲೆ ಕೆರೆಯುತ್ತಾ`ವಾಟ್ ಈಸ್ ಪ್ರಸಾದಂ?’ (ಪ್ರಸಾದ ಅಂದರೆ ಏನು?) ಎಂದು ಕೇಳಿದನಂತೆ. ಆ ವರೆಗೆ ವಾದ ವಿವಾದ ಮಾಡಿ ತಮ್ಮ ತಮ್ಮ ಪರವಾಗಿ ತೀರ್ಪು ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತದ್ದ ವಾದಿ ಪ್ರತಿವಾದಿಗಳು ಗರಬಡಿದವರಂತಾಗಿ ಹೋದರಂತೆ.
ನಮ್ಮ ಭಾರತದ ದೇಶ ಸ್ವತಂತ್ರಗೊಂಡ ನಂತರವೂ ಇಂತಹಾ ಘಟನೆಗಳು ನಡೆಯುವುದು ತಪ್ಪಿಲ್ಲ. ಇತ್ತೀಚೆಗೆ ಸಗೋತ್ರ ವಿವಾಹದ ಬಗ್ಗೆ ಹಲವಾರು ಪ್ರಕರಣಗಳು ಕೋರ್ಟು ಕಟೆಕಟೆ ಹತ್ತುವುದು ನಡೆಯುತ್ತದೆ. ಇತ್ತೀಚೆಗೆ ದೆಹಲಿಯ ಶ್ರೇಷ್ಠ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ `ಗೋತ್ರ’ ಎಂದರೇನು? ಯಾರು ಮಾಡಿದ್ದು? ವೈಜ್ಞಾನಿಕ ಹಿನ್ನೆಲೆ ಏನು? ಯಾವುದೂ ಅರಿಯದೆ ಜನರನ್ನು ಗುಂಡಿಟ್ಟೋ, ಅಟ್ಟಾಡಿಸಿಯೋ ಹೊಡೆದು ಹತ್ಯೆಗೈಯುವುದೆಂದರೇನು? ಇದೆಂತಹಾ ಅನಿಷ್ಠ, ಅರಾಜಕ ಸಮಾಜದಲ್ಲಿ ನಾವಿದ್ದೇವೆ’ ಎಂದು ಪ್ರಶ್ನಿಸಿದೆ.
ಈಗ ಭಾರತದ ಪ್ರತಿಯೊಬ್ಬರೂ ಮೇಲೆ ಬ್ರಿಟಿಷ್ ನ್ಯಾಯಾಧೀಶನ ಸ್ಥಾನವನ್ನು ಅಲಂಕರಿಸಿ ಲಾಯಕ್ಕಾಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಗೋತ್ರ ಎಂದರೇನು? ಅದನ್ನು ಯಾರು ಹೇಳಿಕೊಡಬೇಕು. ಅದರ ಪ್ರಾಮುಖ್ಯತೆ ಏನು. ಅದು ಮಾನವನ ವಿವಾಹ ಸಂಬಂಧ ದಲ್ಲಿ ಎಂತಹಾ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಯಾರಿಗೂ ಆಸಕ್ತಿ ಇಲ್ಲ. ಅಕ್ಷರ ಕಲಿತ ವಿದ್ಯಾವಂತರು, ಪ್ರೀತಿ ಪ್ರೇಮ ಎಂದು ತಲೆ ಕೆಡಿಸಿಕೊಳ್ಳುವ ಯುವ ಪೀಳಿಗೆ ಇವ್ಯಾವುದನ್ನೂ ಲೆಕ್ಕಿಸುವುದಿಲ್ಲ. ಅದೆಲ್ಲಾ ಮೂಢನಂಬಿಕೆಗಳು ಗಂಡು – ಹೆಣ್ಣಿನ ನಡುವೆ ಪ್ರೀತಿ, ಪ್ರೇಮ ಯಾವಾಗ ಹೇಗೆ ಹುಟ್ಟುತ್ತದೆ ಎಂದು ಹೇಳಲು ಬರುವುದಿಲ್ಲ. ಇಂತ ಪ್ರಕೃತಿ ಸಹಜವಾದ ಪ್ರೀತಿಗೆ ತಡೆ ಒಡ್ಡುವುದು ಮಹಾಪರಾಧ ಎಂಬ ಭಾವನೆ ಬೆಳೆಯುತ್ತಿದೆ. ಹೌದು ಮನುಷ್ಯನೂ ಒಂದು ಪ್ರಾಣಿಯಲ್ಲವೇ?
