ಸಂಸ್ಕೃತಿಯೆಂದರೆ ಒಂದು ಪ್ರದೇಶಕ್ಕೆ ಸೇರಿದ ಜನ ಬಾಳುವ ರೀತಿ ಎಂದರ್ಥ. ಆ ಪದದಲ್ಲಿ ಆಹಾರ, ಉಡುಗೆ-ತೊಡುಗೆ ಮೊದಲಾದ ವಿವಿಧ ರೀತಿಯ ರಿವಾಜುಗಳು ಸೇರಿವೆಯೆಂದು ಒಬ್ಬ ವಿದ್ವಾಂಸರ ಅಭಿಪ್ರಾಯ. ಹಾಗೆಯೇ ತುಳು ಸಂಸ್ಕೃತಿ ಅತ್ಯಂತ ಸಂಕೀರ್ಣವಾದ ಭಾರತೀಯ ಸಂಸ್ಕೃತಿಯೊಂದಿಗೆ ಸಮ್ಮೀಲಿತಗೊಂಡಿರುವ ತುಳು ಮಾತನಾಡುವ ಜನರ ಕಲ್ಯಾಣಪುರ ಹೊಳೆಯಿಂದ ಚಂದ್ರಗಿರಿ ಹೊಳೆಯವರೆಗಿನ ಪ್ರದೇಶದ ಜನರು ಬದುಕುವ ರೀತಿ ಎಂದು ಅರ್ಥೈಸಬಹುದು.
ಇಲ್ಲಿ ಎಲ್ಲವೂ ಇದೆ. ಆದರೆ ಒಂದಕ್ಕೊಂದು ಆತ್ಮೀಯ ಸಂಬಂಧ ಹೊಂದಿರುವ ವಿವಿಧ ವಿಚಾರಧಾರೆಗಳು ಮನುಷ್ಯನ ವಿಕಾಸಕ್ಕೆ ಸಹಾಯವಾಗುವಂತಹ ಗುಣಗಳನ್ನು ಹೊಂದಿದೆ. ಅದಕ್ಕೆ ತುಳು ಸಂಸ್ಕೃತಿ ನಮ್ಮ ಹೆಮ್ಮೆ. ಪರಶುರಾಮನ ಸೃಷ್ಟಿಯೆನಿಸಿರುವ ತುಳುನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಎಲ್ಲವೂ ಪಶ್ಚಿಮದ ಸಮುದ್ರದಂತೆ ವಿಸ್ತಾರ ಮತ್ತು ಆಳ ಅತ್ಯಂತ ವೈವಿಧ್ಯಮಯವೋ, ವೈಶಿಷ್ಟ್ಯಪೂರ್ಣವೂ ಆಗಿರುವ ತುಳುವ ಸಂಸ್ಕೃತಿಯ ಮಡಿಲಲ್ಲಿ ಅನಾವರಣಗೊಳ್ಳದಿರುವ ಅದೆಷ್ಟೋ ವಿಚಾರಗಳಿವೆ. ಇಲ್ಲಿ ನಾವು ಕಾಣಬಹುದಾದ ಆರಾಧನೆಯ ಕ್ರಮಗಳಾಲ್ಲಾಗಲೀ, ಆಚರಣೆಯ ವಿಧಿಗಳಲ್ಲಾಗಲೀ, ಕಲೆ, ಕ್ರೀಡೆ, ಕಸುಬುಗಳಲ್ಲಾಲೀ, ಆಹಾರ, ಕುಣಿತ, ಜಾನಪದ ಸಾಹಿತ್ಯಗಳಲ್ಲಿ ಹುದುಗಿರುವ ಇತಿಹಾಸ, ತತ್ವ, ಸಂಕೇತ, ಜೀವನ ಸಂದೇಶಗಳು ಇಲ್ಲಿಯ ಜನರ ಬದುಕಿನ ಸಂಕೀರ್ಣತೆಯನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ.
ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಅಳವಡಿಸಿಕೊಂಡಿರುವ ಆರಾಧನಾ ಕ್ರಮಗಳು. ಈ ಮೂರು ಇಂದಿಗೂ ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿಚಾರಗಳು. ತಿಳಿದೋ ತಿಳಿಯದೆಯೋ ಈ ಮೂರು ವಿಚಾರಗಳನ್ನು ತುಳುವರು ತಮ್ಮ ನಂಬಿಕೆ, ನಡವಳಿಕೆ, ಆಚರಣೆಗಳಲ್ಲಿ ಉಳಿಸಿಕೊಂಡಿದ್ದಾರೆ. ಶ್ರಾವಣ ಶುದ್ಧ ಪಂಚಮಿಯಂದು ನಾಗರಪಂಚಮಿ, ತುಳುನಾಡಿನಲ್ಲಿ ನಾಗತಂಬಿಲ, ಹಾಲೆರೆಯುವುದು, ಆಶ್ಲೇಷಬಲಿ ಮೊದಲಾದ ಆಚರಣೆಗಳು ಕಂಡು ಬರುತ್ತವೆ. ನಾಗಬನ, ದಲೈಮರಗಳ ಮಧ್ಯೆ ನಾಗರ ಕಲ್ಲುಗಳ ಪೂಜೆ ಇದರಿಂದ ಮನುಷ್ಯ, ಪ್ರಕೃತಿ ಮತ್ತು ಇತರ ಜೀವಿಗಳ ನಡುವೆ ಇರಬೇಕಾದ ಸಂಬಂಧಗಳನ್ನು ಸಾಂಕೇತಿಸುತ್ತದೆ. ನಾಗಮಂಡಲ ವಿಶೇಷ ಮತ್ತು ವೈಭವದಿಂದ ಕೂಡಿದ ತುಳುನಾಡಿನ ಒಂದು ಆಚರಣೆ.
ಇನ್ನು ಭೂತರಾಧನೆ ತುಳುನಾಡಿನಲ್ಲಿ ಒಂದು ಆಚರಣೆ. ನೇಮದ ಆಚರಣೆಗಳ ಮೂಲಕ ಕಂಡುಬರುತ್ತದೆ. ತುಳುನಾಡಿನ ಜನರು ಭೂತಗಳನ್ನು ದೈವಿಕ ಶಕ್ತಿಗಳೆಂದು ನಂಬಿ ಆರಾಧಿಸುತ್ತಾರೆ. ಪ್ರಾಚೀನ ಕಾಲದ ತುಳು ನಾಡಿನ ಭೌಗೋಳಿಕ ಪರಿಸ್ಥಿತಿ, ಪ್ರಾಕೃತಿಕ ವಿಕೋಪಗಳು, ಹುಟ್ಟು ಮತ್ತು ಸಾವುಗಳ ಕುರಿತಾದ ನಂಬಿಕೆ, ಸತ್ತವರನ್ನು ಮತ್ತೆ ಬರಮಾಡಿಕೊಂಡು ನೋಡುವ ಪಿತೃ ಪೂಜೆಯ ಬಯಕೆ,ದುಷ್ಟಪ್ರಾಣಿಗಳ ಬಗೆಗಿನ ಭಯ ಮತ್ತು ಅದೇ ಭಯದಿಂದ ಹುಟ್ಟಿಕೊಂಡ ಆರಾಧನೆಯ ಮನೋಭಾವ, ಅಸಾಮಾನ್ಯ ರೀತಿಯಲ್ಲಿ ಬದುಕಿದ ವ್ಯಕ್ತಿಗಳು ಹೀಗೆ ಜನರ ಅಲೌಕಿಕ ಚಿಂತನೆಗಳನ್ನು ಭೂತಗಳ ಪರಿಕಲ್ಪನೆಯಲ್ಲಿ ಕಾಣಬಹುದು.
