ಕಾಡಿನಿಂದ ಕೃಷಿ ಸಂಸ್ಕೃತಿಯ ನಾಡು ಕಟ್ಟಿದ ಆದಿ ಕಾಲದ ಜಾತಿ ರಹಿತ ತುಳುವ ಸಮಾಜವು ಒಂದು ಕುಟುಂಬ ಆಗಿ ಬದುಕಿರುವುದಕ್ಕೆ ದೃಷ್ಟಾಂತಗಳನ್ನು ನಾವು ಈಗಲೂ ಇಲ್ಲಿಯ ಆಚರಣೆಗಳಲ್ಲಿ ಕಾಣಬಹುದು. ತುಳುವರ ಮೂಲತಾನ ಆದಿ ಆಲಡೆಯ ಆಚರಣೆಗಳು ಬುಡಗಟ್ಟು ಜನಾಂಗಗಳ ಪಾಳಯಗಾರಿಕೆಯ ಯುಗದಲ್ಲಿ ಪ್ರತಿ ಗುಂಪು, ಒಂದು ಕುಟುಂಬವಾಗಿ ಬದುಕಿದುದರ ಕುರುಹುಗಳು ಸಿಗುತ್ತವೆ. ಆದಿ ಆಲಡೆ ಮೂಲತಾನದ ಬಳಿ ಇರುವ ಕಂಬುಲ ಮತ್ತು ಬಾಕಿಮಾರು ಗದ್ದೆಗಳು 50 ಎಕ್ರೆಯವರೆಗೂ ವಿಶಾಲವಾಗಿದ್ದು ಇಲ್ಲಿಯ ಆಚರಣೆಗಳು “ಸಾಮೂಹಿಕ ಸೊತ್ತೂಡೆತನ, ಸಾಮೂಹಿಕ ಶ್ರಮ, ಸಾಮೂಹಿಕ ಫಲಾನುಭವ’ ಕುಟುಂಬ ಪದ್ಧತಿಯ ಕುರುಹುಗಳಾಗಿ ಕಾಣುತ್ತವೆ. ಸಾಮೂಹಿಕ ಜೀವನದ ಕುಟುಂಬ ಪದ್ಧತಿಯ ನಿಯಂತ್ರಕರು ಮೂಲತಾನದ “ನಾಗ ಬಿರ್ಮೆರ್ ಮತ್ತು ಪರಿವಾರ ದೈವಗಳು’. ನಾಗಬಿರ್ಮೆರ್ ದೈವದ ಪ್ರತಿನಿಧಿಗಳಾಗಿ “ಬೀಡು’ ಗಳ ಪಾಳೆಯಗಾರರು ಆಡಳಿತ ನಡೆಸುತ್ತಿದ್ದರು. ಈಗಲೂ ಒಂದು ವಂಶ/ಬಳಿ ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ತಮ್ಮ ಮೂಲತಾನ ಆಲಡೆಯ ನಾಗ ಬಿರ್ಮೆರ್ ಮತ್ತು ಪರಿವಾರ ದೈವಗಳನ್ನು , ಒಟ್ಟಿಗೆ ಸೇರಿ ಆರಾಧಿಸಿ ಒಟ್ಟಿಗೆ ಬೇಯಿಸಿ, ಒಟ್ಟಿಗೆ ಅಗೆಲ್/ಎಡೆ ಇಟ್ಟು , ಒಟ್ಟಿಗೆ ಉಂರುವ ಆಚರಣೆಗಳು ಜೀವಂತ ಇವೆ. ಮುಂದೆ ಜಾತಿ ಹುಟ್ಟಿಕೊಂಡು ಒಂದೇ ವಂಶ/ಬಳಿಯವರು ಬೇರೆ ಬೇರೆ ಜಾತಿಗಳಾಗಿ ಹೋದರೂ ಈಗಲೂ ಹಳ್ಳಿಗಳಲ್ಲಿ ಒಂದೇ ವಂಶದ ಬೇರೆ ಬೇರೆ ಜಾತಿಗಳವರು ಒಂದೆಡೆ ಸೇರಿದಾಗ, “”ನಾವು ನೀವು ಅಕ್ಕತಂಗಿಯರ ಮಕ್ಕಳು’ ಎನ್ನುವುದು ಇದೆ.