ಭಾರತದ ಪ್ರತಿಯೊಂದು ಜನಾಂಗದಲ್ಲೂ ಗೋತ್ರದ ಪ್ರಭಾವ ಇದ್ದೇ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ಬ್ರಾಹ್ಮಣರಲ್ಲಿ ಕಶ್ಯಪ, ವಾಲ್ಮೀಕಿ, ಅಂಗೀರಸ, ವಿಶ್ವಾಮಿತ್ರ, ಭಾರದ್ವಾಜ, ಶ್ರೀವತ್ಸ, ವಶಿಷ್ಠ ಇತ್ಯಾದಿ ಗೋತ್ರ ಗಳು ಇವೆ. ಬ್ರಾಹ್ಮಣ ರಲ್ಲದವರಲ್ಲಿಯೂ ಗೋತ್ರದಂತೆ ಭಾವಿಸಲಾಗುವ ಗುಂಪುಗಳು ಇರು ತ್ತವೆ. ನಮ್ಮ ತುಳು ನಾಡಿನಲ್ಲಿ ಬರಿ ಅಥವಾ ಬಳಿ ಎಂದು ನಾವು ಏನನ್ನೂ ಹೇಳುತ್ತೇವೆಯೋ ಅದು ಗೋತ್ರಕ್ಕೆ ಸಮಾನವಾಗಿದೆ. ಗುಡ್ಡಗಾಡು ಜನಾಂಗಗಳಲ್ಲಿಯೂ ಇಂತಹಾ ಪದ್ಧತಿ ಇದೆ. ಒಟ್ಟಿನಲ್ಲಿ ಸಮಸ್ತ ಭಾರತದ ಹಿಂದೂಗಳಲ್ಲಿ ಮಾತ್ರವಲ್ಲ ಹಿಂದೂಗಳಿಂದ ಮತಾಂತರವಾದ ಮುಸ್ಲಿಂ, ಮತ್ತು ಕ್ರೈಸ್ತರಲ್ಲಿಯೂ ಗೋತ್ರದಂತಹಾ ಆಚರಣೆಗಳು ಕಂಡುಬರುತ್ತವೆ.
ಗೋತ್ರಗಳು ಅಥವ ಬಳಿ ಎಂದರೆ ಒಂದೇ ಕುಟುಂಬದವರು ಎಂದು ಅರ್ಥ. ಅಂದರೆ ಒಂದು ಗೋತ್ರದವರೆಲ್ಲಾ ರಕ್ತಸಂಬಂಧಿಗಳು ಅಣ್ಣತಮ್ಮಂದಿರು ಅಕ್ಕತಂಗಿಯರು ಆಗುತ್ತಾರೆ. ಹಾಗಿರುವಾಗ ಒಂದೇ ಗೋತ್ರದವರು ಮದುವೆಯಾಗುವಂತಿಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ನಾಲ್ಕೈದು ತಲೆಮಾರುಗಳ ನಂತರ ಗೋತ್ರದ ಪ್ರಭಾವ ಅಷ್ಟೇನೂ ಪ್ರಭಾವಿಯಾಗಿರುವುದಿಲ್ಲ ಎಂದು ಕೆಲವರು ಸ್ವಗೋತ್ರ ವಿವಾಹಕ್ಕೆ ಸಮರ್ಥನೆಯನ್ನೂ ನೀಡುತ್ತಾರೆ. ಇಲ್ಲದಿದ್ದರೆ ಅಣ್ಣ ತಂಗಿಯರೂ ಮದುವೆಯಾಗಬಹುದಲ್ಲವೇ?