ಯಜಮಾನ ಸಂಸ್ಕೃತಿಯ ವಿರುದ್ಧ ಹೋರಾಡಿದ ಕೋಟಿ-ಚೆನ್ನಾಯರು ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ದುಷ್ಟ ಸಮಾಜದ ವಿರುದ್ಧ ಹೋರಾಡಿದ ಅಕ್ಕರಸು, ಸಿರಿ ಇವರನ್ನು ತುಳು ಸಂಸ್ಕೃತಿಯ ವೀರರಾಗಿ ಆರಾಧಿಸುತ್ತಿದ್ದೇವೆ. ಆಲೆಕಳೆಂಜ ತುಳುನಾಡಿನ ನಲಿಕೆ ಜನಾಂಗದವರಲ್ಲಿ ಪ್ರಚಲಿತವಿರುವ ಕುಣಿತ ಪ್ರಧಾನವಾದ ಕಲೆ. ಊರಿಗೆ ಬಂದ ಮಾರಿಯನ್ನಾಳಲು. ಆಲೆಕಳೆಂಜ ಮಾಂತ್ರಿಕ ರೂಪದಿಂದ ಬರುತ್ತಾನೆ ಎಂಬ ನಂಬಿಕೆ ತುಳುವರದ್ದು. ತುಳುವರ ಆಹಾರಕ್ರಮದ ಬಗ್ಗೆ ಯೋಚಿಸುವುದಾದರೆ, ತುಳುನಾಡಿನಲ್ಲಿ ಭತ್ತ ಪ್ರಧಾನವಾದ ಬೆಳೆ. ಕುಚ್ಚಲಕ್ಕಿ ಗಂಜಿ ತುಳುನಾಡಿನ ವಿಶೇಷ. ನಿರ್ ಪುಂಡಿ, ಪತ್ರೊಡೆ, ನೆಲ್ಲಿಪುಂಡಿ, ಸಾರಣೆದ್ದಡ್ಡೆ, ಹಲಸಿನಕಾಯಿಯ ಗಟ್ಟಿ, ಬಾಳೆದೆಲೆಯ ಗಟ್ಟಿ, ಅರಶಿನಲೆ ಗಟ್ಟಿ, ಕಲ್ತಪ್ಪ(ನೆಸಲ್ ದಡ್ಡೆ), ಮಣ್ಣಿ ಇವುಗಳೆಲ್ಲ ತುಳುನಾಡಿನ ತಿಂಡಿಗಳು.
ತುಳುವರು ಹಬ್ಬವೆಂದರೆ ಹಿಗ್ಗುತ್ತಾರೆ. ನಮ್ಮ ಹಬ್ಬಗಳು ಒಂದೆರಡಲ್ಲ ಅವುಗಳೆಂದರೆ ಆಲೆಅಮವಾಸ್ಯೆ, ನಾಗರ ಪಂಚಮಿ, ದೀಪಾವಳಿ, ಕುರಲ್ಪಪರ್ಬ ಇವುಗಳೆಲ್ಲ ನಮ್ಮ ಸಂಸ್ಕೃತಿಯ ವಿಶೇಷ ಸಂಗತಿಗಳು.
ತುಳು ಸಂಸ್ಕೃತಿಯಲ್ಲಿ ಯಕ್ಷಗಾನ , ಡಕ್ಕೆ ಬಲಿ(ನಾಗದರ್ಶನ) ಬೇರೆರೀತಿಯ ಹರಕೆಗಳನ್ನು ತುಳು ಸಂಸ್ಕೃತಿಯಲ್ಲಿ ಕಾಣಬಹುದು. ಯಕ್ಷಗಾನ ಪ್ರಸಿದ್ಧವಾದ ಒಂದು ತುಳುನಾಡಿನ ಜೀವಕಲೆ. ಯಕ್ಷಗಾನ ತುಳುಸಂಸ್ಕೃತಿಯ ಹೆಮ್ಮೆಯ ಅಂಗ ಎಂದು ಹೇಳಬಹುದು.
ಒಟ್ಟಿನಲ್ಲಿ ತುಳುಸಂಸ್ಕೃತಿಯು ಬಾಳೆಯ ದಿಂಡಿನಂತೆ. ಒಂದು ಪದರ ಬಿಚ್ಚಿದರೆ ಇನ್ನೊಂದು ಪದರ ಕಾಣಿಸುತ್ತದೆ. ಬೇರೆ ಬೇರೆ ವಿಶಿಷ್ಟ ಗುಣಗಳು ಒಂದಕ್ಕೊಂದು ಪೂರಕವಾಗಿರುವ ಹೆಮ್ಮೆಯ ಸಂಸ್ಕೃತಿ ಮತ್ತು ಶ್ರೀಮಂತ ಬದುಕಿನ ಸಂಸ್ಕೃತಿಯೇ ನಮ್ಮ ತುಳುನಾಡ ಸಂಸ್ಕೃತಿ.
* ಸವಿತಾ ಕುಮಾರಿ, ಮೂಡಬಿದ್ರಿ