ಮಾತೃಮೂಲೀಯ ಕುಟುಂಬ ಪದ್ಧತಿ
ತುಳುವರು ಮಾತೃಮೂಲೀಯ ಕುಟುಂಬ ಪದ್ಧತಿಯವರು. ಅಳಿಯ ಸಂತಾನ ಕಟ್ಟು ಎಂದೂ ಈ ಪದ್ಧತಿಯನ್ನು ಕರೆಯುತ್ತಾರೆ. ತಾಯಿಯ ವಂಶ/ಬಳಿ, ತಾಯಿಯ ಸಮಸ್ತ ಆಸ್ತಿ, ತಾಯಿ ಮನೆಯ ಭೂತ, ಸತ್ತ ಹಿರಿಯರು, ಸೂತಕ, ಪಾತಕ, ಎಡೆ/ಅಗೆಲ್, ಕೋಲ, ನೇಮ, ಮದುವೆ – ಇತ್ಯಾದಿ ಮಾತೃವಂಶೀಯವಾಗಿ ಮುಂದುವರಿಯುವುದರಿಂದ ಇದನ್ನು “ಮಾತೃಮೂಲೀಯ ಕುಟುಂಬ ಪದ್ಧತಿ’ ಎಂದು ಕರೆಯುತ್ತಾರೆ. ಆದರೆ, ತುಳುನಾಡಿನಲ್ಲಿ ಈ ಪದ್ಧತಿಯನ್ನು ಅಳಿಯ ಸಂತಾನ ಪದ್ಧತಿ ಎಂದೇ ಕರೆಯುತ್ತಾರೆ. ಪಟ್ಟದ ಅರಸನ ಅನಂತರ ಅವನ ರಾಜ್ಯಾಧಿಕಾರದ ಉತ್ತರಾಧಿಕಾರಿಯಾಗಿ ಅವನ ಸೋದರಿಯ ಮಗ, ಅಳಿಯ/ಅರ್ವದ ಅರಸನಾಗುತ್ತಾನೆ. ಸೋದರ ಮಾವನ ಉತ್ತರಾಧಿಕಾರಿಯಾದ ಆತನ ಬಳಿ/ವಂಶವೂ ಸೋದರಮಾವನಿಂದ ಮುಂದುವರಿಯುತ್ತದೆ. ಅಂದರೆ ಸೋದರಳಿಯನು ಸೋದರಮಾವನ ಹೆಸರಿನಿಂದ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ. ತಂದೆಯ ಹೆಸರಿನಿಂದ ಅಲ್ಲ. ಹೀಗಾಗಿ, “ಅಳಿಯ ಸಂತಾನ’ ಪದ್ಧತಿ ಎಂಬ ಹೆಸರು ರೂಢವಾಯಿತು. ಸುಮಾರು 10/11ನೆಯ ಶತಮಾನದ ಶಾಸನಗಳಲ್ಲಿ ಕೂಡಾ ಸೋದರಳಿಯಂದಿರ ಪ್ರಸ್ತಾಪಗಳಿವೆ.
ಕುಟುಂಬ
ಒಂದು ಹೆಣ್ಣು ಹೆತ್ತ ಎಲ್ಲಾ ಹೆಣ್ಣು ಗಂಡು ಮಕ್ಕಳು, ಹಾಗೂ ಅವಳ ಹೆಣ್ಣು ಮಕ್ಕಳ ಹೆಣ್ಣು ಗಂಡು ಮಕ್ಕಳು ಒಂದು ಕುಟುಂಬ. ತಾಯಿ, ಹಿರಿತಾಯಿ, ಕಿರಿತಾಯಿ, ಸೋದರಮಾವ, ಸೋದರಜ್ಜ (ತಾಯಿಯ ಸೋದರ ಮಾವ) ಅಣ್ಣ ತಮ್ಮ – ಹೀಗೆ ಇವರೆಲ್ಲ ಒಂದು ಕುಟುಂಬ. ಸೂತಕ ಪಾತಕ ಆಚರಿಸುವ, ಒಂದು ಅಂಡೆಯಲ್ಲಿ ಬೇಯಿಸಿ ಉಂಡವರು ಒಂದು ಕುಟುಂಬ. ಭೂಮಿಯ ಧಾರಣ ಶಕ್ತಿ ಕಡಿಮೆಯಾದಾಗ ಪಾಲಾಗಿ ಕವಲುಗಳಾಗಿ ದೂರ ಹೋಗಿ ನೆಲಸಿದವರು ಬಳಿಯ ಮೂಲಕ ಗುರುತಿಸಿಕೊಳ್ಳುತ್ತಾರೆ. ಇವರೆಲ್ಲ ಬದುಕಿರುವಾಗ ಮಾತ್ರವಲ್ಲ ಸತ್ತಮೇಲೂ ಅದೇ ಕುಟುಂಬದಲ್ಲಿ ಗುರುತಿಸಿಕೊಳ್ಳುತ್ತಾರೆ. ತುಳು