ಗೋತ್ರಗಳ ಬಗ್ಗೆ ಅಚಲ ನಂಬಿಕೆ ಇರುವ ಕೆಲವು ಜನಾಂಗಗಳು ಸ್ವಗೋತ್ರ ವಿವಾಹವನ್ನು ಬಲವಾಗಿ ವಿರೋಧಿಸುತ್ತವೆ., ಉತ್ತರ ಭಾರತದಲ್ಲಿ ಸ್ವಗೋತ್ರ ವಿವಾಹ ವಾದವರನ್ನು ಸಾರ್ವಜನಿಕ ಹತ್ಯೆ ಮಾಡುವ ಅಮಾನುಷ ಕ್ರಮ ಈಗಲೂ ಚಾಲ್ತಿಯಲ್ಲಿದೆ. ಈ ಕಾರಣದಿಂದಾಗಿ ಸ್ವಗೋತ್ರದೊಳಗಿನ ಹೆಣ್ಣು – ಗಂಡುಗಳು ಪರಸ್ಪರ ಆಕರ್ಷಿತರಾಗಿ ಪ್ರೇಮವುಂಟಾಗಿ ಮದುವೆಯಾದ ಅಥವಾ ಮದುವೆಯಾಗಲಿರುವ ಪ್ರಕರಣಗಳು ವಿವಾದಕ್ಕೊಳಗಾಗಿ ಹಿಂಸಾಚಾರಕ್ಕೆ ಎಡೆಯಾಗಿ ಕೋರ್ಟು ಮೆಟ್ಟಲು ಹತ್ತಿವೆ. ನ್ಯಾಯಾಲಯವು ಈ ವಿಚಾರವನ್ನು ತೀರ್ಮಾನಿಸುವುದಾದರೂ ಹೇಗೆ?
ಕಾನೂನು ಪುಸ್ತಕಗಳಲ್ಲಿ ಗೋತ್ರಗಳ ವಿವರವಿಲ್ಲ. ಮದುವೆಯಾಗುವವರು ಪರಸ್ಪರ ವಿರುದ್ಧ ಲಿಂಗದವರಾದರೆ ಸಾಕು. ಇತ್ತೀಚೆಗಿನ ಬೆಳವಣಿಗೆಗಳಂತೆ ಜೋಡಿ ಅಂದರೆ ಇಬ್ಬರು ಆದರೆ ಸಾಕು. ಅದು ಗಂಡು – ಗಂಡು ಅಥವಾ ಹೆಣ್ಣು- ಹೆಣ್ಣು ಆಗಿರಬಹುದು. ಎಂಬಂತಾಗಿ ಹೋಗಿದೆ. ಹಾಗಿರುವಾಗ `ಸ್ವಗೋತ್ರ’ ವಿವಾಹದ ಬಗ್ಗೆ ನ್ಯಾಯಾಲಯದ ತೀರ್ಪು ಸಮಾಜದಲ್ಲಿರುವು ಪ್ರತಿಯೊಬ್ಬ ವ್ಯಕ್ತಿಯೂ ಸಮ್ಮತಿಸುವ ರೀತಿಯಲ್ಲಿ ಬರುವುದೇ ಇಲ್ಲ. ಬಹುಸಂಖ್ಯಾತರ ಮನಸ್ಸನ್ನು ನೋಯಿ ಸುವ ರೀತಿಯಲ್ಲಿ ತೀರ್ಪುಗಳು ಬರುವುದಕ್ಕೆ ನಾವು ದೂರುವುದಾದರೂ ಯಾರನ್ನು?
