ಮೂಡಬಿದಿರೆ : ಮಿಜಾರಿನ ಗ್ರಾಮಸ್ಥರಿಗೆ ಪಂಜುರ್ಲಿಗುಡ್ಡೆ ಜಾನಕಿ ಮೂಲ್ಯ ಅವರೆಂದರೆ ಚಿರಪರಿಚಿತ ಮತ್ತು ಆತ್ಮೀಯತೆಯ ಹೆಸರು. ಬಡಗ ಮಿಜಾರಿನ ಪಂಜುರ್ಲಿಗುಡ್ಡೆಯಲ್ಲೇ ಹುಟ್ಟಿ ಬೆಳೆದು, ಇದೀಗ ತನ್ನ ಇಳಿ ವಯಸ್ಸಿನಲ್ಲಿಯೂ ಇಲ್ಲಿಯೇ ನೆಲೆನಿಂತು ಬದುಕುತ್ತಿರುವ ವೃದ್ಧೆ ಜಾನಕಿಯವರಿಗೆ ಅಕ್ಷರಜ್ಞಾನ ಇಲ್ಲದಿದ್ದರೂ ಲೋಕಜ್ಞಾನಕ್ಕೇನೂ ಕೊರತೆಯಾಗಿಲ್ಲ. ತೆಂಕ ಮಿಜಾರಿನ ಗ್ರಾಮ ಸಭೆಗಳೆಂದರೆ ಅಲ್ಲಿ ಜಾನಕಿ ಅವರು ತಪ್ಪದೇ ಹಾಜರಿರುತ್ತಾರೆ. ಗ್ರಾಮದ ಸಮಸ್ಯೆ, ಸ್ಪಂದನ, ಜನಪ್ರತಿನಿಧಿಗಳ ಜತೆಗಿನ ಸಂವಾದದಲ್ಲಿ ಜಾನಕಿ ಅಜ್ಜಿ ಗೈರು ಹಾಜರಾಗಿರುವುದೇ ಅಪರೂಪ ಎನ್ನಬಹುದೇನೋ !
ವಿಧವೆಯಾಗಿ, ಒಂಟಿಯಾಗಿ ಬದುಕುತ್ತಿರುವ ಜಾನಕಿಯವರೆಂದರೆ ಗ್ರಾಮಸ್ಥರಿಗೂ ಬಹು ಪ್ರೀತಿ. ಊರಿನ ಬಹುತೇಕ ಪಂಚಾಯತ್ ನ ಎಲ್ಲಾ ಕಾರ್ಯಕ್ರಮಗಳಿಗೂ ಅಜ್ಜಿ ಬಹುತೇಕ ಹಾಜರಾಗುತ್ತಾರೆ. ಐದು ಸೆಂಟ್ಸ್ ನಿವಾಸಿಯಾಗಿರುವ ಜಾನಕಿ ಮೂಲ್ಯರಿಗೆ ಇದೀಗ ಸರಕಾರದ ಇಂದಿರಾ ಆವಾಜ್ ಯೋಜನೆಯಡಿ ಮನೆ ಕಟ್ಟಿಸಿಕೊಡಲಾಗುತ್ತಿದೆ. ಶೌಚಾಲಯ, ನೀರಿನ ಸೌಲಭ್ಯವೂ ಸಿಕ್ಕಿದೆ. ವೃದ್ಧಾಪ್ಯವೇತನವೂ ದೊರೆಯುತ್ತಿದೆ. ಸರಕಾರದ ಋಣ ತಮ್ಮ ಮೇಲಿದೆ ಎಂಬ ಕಾರಣವೋ ಏನೋ ಜಾನಕಿ ಅವರ ಸಾಮಾಜಿಕ ಕಾಳಜಿ ಗಮನಾರ್ಹವೆನಿಸುತ್ತದೆ.
ಪ್ರತಿ ಗ್ರಾಮ ಸಭೆಯಲ್ಲೂ ಜಾನಕಿ ಅಜ್ಜಿನಿಖರ ವಾದ, ಅಹವಾಲು ಮಂಡನೆ ಮೂಲಕ ಗಮನ ಸೆಳೆಯುತ್ತಾರೆ. ಪಂಚಾಯತ್ ಮೂಲಕ ತಮ್ಮ ಪರಿಸರದ ಜನತೆಯ ಸ್ಪಂದಿಸುವ ಜಾನಕಿಯರ ಕಾಳಜಿ ಹೇಗಿದೆ ಎಂದರೆ ಅವರ ಆಸುಪಾಸಿನ ೪೦ರಿಂದ ೫೦ ಕುಟುಂಬಗಳು ದೂರು ದುಮ್ಮಾನಗಳನ್ನು ಅಜ್ಜಿಯ ಮೂಲಕವೇ ಪರಿಹರಿಸಿಕೊಳ್ಳುತ್ತಿವೆ. ಹಾಗಾಗಿ ಅಜ್ಜಿ ಈ ಭಾಗದ ಅಘೋಷಿತ ನಾಯಕಿ.
ತನ್ನೂರಿನ ಸಮಸ್ಯೆಗಳ ಹುಟ್ಟೂರಿನವರಾದ ಡಾ. ಮೋಹನ್ ಆಳ್ವರಲ್ಲಿಯೂ ತೆರಳಿ ಸಹಕಾರ ಪಡೆಯುವ ಜಾನಕಿ ಅವರು, ಸಚಿವ ಅಭಯಚಂದ್ರರನ್ನು ಭೇಟಿ ಮಾಡಿ ಅಹವಾಲು ಮಂಡಿಸಿ ಮನೆ ಸಮೀಪ ಮೋರಿಯ ವ್ಯವಸ್ಥೆ ಮಾಡಿಕೊಂಡಿದ್ದಾರಂತೆ. ಕಡ್ಡಿ ಮುರಿದಂತೆ ಮಾತನಾಡುವ ಜಾನಕಿಯವರೆಂದರೆ ಗ್ರಾಮ ಸಭೆಯಲ್ಲಿ ಹರಿತವಾದ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳೂ ಪರದಾಡುತ್ತಾರೆ. ಇತ್ತೀಚೆಗೆ ಸಭೆಯೊಂದರಲ್ಲಿ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಜಾನಕಿ, ತಮ್ಮ ಪ್ರಶ್ನೆಗಳ ಸುರಿಮಳೆಯಿಂದ ಅವರ ಬೆವರಿಳಿಸಿದ್ದರು. ಅಕ್ಷರ ಜ್ಞಾನ ಇದ್ದವರೂ ಜಾನಕಿ ಅವರನ್ನು ನೋಡಿ ಕಲಿಯುವಂಥದ್ದು ಬೇಕಾದಷ್ಟಿವೆ. ಗ್ರಾಮ ಸುಧಾರಣೆಗೆ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಇವರಂಥ ಒಬ್ಬೊಬ್ಬರಿದ್ದರೆ ಸಾಕು.