ಸಂಸ್ಕೃತಿಯಲ್ಲಿ ಸ್ವರ್ಗ ನರಕದ ಕಲ್ಪನೆಯಿಲ್ಲ. ಹೀಗಾಗಿ, ಕುಟುಂಬದ ಹಿರಿಯ ಬದುಕಿರುವಾಗ ಅವನಿಗಿಂತ ಕಿರಿಯ ಮೃತನಾದಲ್ಲಿ ಅವನ ಉತ್ತರಕ್ರಿಯೆಯನ್ನು 13ನೆಯ ದಿನ ಮಾಡಬಾರದು. ಲೋಕಾಚರಣೆಯಂತೆ 11/12ನೆಯ ದಿನ ನಿರಾಡಂಬರವಾಗಿ ಮಾಡಬೇಕು. ಕುಟುಂಬದ ಹಿರಿಯ ವ್ಯಕ್ತಿಗಳ ಸಾವಾದರೆ ಅದನ್ನು ಸಹಜವೆಂಬಂತೆ ಸ್ವೀಕರಿಸಿ ಅವರ ಉತ್ತರಕ್ರಿಯೆಯನ್ನು 13ನೆಯ ದಿನ ಅದ್ದೂರಿಯಿಂದ ಮಾಡಬೇಕು. ರಾತ್ರಿಯಲ್ಲಿ ನಡೆಯುವ ಮಡೆಬೊಜ್ಜದಂದು ಅಥವಾ 16ನೆಯ ದಿನದ ರಾತ್ರಿ ಈ ಮೊದಲು ಸತ್ತ ಹಿರಿಯ ಪ್ರೇತಾತ್ಮಗಳ ಜೊತೆ ಹೊಸ ಪ್ರೇತಾತ್ಮವನ್ನು ಸೇರಿಸಬೇಕು. ಆ ದಿನ 16 ಎಲೆಗಳಲ್ಲಿ ಅಗೆಲ್/ಎಡೆ ಬಡಿಸಿ ಇಟ್ಟು ಅದರ ಬಳಿ ಒಂದು ಪ್ರತ್ಯೇಕ ಎಲೆಯಲ್ಲಿ ಅಂದಿನ ಮೃತವ್ಯಕ್ತಿಯ ವಸ್ತುಗಳನ್ನು ಇಟ್ಟು ಬಡಿಸಿ ಈ ಹೊಸ ಆತ್ಮವನ್ನು ಕುಟುಂಬ ಕೂಟದ ಹಿರಿಯ ಪ್ರೇತಾತ್ಮಗಳು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುವವರು ಸತ್ತ ವ್ಯಕ್ತಿಯ ಸೋದರ ಸೋದರಿಯವರು, ಸೋದರಳಿಯಂದಿರು, ಸೊಸೆಯಂದಿರು ಮತ್ತು ಸೊಸೆಯ ಮಕ್ಕಳು. ಇಲ್ಲವಾದಲ್ಲಿ ಸತ್ತ ವ್ಯಕ್ತಿಗೆ ಅನ್ನ ಆಹಾರವಿಲ್ಲದೆ ಅಂಡಧಿಲೆಯುತ್ತ ಕುಟುಂಬ ಸದಸ್ಯರಿಗೆ ತೊಂದರೆ ಕೊಡುತ್ತಾನೆ ಎನ್ನುವುದು ನಂಬಿಕೆ. ಮಕ್ಕಳು ಅಗೆಲ್ ಬಡಿಸಿದರೆ ಆತ ಮುಟ್ಟಲಾರ, ಅದು ಸತ್ತ ವ್ಯಕ್ತಿಗೆ ಅವಮಾನ. ಕಾರಣ, ಆತನ ಹೆಂಡತಿಯ ಕುಟುಂಬದವರು “ಪೊದ್ದ’ (ನೆಂಟ)ನನ್ನು ತಮ್ಮೊಂದಿಗೆ ಸೇರಿಸುವುದಿಲ್ಲ. ಆಚರಣೆ ಮುಗಿದ ಮೇಲೆ ಆ ಎಲೆಗಳ ಊಟವನ್ನೂ ಕುಟುಂಬದವರೇ ಮಾಡಬೇಕು.ಪುರುಷ ಪ್ರಧಾನ ಸಮಾಜವಿದು. ಮಾತೃವಂಶೀಯ ಕುಟುಂಬದಲ್ಲಿ ಆಸ್ತಿ ಮಹಿಳೆಯ ಹೆಸರಲ್ಲಿ ಇದ್ದರೂ ಆಸ್ತಿಯ ಅನುಭೋಗದ ಅಧಿಕಾರ ಸೋದರ ಪುರುಷನಲ್ಲಿ ಇರುತ್ತದೆ. ಚಾವಡಿ ಮನೆಗಳ ದೈವ ದೇವರು ಮತ್ತು ಮನೆಯ ಸುಸ್ಥಿಗಾಗಿ ಬೇಕಾದ ಆಸ್ತಿ ಸೋದರ ಪುರುಷನ ಹೆಸರಲ್ಲಿಯೇ ಇರುತ್ತದೆ. ಆದರೆ, ಈ ಆಸ್ತಿಯನ್ನು ಮಾರುವ ಅಥವಾ ಮಡದಿ ಮಕ್ಕಳಿಗೆ ನೀಡುವ ಅಧಿಕಾರ ಯಜಮಾನನಿಗೆ ಇರುವುದಿಲ್ಲ. ಈತ ಅರಸನಾದರೂ ಇಲ್ಲ. ಕ್ರಿ.