ಸ್ವಗೋತ್ರ ವಿವಾಹಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ ಎಂದು ಕೆಲವರು ಹೇಳಿದರೆ ವಿಜ್ಞಾನ ಸಮರ್ಥನೆ ನೀಡುತ್ತದೆ ಎಂದು ಕೆಲವರು ವಾದಿಸುತ್ತಾರೆ.ಸ್ವಗೋತ್ರ ಅಂದರೆ ರಕ್ತ ಸಂಬಂಧಿಗಳಲ್ಲಿ ವಿವಾಹವಾದರೆ ಮುಂದೆ ಹುಟ್ಟುವ ಮಕ್ಕಳಲ್ಲಿ ವಂಶವಾಹಿ(ಜೀನ್) ಗಳಿಗೆ ಸಂಬಂಧಿಸಿದ ತೊಂದರೆ ಉಂಟಾಗುತ್ತದೆ. ಅಂಗವಿಕಲತೆ, ಅನಾರೋಗ್ಯ ಕಾಡುತ್ತದೆ. ಬುದ್ದಿಮಾಂದ್ಯತೆ ಬೆಳೆಯುತ್ತದೆ ಎಂಬುದನ್ನು ಸಾಕ್ಷಿ ಸಮೇತವಾಗಿ ಕೆಲವು ವೈದ್ಯರು ನಿರೂಪಿಸುತ್ತಾರೆ. ಗರ್ಭಿಣಿಯರ ಆರೋಗ್ಯ ನೋಡಿಕೊಳ್ಳುತ್ತಿರುವ ಕೆಲವು ವೈದ್ಯರುಗಳು ಪತಿ ಪತ್ನಿಯರ ವಿವರಗಳನ್ನು ತಿಳಿದು ಕೊಳ್ಳುವುದೂ ಇದೆ. ಇದಕ್ಕೆ ಸಂಬಂದಿಸಿದಂತೆ ಹೊಟ್ಟೆಯೊಳಗಿರುವ ಮಗುವಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಚಿಕಿತ್ಸೆ ನೀಡುವುದೂ ನಡೆಯುತ್ತದೆ. ಆದರೆ ಅವೆಲ್ಲವೂ ಅನ್ ಅಫೀಶಿಯಲ್ ಆಗಿರುತ್ತದೆ. ಇದು ಅಧಿಕೃತವಾಗಿರುವುದಿಲ್ಲ.
ಬಹಿರಂಗವಾಗಿ ಈ ವಿಚಾರದಲ್ಲಿ ಚರ್ಚೆಯನ್ನೂ ಮಾಡುವಂತಿಲ್ಲ. ಹಾಗೆ ಮಾಡಿದರೆ ಅದು ಮೂಢನಂಬಿಕೆಯಾಗುತ್ತದೆ. ವೈಜ್ಞಾನಿಕವಾಗಿ ಸಾಬೀತಾಗದ್ದು ಎಂದು ಇದನ್ನು ಭಾವಿಸಲಾಗುತ್ತದೆ. ಈಗಲೂ ಕೆಲವು ಖ್ಯಾತ ವೈದ್ಯರು `ಅರಶಿನ ಕಾಮಾಲೆ’ ರೋಗ ಬಂದರೆ ಅದಕ್ಕೆ ಹಳ್ಳಿಯ ಮದ್ದು ಮಾಡುವಂತೆ ಅನಧಿಕೃತವಾಗಿ ಹೇಳುವುದು ಕಂಡು ಬರುತ್ತದೆ. ಮಾನಸಿಕವಾಗಿ ಅರಶಿನ ಕಾಮಾಲೆಗೆ ಆಧುನಿಕ ವೈದ್ಯಪದ್ಧತಿಯಲ್ಲಿ ಪರಿಣಾಮಕಾರಿ ಚಿಕಿತ್ಸೆ ಇಲ್ಲ ಎಂದು ಒಪ್ಪಿಕೊಂಡರೂ ಬಹಿರಂಗವಾಗಿ ಅದನ್ನು ಹೇಳುವಂತಿಲ್ಲ. ಇಂತಹಾ ವಿಪರ್ಯಾಸಗಳೇ ಸಗೋತ್ರ ಸಂಬಂಧದ ಬಗ್ಗೆಯೂ ಕಂಡು ಬರುತ್ತವೆ. ವಾಸ್ತವವಾಗಿ ದೇಶದ ಕಾನೂನುಗಳು ಆ ದೇಶದ ಬಹುಸಂಖ್ಯಾತ ಜನರ ನಂಬಿಕೆಗಳಿಗೆ ಅನುಗುಣವಾಗಿ ಇರಬೇಕಾಗುತ್ತದೆ. ಅದು ವೈಜ್ಞಾನಿಕವೋ, ಮೂಢನಂಬಿಕೆಯೋ ಎಂಬುದು ಗೌಣವಾಗಿರುತ್ತದೆ. ಆಧುನಿಕ ನಾಗರಿಕತೆಯ ತೊಟ್ಟಿಲುಗಳು ಎಂದು ಕರೆಯಲ್ಪಡುವ ಕೆಲವು ದೇಶಗಳಲ್ಲೂ ಮೂಢನಂಬಿಕೆಗಳು ವ್ಯಾಪಕವಾಗಿದೆ. ಆ ದೇಶದ ಕಾನೂನುಗಳು ಅವುಗಳನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ ಯಾಕೆಂದರೆ ಆ ಮೂಢನಂಬಿಕೆ(?)ಗಳಿಗೆ ಅನುಗುಣವಾಗಿಯೇ ಅಲ್ಲಿನ ಕಾನೂನುಗಳು ರಚಿತವಾಗಿರುತ್ತದೆ.
ಭಾರತದ ದೇಶದ ಬಹುಸಂಖ್ಯಾತ ಜನರು ಬಹು ಹಿಂದಿನ ಕಾಲದಿಂದ ಆಚರಿಸಿಕೊಂಡು, ನಂಬಿಕೊಂಡು ಬಂದಿರುವ ಗೋತ್ರಗಳ ಬಗ್ಗೆ ತೀರ್ಮಾನವನ್ನು ಯಾರಾದರೂ ಒಬ್ಬ ಕೊಡಬೇಕಾದರೆ ತೀರ್ಮಾನ ವನ್ನು ನೀಡುವವ ಗೋತ್ರಗಳ ಬಗ್ಗೆ ತಿಳಿದವನಾಗಿರಬೇಕು. ಗೋತ್ರ ಎಂದರೇನು? ಯಾರು ಮಾಡಿದ್ದು? ಎಂದು ಕೇಳುವ ನ್ಯಾಯಾಧೀಶನ ಎದುರು `ಗೋತ್ರ… ಗೋತ್ರ’ ಎಂದು ಬಾಯಿ ಬಡಿದು ಕೊಂಡರೆ ಗತಿಗೋತ್ರ ಇಲ್ಲದಂತಾಗಬಹುದಲ್ಲವೇ?
ಇನ್ನು ಮೂಲ್ಯರ ಗೋತ್ರದ (ಬಳಿ) ವಿಚಾರಕ್ಕೆ ಬರೋಣ..
