ಯಕ್ಷಗಾನ – ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆ ನಮ್ಮ ನಾಡಿನ ವಿಶೇಷತೆಗಳಲ್ಲೊಂದು. ಯಕ್ಷಗಾನ ಅಂದರೆ ಬರಿಯ ನರ್ತನವಲ್ಲ, ಬರಿಯ ಗಾಯನವಲ್ಲ, ಸಂಭಾಷಣೆ ಭರಿತ ಬರಿಯ ಅಭಿನಯವೂ ಅಲ್ಲ, ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ತನ್ನೆಲ್ಲ ವಿಶೇಷತೆಗಳನ್ನೂ ಸಮತೋಲನದಿಂದ ಸಮನ್ವಯಗೊಳಿಸಿ ರಂಗಪ್ರಯೋಗ ಮಾಡಲಾದ ಅದ್ಭುತ ಕಲೆ. ಇಂಥ ಶ್ರೀಮಂತ ಕಲೆಗೆ ಮಾರು ಹೋಗದ ಜನ ಕರಾವಳಿಯಲ್ಲಿ ಇಲ್ಲ. ಅದರಲ್ಲೂ ಪುಟ್ಟ ಮಕ್ಕಳಿಗೆ ಈ ವೇಷ ಭೂಷಣ ಕಂಡರೆ ವಿಶೇಷ ಆಕರ್ಷಣೆ. ಹೀಗೆ ಯಕ್ಷಗಾನದ ಬಗ್ಗೆ ಆಸಕ್ತಿ ವಹಿಸಿದ ಪೋರನೊಬ್ಬ, ವೇಷ ಹಾಕಿ ಕುಣಿದು ಇದರಿಂದ ಸಿಗುವ ಆದಾಯದಿಂದ ತನ್ನ ವಿದ್ಯಾಭ್ಯಾಸದ ಖರ್ಚನ್ನು ಹೊಂದಿಸುವ ಮೂಲಕ ಇತರರಿಗೆ ಆದರ್ಶವಾಗಿದ್ದಾನೆ. ಈತನೇ ರಾಘವೇಂದ್ರ ಕುಲಾಲ್.

ಕಾರ್ಕಳ ತಾಲೂಕಿನ ಪದವು ಗ್ರಾಮದ ಕೃಷ್ಣ ಮೂಲ್ಯ-ಶಶಿಕಲಾ ದಂಪತಿಯ ಪುತ್ರನಾಗಿರುವ ರಾಘವೇಂದ್ರ ಎಳವೆಯಲ್ಲಿಯೇ ಯಕ್ಷಗಾನ ಕಲೆಯಲ್ಲಿ ವಿಪರೀತ ಆಸಕ್ತಿ ಹೊಂದಿದ್ದ. ಹೋದಲ್ಲಿ ಬಂದಲ್ಲಿ ಯಕ್ಷಗಾನದ್ದೇ ಗುಂಗು. ಹೆತ್ತವರನ್ನು ಗೋಳು ಹುಯ್ದುಕೊಂಡು ಸಮ್ಮತಿಯೊಂದಿಗೆ ಅಂತೂ ಯಕ್ಷಗಾನದ ಕುಣಿತ ಕಲಿತ ರಾಘವೇಂದ್ರ, ಬಣ್ಣದಲೋಕದಲ್ಲಿ ಮಿಂಚಲು ಅಣಿಯಾಗಿದ್ದ. ಹಿರಿಯಡ್ಕ ಯಕ್ಷಗಾನ ಮೇಳದಲ್ಲಿ ಹವ್ಯಾಸಿ ಬಾಲ ಕಲಾವಿದನಾಗಿ ಗುರುತಿಸಿಕೊಂಡಿರುವ ಈತ, ವಿವಿಧೆಡೆ ಪ್ರದರ್ಶನ ನೀಡಿ ಸೈ ಅನಿಸಿಕೊಂಡಿದ್ದಾನೆ. ಪ್ರಸ್ತುತ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿರುವ ರಾಘವೇಂದ್ರ ಹಲವೆಡೆ ರಾತ್ರಿಯೂ ಪ್ರದರ್ಶನ ನೀಡಿ, ಇದರಿಂದ ಸಿಗುವ ಸಂಭಾವನೆಯಿಂದ ತನ್ನ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸುತ್ತಾ, ಪೋಷಕರಿಗೆ ನೆರವಾಗುತ್ತಿದ್ದಾನೆ.
ಯಕ್ಷಗಾನ ಪ್ರದರ್ಶನ ನೋಡುಗರ ಸಂಖ್ಯೆಯ ಜೊತೆಗೆ, ಇದರಲ್ಲಿ ತೊಡಗಿಸಿಕೊಳ್ಳುವ ಕಲಾವಿದರ ಇಳಿಮುಖಗೊಂಡು ಈ ಕಲೆ ನೇಪಥ್ಯಕ್ಕೆ ಸರಿಯುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ರಾಘವೇಂದ್ರನಂಥ ಪುಟ್ಟ ಪ್ರತಿಭೆಗೆಳು ಇದರಲ್ಲಿ ಆಸಕ್ತಿ ಹೊಂದಿರುವುದು ಅಭಿಮಾನದ ಸಂಗತಿ. ಈ ರಂಗದಲ್ಲಿ ಈತ ಉನ್ನತ ಸಾಧನೆ ಮಾಡಲಿ ಎಂದು ಹಾರೈಸೋಣ.
ಸಂತೋಷ್ ಕುಲಾಲ್ ಪದವು