ಶ. 1161ರ ಕೂರ್ಸಿ ಶಾಸನವು ಕುಲಸೇಖರಾಳುಪೇಂದ್ರನು ಮಡದಿ ಮಕ್ಕಳಿಗೆ ಕುಟುಂಬದ ಆಸ್ತಿ ನೀಡುವಾಗ ತನ್ನ ಸೋದರಿಯರು ಮತ್ತು ಅಳಿಯಂದಿರ ಒಪ್ಪಿಗೆ ಪಡೆದು ನೀಡುವ ಉಲ್ಲೇಖ ನೀಡುತ್ತದೆ. ಈ ಶಾಸನದಲ್ಲಿ ಅಳಿಯ ಶ್ರೀ ಮತ್ಪಾಂಡ್ಯಪಟ್ಟಿಗದೇವರುಂ, ಬಲ್ಲಹದೇವರು, ಕುಲಶೇಖರ ದೇವರುಂ, ಕೀರ್ತಿದೇವರುಂ, ಪಟ್ಟಮಹಾದೇವಿಯರುಂ, ಬಮ್ಮಲ ದೇವಿಯರುಂ – ಮತ್ತೆ ಇವರ ಬಸುರಲ್ಲಿ ಬಂದ ಕುಮಾರ ಬಂಕಿ ದೇವ ಮತ್ತು ಬಲ್ಲಮದೇವ- ಹೀಗೆ ಇದೆ. ಈ ಅಳಿಯ ಬಂಕಿದೇವನಿಗೆ ಮುಂದೆ ಮುಗುರುನಾಡಿನ ರಾಜ್ಯವನ್ನು ಕುಲಸೇಖರಾಳುಪೇಂದ್ರ ಬಿಟ್ಟುಕೊಡುತ್ತಾನೆ. ಸೋದರಮಾವ ಅರಸನಾದರೂ ಆತ ತಪ್ಪಿ ನಡೆದರೆ “”ಮಾವನ ತೆಗೆದು ಅಳಿಯನ ಕುಳ್ಳಿರಿಸಿ’ ಎಂಬ 15ನೆಯ ಶತಮಾನದ ಶಾಸನ ಉಲ್ಲೇಖ ಇದೆ. ಸೋದರಮಾವ ತಪ್ಪಿ ನಡೆದರೆ ಆತನನ್ನು ಪಟ್ಟದಿಂದ ಇಳಿಸಿ ಅಳಿಯನನ್ನು ಪಟ್ಟದಲ್ಲಿ ತರಬೇಕು ಎಂಬುದು ಇದರ ಪಾಠ.
ದತ್ತುಪದ್ಧತಿ
ತುಳುವರ ಹೆಣ್ಣಿನಿಂದ ತುಳುವರ ಕುಟುಂಬ ಮುಂದುವರಿಯುತ್ತದೆ. ಒಬ್ಬ ಬಡವಿಯೂ ಹೆಣ್ಣು ಜನ್ಮ ನಿರರ್ಥಕ ಎನ್ನುವುದನ್ನು ನಾನು ಕೇಳಿದ್ದೇನೆ. ಇಲ್ಲಿ ಸಂತಾನ ಇಲ್ಲದವರು ದತ್ತು ತರುವ ಪದ್ಧತಿ ಇದೆ. ಮಕ್ಕಳಿಲ್ಲದ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣು ಮಗುವನ್ನು ದತ್ತು ತರುತ್ತಾರೆ. ಗಂಡು ಮಗ ರಾಜ್ಯ ಆಳಲು, ಹೆಣ್ಣು ಮಗಳು ಸಂತಾನ ಮುಂದುವರಿಸಲು, ಕುಟುಂಬ ಮುಂದುವರಿಸಲು. ತಮ್ಮದೇ ಕುಟುಂಬದ ಬೇರೆ ಕವಲಿನಿಂದ ಅಥವಾ ತಮ್ಮ ಬಳಿ/ವಂಶದಿಂದ ದತ್ತು ತರುತ್ತಾರೆ. ತುಳುವರಲ್ಲಿ ತನ್ನ ತಾಯಿಯ ಬಳಿ/ಕುಟುಂಬದಿಂದ ದತ್ತು ತರುವ ಪದ್ಧತಿ 1950ರವರೆಗೆ ಇತ್ತು.