ಮೂಲ್ಯ ರ ಸಂಸ್ಕೃತಿಯು ಮಾತೃಮಾಲೀಯ ಪದ್ಧತಿಯನ್ನು ಹೊಂದಿರುವ ಕುಟುಂಬ ಪದ್ಧತಿಯನ್ನು ಹೊಂದಿದೆ. ಇಲ್ಲಿ ಕೌಟುಂಬಿಕ ನೆಲೆಯಲ್ಲಿ ಮಹಿಳೆಗೆ ಪ್ರಧಾನವಾದ ಸ್ಥಾನವಿದೆ. ಅಳಿಯ ಸಂತಾನದ ಕಟ್ಟಳೆಯನ್ನು ಅನುಸರಿಸುವ ಇವರಲ್ಲಿ ಮಾತೃಪ್ರಧಾನ ಪರಿಕಲ್ಪನೆಯು ಬಳಕೆಯಲ್ಲಿದೆ. ಬಂಧುತ್ವದ ಸಂದರ್ಭದಲ್ಲಿ ಮುಖ್ಯವಾಗಿ ತಾಯಿಯ ಬಳಿಯು (ಗೋತ್ರ) ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಬರುತ್ತದೆ. ತಂದೆಯ ಬಳಿಯು ಇಲ್ಲಿ ಅಷ್ಟು ಮುಖ್ಯವಾಗಿಲ್ಲ. ಮದುವೆಯ ವಿಚಾರಕ್ಕೆ ಬಂದರೆ ಮೂಲ್ಯರಲ್ಲಿ ಒಳಬಾಂಧವ್ಯಕ್ಕೆ ಒತ್ತು ಕೊಡುತ್ತಿದ್ದುದು ಹೆಚ್ಚಾಗಿ ಕಂಡು ಬರುತ್ತದೆ. ಮದುವೆಯ ಸಂದರ್ಭದಲ್ಲಿ ತಂದೆಯ ಬಳಿಯ ಹುಡುಗನನ್ನು, ಹುಡುಗಿ ಮದುವೆ ಆಗಬಹುದು ಆದರೆ ತಾಯಿಯ ಬಳಿಯ ಹೆಣ್ಣು ಅದೇ ಬಳಿಯ ಗಂಡನ್ನು ಮದುವೆಯಾಗಲು ಕುಲಾಲರಲ್ಲಿ ಬಲವಾದ ನಿಷೇಧವಿದೆ. ತಾಯಿಯ ಬಳಿಯ ಹೆಣ್ಣು / ಗಂಡು ಒಂದೇ ರಕ್ತದವರು, ರಕ್ತ ಸಂಬಂಧಿಗಳು ಎಂದು ಪರಿಗಣಿಸಲ್ಪಡುತ್ತಾರೆ. ಉತ್ತರ ಕನ್ನಡದ ಕುಂಬಾರರಲ್ಲಿ ಅಕ್ಕನ ಮಗಳನ್ನು ವಿವಾಹವಾಗುವ ರೂಢಿ ಇತ್ತು. ಆದರೆ ಇದು ಇತರೆಡೆಗಳ ಕುಲಾಲರಲ್ಲಿ ಇಲ್ಲ.
ಮೂಲ್ಯರು/ಕುಲಾಲರು ಅಳಿಯ ಸಂತಾನ ಕಟ್ಟಿನ ಸಾಂಸಾರಿಕ ಕಟ್ಟುಪಾಡುಗಳನ್ನು ನಡೆಸಿಕೊಂಡು ಬಂದವರು. ಇವರಲ್ಲಿ ಹೆಣ್ಣಿನ ತಂದೆಯೇ ಮುಂದಾಗಿ ಗಂಡು ನೋಡಲು ಹೋಗುವ ಕ್ರಮವಿಲ್ಲ. ಬದಲಾಗಿ ಅವಳನ್ನು ಮದುವೆಯಾಗಬಯಸುವ ಗಂಡೇ ಹೆಣ್ಣಿನ ಮನೆಗೆ ಹೋಗಬೇಕು. ಮದುವೆಯ ಪ್ರಸ್ತಾಪ ಮಾಡಬೇಕು. ಹುಡುಗಿಗೆ ಹುಡುಗನೇ ಸಿಗದ ಸಂದರ್ಭದಲ್ಲೂ ಕೂಡ ಹುಡುಗಿಯ ತಂದೆ ತಾನಾಗಿಯೇ ಮುಂದೆ ಹೋಗುವಂತಿಲ್ಲ. ಇದು ಆ ಸಮುದಾಯದಲ್ಲಿ ಹೆಣ್ಣಿಗಿರುವ ಮಹತ್ವವನ್ನು ಸೂಚಿಸುತ್ತದೆ.
