ಬೆಳ್ತಂಗಡಿ : ತಾಲೂಕಿನ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಗಿರೀಶ್ ಕೆ.ಎಚ್. ಅವರು ದೆಹಲಿಯ ದಿ ಇಂಡಿಯನ್ ಸೊಸೈಟಿ ಆಫ್ ಇಂಟರ್ ನ್ಯಾಶನಲ್ ಲಾ ಕೊಡಮಾಡುವ ರಾಷ್ಟ್ರಮಟ್ಟದ ‘ಸ್ಟಾರ್ ಆಫ್ ಏಷ್ಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಜಿ ಗವರ್ನರ್ ಡಾ| ಭೀಷ್ಮ ನಾರಾಯಣ್ ಸಿಂಗ್ ಅವರು ಈ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಪ್ರದಾನ ಮಾಡಿದರು.
ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿರುವ ಇವರು ಎಸ್ಎಸ್ಎಲ್ಸಿಯಲ್ಲಿ 5ನೇ ಬಾರಿಗೆ ಶೇ. 100 ಫಲಿತಾಂಶ ಪಡೆಯುವಲ್ಲಿ ಪ್ರಮುಖ ಕಾರಣರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು.
ಶಾಲೆಗೂ ಪ್ರಶಸ್ತಿ: ಇಂಟರ್ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಆಂಡ್ ಮೇನೇಂಜ್ಮೆಂಟ್ ವತಿಯಿಂದ ಕೊಡಮಾಡಲಾದ ರಾಷ್ಟ್ರೀಯ ವಿದ್ಯಾ ಗೌರವ ಪ್ರಶಸ್ತಿಯು ನಿಟ್ಟಡೆ ಆಂಗ್ಲಮಾಧ್ಯಮ ಶಾಲೆಗೆ ಲಭಿಸಿದೆ. ನವದೆಹಲಿಯ ಸುಪ್ರಿಂ ಕೋರ್ಟ್ ಮುಂಭಾಗದ ವಿ.ಕೆ. ಕೃಷ್ಣ ಮೆನನ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿಬಿಐ ಮಾಜಿ ನಿರ್ದೇಶಕ ಜೋಗಿಂದರ್ ಸಿಂಗ್, ಪುದುಚೇರಿ ಲೆಫ್ಟಿನೆಂಟ್ ಮಾಜಿ ರಾಜಪಾಲ ಹಾಗೂ ಮಾಜಿ ಸಂಸತ್ ಸದಸ್ಯ ವೀರೇಂದ್ರ ಕಟರ್ಯ, ಮಾಜಿ ಸಂಸತ್ ಸದಸ್ಯರುಗಳಾದ ಹರಿಕೇಶ್ ಬಹದ್ದೂರ್, ಜೆ.ಕೆ. ಜೈನ್, ಅಖಿಲ ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಒ.ಪಿ. ಸೆಕ್ಸೆನಾ, ಡಾ| ಎನ್.ಎಸ್.ಎನ್. ಬಾಬು, ಅರಣ್ಯ ಇಲಾಖಾ ನಿವೃತ್ತ ಅಧಿಕಾರಿ ಮಹಾನ್ ವೀರ್ ತುಲ್ಲಿ ಉಪಸ್ಥಿತರಿದ್ದರು.