ಕುಟುಂಬದಿಂದ ಬಹಿಷ್ಕಾರ
ತುಳು ಪದ್ಧತಿಯಲ್ಲಿ ಗುತ್ತುಬೀಡುಗಳ ಹೆಣ್ಣು ನಡೆತೆಗೆಟ್ಟರೆ ಒಂದೋ ಅವಳನ್ನು ಕೊಲ್ಲುತ್ತಿದ್ದರು, ಕೈಮೀರಿದರೆ ಅವಳಿಗೆ ಬಹಿಷ್ಕಾರ ಹಾಕುತ್ತಿದ್ದರು. ಬಹಿಷ್ಕಾರ ಹಾಕಿದ ಮೇಲೆ ಕುಟುಂಬ ಕೂಟಕ್ಕೆ ಅವಳಿಗೆ ಮಾತ್ರವಲ್ಲ ಅವಳ ಮಕ್ಕಳಿಗೂ, ಅವರ ಪ್ರೇತಾತ್ಮಗಳಿಗೂ ಪ್ರವೇಶ ಇಲ್ಲ. ಕಾಲಾನಂತರ ಬಹಿಷ್ಕಾರ ತೆಗೆಯಬೇಕಾದರೆ ಚಾವಡಿ ದೈವದ ಅನುಮತಿ ಬೇಕಾಗುತ್ತದೆ.
ಸಾವು ಪಾಲಿನ ಮನೆ
ತುಳುವರು ಎಲ್ಲಿ ಮೃತರಾದರೂ ಅವರ ಶವವನ್ನು ತನ್ನ ಕುಟುಂಬದ ಮೂಲ ಮನೆಯ ದೂಪೆ/ಸ್ತೂಪದ ಗದ್ದೆಯಲ್ಲಿ ಸುಡುವುದು ಪದ್ಧತಿ. ಸುಡಲಾಗದವರು ಉತ್ತರಕ್ರಿಯೆ ಇಲ್ಲಿ ಮಾಡಬೇಕು… ಅದು ಆಗದವರು 16 ದಿನ ಒಳಗೆ ಕರೆಯುವ ವಿಧಿಯನ್ನು ಮೂಲ ಮನೆಯಲ್ಲಿ ಆಚರಿಸುತ್ತಾರೆ. ಹೀಗಾಗಿ ಕುಟುಂಬದ ಮೂಲ ಮನೆಯನ್ನು ಸಾವುಪಾಲಿನ ಮನೆ ಎನ್ನುತ್ತಾರೆ.
ಕನ್ಯಾದಾನ ಇಲ್ಲ
ತುಳು ಕುಟುಂಬ ಪದ್ಧತಿಯಲ್ಲಿ ಕನ್ಯಾದಾನ ಇಲ್ಲ. ಹೀಗಾಗಿ ತುಳುವರಲ್ಲಿ “ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಆಗುವುದಿಲ್ಲ. ಹೀಗಾಗಿ ಕಿಕ್ಕಾಯಿ ತಾಯಿ 3ನೆಯ ಹೊಯ್ಸಳ ಬಲ್ಲಾಳನ ಪಟ್ಟದ ಪಿರಿಯರಸಿ ಆಗಿದ್ದರೂ ಆಕೆ ತನ್ನ ಸೋದರಮಾವ ಸೋಯಿದೇವ ಆಳುಪೇಂದ್ರನು ಆಳಿದ್ದ ಬಾಕೂìರಿನಿಂದಲೇ ಆಳುತ್ತಾಳೆ. ಹೊಯ್ಸಳರು ತುಳುನಾಡಿನ ಮೇಲೆ ಪ್ರಭುತ್ವ ಸಾಧಿಸಿದ್ದರೂ ಆಳುಪ ರಾಜಕುಮಾರಿ ಕಿಕ್ಕಾಯಿತಾಯಿಯೊಂದಿಗೆ ಮೂರನೆಯ ಬಲ್ಲಾಳನ ಮದುವೆ ಆಗುವುದರ ಮೂಲಕ ಎರಡೂ ಮನೆತನದ ರಾಜಕೀಯ ದ್ವೇಷ ಕೊನೆಗೊಂಡಿತ್ತು. “ಶ್ರೀ ವೀರ ಬಲ್ಲಾಳ ದೇವದರಸರ ಪಟ್ಟದ ಪಿರಿಯರಸಿ ಕಿಕ್ಕಾಯಿ ತಾಯಿ’ ಎಂದು ಒಂದೆರಡು ಶಾಸನದಲ್ಲಿ ಹೇಳಿದರೂ ಕಿಕ್ಕಾಯಿತಾಯಿ ಹೊಯ್ಸಳ ಬಲ್ಲಾಳನ ರಾಜ್ಯಕ್ಕೆ ಹೋಗದೆ ತುಳುನಾಡಿನಲ್ಲಿ ಉಳಿದು ತನ್ನ ಹಿರಿಯರ ರಾಜ್ಯಕ್ಕೆ (ಕ್ರಿ. ಶ. 1336) ರಾಣಿಯಾಗುತ್ತಾಳೆ. ಇವಳ ಮಗ ಕುಲಶೇಖರ ಬಾಕೂìರಿನಿಂದ ರಾಜ್ಯ ಆಳುತ್ತಾನೆ. ತಾನು ಹೊಯ್ಸಳ ಬಲ್ಲಾಳನ ಮಗನೆಂದು ಆತ ಹೇಳಿಕೊಳ್ಳುವುದಿಲ್ಲ.
ಹೆಣ್ಣಿಗೆ ಆಳ್ತನವೆ?
ಈ ಮಾತನ್ನು ತುಳುನಾಡ ಸಿರಿಗೆ ಪತ್ತೇರಿ ಕೂಟದವರು ಕೇಳಿದ್ದರು. ರೂಢಿಯಲ್ಲಿ ಆಡಳಿತವನ್ನು ಪುರುಷನೇ ನಡೆಸುತ್ತಾನೆ. ಗುತ್ತುಗಳಲ್ಲಿ ಪುರುಷ ದಿಕ್ಕಿಲ್ಲದವರು ಆಡಳಿತ ನಡೆಸಲು ತುಳುನಾಡಿನಲ್ಲಿ ಬೇರೆ ವ್ಯವಸ್ಥೆ ಇತ್ತು. “ತಮೆರಿ ಮೀರಿ ಪೊಣ್ಣತ್ತ್’ ಎನ್ನುವುದು ಇಲ್ಲಿಯ ರೂಢಿ ಮಾತು. ತಮೆರಿ ಎಂದರೆ ಸೋದರ ವರ್ಗ. ಗಂಡನ ಮಾತು ಮೀರಿ ನಡೆಯಬಹುದು. ಹೆಣ್ಣು ಸೋದರನಿಗೆ, ಸೋದರಮಾವನಿಗೆ ಹೆದರಿ ಇರಬೇಕಿತ್ತು. ಗಂಡನಿಗಲ್ಲ. ಯಾವುದೇ ಕೂಟ ಕಂಬುಲಗಳಿಗೆ ಆಕೆ ಹೋಗುವಂತಿರಲಿಲ್ಲ. ಕಾರಣ ಆಕೆ ಕುಟುಂಬದ ಕಣ್ಣು . ಅವಳ ನಡತೆಯ ಪ್ರಭಾವ ಆ ಕುಟುಂಬದ ಮೇಲಾಗುತ್ತದೆ. ಆದರೆ ಇಲ್ಲಿಯ ಶಾಸನಗಳಲ್ಲಿ ಮಹಿಳೆಯರು ಒಡ್ಡೋಲಗದಲ್ಲಿರುವ ರಾಣಿಯರ ಉಲ್ಲೇಖ ಇದೆ. ಇಲ್ಲಿಯ ಆಲಡೆಗಳ ಬಿಂಬಾಲಯಗಳಲ್ಲಿ ರಾಣಿಯರ ಉರು (ಶಿಲ್ಪ)ಗಳಿವೆ. ತುಳುನಾಡಿನ ಶಾಸನಗಳಲ್ಲಿ ಮಹಿಳೆ ಪಟ್ಟದ ಪಿರಿಯರಸಿಯಾಗಿ, ಆಳುವ ರಾಣಿಯಾಗಿ, ಅಧಿಕಾರಿಯಾಗಿ ಮಾತ್ರವಲ್ಲ ಸೇನಬೋವತಿಯಾಗಿಯೂ ಕಾರ್ಯನಿರ್ವಹಿಸಿದ ಬಗ್ಗೆ ಉಲ್ಲೇಖಗಳಿವೆ.