ದಕ್ಷಿಣಕನ್ನಡದ ಕುಲಾಲರಲ್ಲಿ ಹುಡುಗರು ತಮ್ಮ ಸಹೋದರಿಯ ಮಗಳನ್ನು ಅರ್ಥಾತ್ ತಮ್ಮ ಸೋದರ ಸೊಸೆಯನ್ನು ಮದುವೆಯಾಗುವ ಕ್ರಮವಿಲ್ಲ. ಅವಳು ಅವರಿಗೆ ಮಗಳ ಸಮಾನಳು. ಉತ್ತರ ಕನ್ನಡದ ಹಳೆಪೈಕದವರಲ್ಲಿ ಸಾಮಾನ್ಯವಾಗಿರುವ ಇಂತಹ ವಿವಾಹವು ಕುಲಾಲರಲ್ಲಿ ಅನಿವಾರ್ಯವಾದಾಗ ಮಾತ್ರ ನಡೆದುದೂ ಇದೆ. ಇದಕ್ಕೆ ಸಂಬಂಧಿಸಿ, “ಅಕ್ಕನ ಮಗಳನ್ನು ಮದುವೆಯಾಗುವವನು ದಿಕ್ಕಿಲ್ಲದವನು” ಎಂಬ ನಾಣ್ಣುಡಿಯೂ ಅವರಲ್ಲಿದೆ. ವಿವಾಹದ ವಿಧಿವಿಧಾನಗಳಲ್ಲಿ ಹುಡುಗಿಯ ಸೋದರಮಾವನಿಗೆ ಪ್ರಮುಖ ಪಾತ್ರವಿರುತ್ತದೆ. ಹುಡುಗನಿಗೆ ತನ್ನ ತಾಯಿಯ ಅಣ್ಣನ ಅಥವಾ ತಮ್ಮನ (ಸೋದರಮಾವನ) ಮಗಳನ್ನು ಮದುವೆಯಾಗುವ ಹಕ್ಕು ಹುಟ್ಟಿನಿಂದ ತಾನಾಗಿಯೇ ಬಂದಿರುತ್ತದೆ.
(ತುಳು)ಕುಲಾಲರ ಮದುವೆಯಲ್ಲಿ ಬಳಿಗಳ ಪರಿಶೀಲನೆ ಮುಖ್ಯವಾಗಿದ್ದು, ಸಮಾನ ಬಳಿಗಳಲ್ಲಿ ವಿವಾಹ ನಿಷೇಧವೆನಿಸಿದೆ. ವೈಜ್ಞಾನಿಕವಾಗಿಯೂ ರಕ್ತಸಂಬಂಧಿಗಳಲ್ಲಿಸ ವಿವಾಹ ನಿಷಿದ್ಧವಾಗಿದೆ. ಆದರೆ ಇದು ಹಿಂದಿನಿಂದಲೂ ಕುಲಾಲರಂಥ ಹಲವು ಸಮುದಾಯಗಳಲ್ಲಿ ರೂಢಿಯಲ್ಲಿದ್ದುದು ಆರೋಗ್ಯಕರ ಸಂಗತಿಯಾಗಿದೆ. ಕುಲಾಲರ ಬಳಿಗಳು ಪ್ರಾಣಿ, ಪಕ್ಷಿ, ಮರ, ವಸ್ತು ಇತ್ಯಾದಿಗಳನ್ನು ಪ್ರತಿನಿಧಿಸುತ್ತಿದ್ದು, ಅವು ಆದಿವಾಸಿ ಮಾನವರ ಕುಲಚಿಹ್ನೆಗಳಂತೆ ಕಾಣುತ್ತವೆ. ಕುಲಾಲರು ತಮ್ಮ ಹೆಸರುಗಳನ್ನು ತಾಯಿಯ ಕಡೆಯ ಬಳಿಯಿಂದ ಗುರುತಿಸಿ ಕೊಂಡಿರುವುದು ಕಂಡು ಬರುತ್ತದೆ. ಇದು ಮಾತೃಮೂಲದ ಚಿಹ್ನೆಯಾಗಿ ಅಳಿಯ ಸಂತಾನ ಕಟ್ಟಿನ ಪ್ರಭಾವವನ್ನು ಸೂಚಿಸುತ್ತದೆ.