ಕ್ರಿ.ಶ. 1155ರ ಶಾಸನವೊಂದು ಆ ಊರನಾಳ್ವ ಪಾಂಡ್ಯಮಹಾದೇವಿಯರನ್ನು ಉಲ್ಲೇಖೀಸುತ್ತದೆ. ಕ್ರಿ.ಶ. 1261 ಮತ್ತು 1262ರ ಕೋಟೇಶ್ವರ ಶಾಸನದಲ್ಲಿ ಪಟ್ಟ ಮಹಾದೇವಿ ಒಡ್ಡೋಲಗದಲ್ಲಿ ಭಾಗಿಯಾಗಿರುವ ಮಾಹಿತಿ ಸಿಗುತ್ತದೆ. ಇಲ್ಲಿ ಈಕೆಯ ಹೆಸರು ಮೊದಲು ಲಿಖೀತವಾಗಿದ್ದು ಅನಂತರ ಶೀಮತ್ಪಾಂಡ್ಯದೇವಾಳುಪೇಂದ್ರರ ಹೆಸರನ್ನು ಉಲ್ಲೇಖೀಸಿದೆ. ಹೀಗಾಗಿ ಈಕೆ ಪಟ್ಟದಬ್ಬೆ ಅಥವಾ ಪಟ್ಟ ಭಗಿನಿ ಆಗಿರಬಹುದು. ಬಲ್ಲಮಹಾದೇವಿಯ ಒಡ್ಡೋಲಗಗೊಟ್ಟಿರುವ ಬಗ್ಗೆ ಕೆಲವು ಶಾಸನ ಪಾಠ ಇದೆ. ಆದರೆ ಇವಳನ್ನು “ಆಳುಪರಾಣಿ ಅಥವಾ ಆಳುಪರಸಿ ಬಲ್ಲಮಹಾದೇವಿ’ ಎಂದು ಯಾವ ಶಾಸನದಲ್ಲೂ ಉಲ್ಲೇಖ ಇಲ್ಲ. ನೋಡಬಾರದು’. “ಮಜ್ಜಿಗೆಗೆ ಬಂದವಳು ಎಮ್ಮೆಗೆ ಬೆಲೆ ಕಟ್ಟಬಾರದು’ “ಅಪ್ಪ ಸತ್ತ ಮೇಲೆ ಅಪ್ಪನ ಮನೆಯಲ್ಲಿ ಇರಬಾರದು, ಮಳೆ ನಿಂತ ಮೇಲೆ ಮರದಡಿ ನಿಲ್ಲಬಾರದು’ – ಇಂತಹ ಅನೇಕ ರೂಢಿಮಾತುಗಳು ಇಲ್ಲಿಯ ಪದ್ಧತಿಗೆ ಕನ್ನಡಿ ಹಿಡಿಯುತ್ತದೆ. ಕಿಕ್ಕಾಯಿ ತಾಯಿಯನ್ನು “ಶ್ರೀ ವೀರ ಬಲ್ಲಾಳ ದೇವದರಸರ ಪಟ್ಟದ ಪಿರಿಯರಸಿ ಕಿಕ್ಕಾಯಿ ತಾಯಿ’ ಎಂದು ಉಲ್ಲೇಖೀಸುತ್ತದೆ. ಇವರಾರಿಗೂ ಪಟ್ಟಾಭಿಷೇಕ ಆಗಿರುವ ಸಂಭವ ಇಲ್ಲ.
ಕಿಕ್ಕಾಯಿ ತಾಯಿಯ ಜೊತೆ ಆಕೆಯ ಮಗ ಕುಲಶೇಖರನೂ ಒಡ್ಡೋಲಗದಲ್ಲಿ ಇರುತ್ತಿದ್ದ. ಇವರ ಅನಂತರವೂ ತುಳುನಾಡಿನಲ್ಲಿ ಅನೇಕ ರಾಣಿಯರು ಬರುತ್ತಾರೆ. ಹೊಂನಾ ದೇವಿ ಭೈರಾದೇವಿ, ಉಳ್ಳಾಲದ ಅಬ್ಬಕ್ಕ , ಮೂರಲ ರಾಣಿ ಸೋಮಲಾದೇವಿ ಮುಂತಾದವರು. ಇವರೆಲ್ಲ ಆಡಳಿತ ನಡೆಸಿರಬಹುದು. ಆದರೆ ಇವರಾರಿಗೂ ಪಟ್ಟಾಭಿಷೇಕವಾಗಿರಲಾರದು. ತುಳುನಾಡಿನಲ್ಲಿ ಮಹಿಳೆಗೆ ವಿಧಿವತ್ತಾಗಿಪಟ್ಟ ಆಗುವ ಸಂಭವ ಇಲ್ಲ, ಪದ್ಧತಿಯೂ ಇಲ್ಲ. ಕಾರಣ ಇಲ್ಲಿಯ ಸಂಪ್ರದಾಯವು ಪೂರ್ವ ಕಟ್ಟಳೆಯಂತೆ ನಡೆಯುವುದೇ ಹೆಚ್ಚು. ಹೀಗಾಗಿ ಇತಿಹಾಸ ಪೂರ್ವಯುಗದ ಕೆಲವು ಆಚರಣೆಗಳು ಇಲ್ಲಿ ಇನ್ನೂ ಉಳಿದು ಬಂದಿವೆ. ತುಳು ಪದ್ಧತಿಯಲ್ಲಿ ಯಾವ ಮಹಿಳೆಯೂ ಅಧಿಕೃತವಾಗಿ ಆಡಳಿತಗಾರಳಾಗುವಂತಿಲ್ಲ. ಆಕೆ ಮಗನ ಪರವಾಗಿ, ಸೋದರನ ಪರವಾಗಿ ಅಧಿಕಾರ ನಡೆಸುವ ಪದ್ಧತಿ ಇದೆ.
ಮಹಿಳೆ ಮತ್ತು ಉಪನಾಮ
ಮೇಲೆ ಹೇಳಿದಂತೆ ಬಲ್ಲಮಹಾದೇವಿ ಅಳುಪರಾಣಿ ಎಂದು ಶಾಸನ ಪಾಠ ಇಲ್ಲ. ಕಿಕ್ಕಾಯಿತಾಯಿಯನ್ನು ಆಳುಪರಸಿ ಎನ್ನುತ್ತದೆ ಶಾಸನ ಎಂದೂ ಉಲ್ಲೇಖೀಸುತ್ತದೆ. ಮಹಿಳೆಯರು ಹೆಣ್ಣು ಮತ್ತು ಆಕೆಯ ಮಕ್ಕಳ ಉಪನಾಮವು ತಾಯಿಯ ಮನೆಯಿಂದ ಮುಂದುವರಿಯುತ್ತಿತ್ತು. ಈಗಲೂ ಕೆಲವೆಡೆ ಇದೇ ಪದ್ಧತಿ ಇದೆ.
ಗಂಡನ ಮನೆಯ ಬದುಕು
ತುಳುವ ಹೆಣ್ಣಿಗೆ ಮತ್ತು ಅವಳ ಮಕ್ಕಳಿಗೆ ಗಂಡನ ಮನೆಯಲ್ಲಿ ಇರುವ ಮಾತೃ ಮೂಲದ ಆಸ್ತಿ, ಆಡಳಿತ, ದೈವ ದೇವರ ಆರಾಧನೆ – ಇತ್ಯಾದಿ ಯಾವುದರ ಮೇಲೂ ಅಧಿಕಾರ ಇಲ್ಲ. ಅವಳ ತವರು ಮನೆಯ ವ್ಯವಸ್ಥೆ ಅವಳ ಸಲಹೆಯಂತೆ ನಡೆಯುತ್ತದೆ. ಮದುವೆಯಾಗುವ ಹೆಣ್ಣು ತನ್ನ ತವರಿನಲ್ಲಿ ಇರುವ ಯಾವ ಅಧಿಕಾರವನ್ನೂ ಕಳೆದುಕೊಳ್ಳು ವುದಿಲ್ಲ.
ಕೊನೆಯದಾಗಿ ಒಂದು ಮಾತು ಹೇಳಲೇ ಬೇಕಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ನಡೆಯುವ ಪಲ್ಲಟದಂತೆ ಇಲ್ಲಿಯೂ ನಡೆಯುತ್ತಿದೆ . ನನ್ನ ಕ್ಷೇತ್ರ ಕಾರ್ಯದಲ್ಲಿ ಕೇಳಿ ಬಂದ ಮಾತು. “ಭೂಮಿ ಬದಕ್ ಪೂರ ಆನುಲೆಗ್ ಆಂಡ್; ಭೂತ ಸೈತಿನ ಮಾತ ಕುಟುಮೊಗು ಆಂಡ್’ (ಭೂಮಿ ಬದುಕು ಎಲ್ಲ ಗಂಡಿನ ಮಡದಿ ಮಕ್ಕಳಿಗೆ, ಭೂತ ಮತ್ತು ಸತ್ತ ಹಿರಿಯರ ಆಚರಣೆ ಒಡಹುಟ್ಟಿದ ಸೋದರಿಯರ ಮಕ್ಕಳಿಗೆ’).
* ಡಾ. ಇಂದಿರಾ ಹೆಗ್ಗಡೆ