ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಇಲ್ಲಿನ ದಾದರ್ನ ಬಿ. ಎನ್. ವೈದ್ಯ ಸಭಾಗೃಹದಲ್ಲಿ ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ವತಿಯಿಂದ “ನಮ್ಮ ಸಂಸ್ಕೃತಿ – ತುಳುವೆರೆ ಆಯನ” ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ, ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು ಅವರು, “ತುಳು ಭಾಷೆ, ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ದೇಶ-ವಿದೇಶಗಳಲ್ಲಿಯೂ ಅಪಾರ ಮಹತ್ವವಿದೆ. ಯುವ ಜನಾಂಗ ಹಾಗೂ ಮಹಿಳೆಯರು ಒಗ್ಗೂಡಿ ನಮ್ಮ ವಿಶಿಷ್ಟ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗಬೇಕು,” ಎಂದು ಕರೆ ನೀಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ ಮಾತನಾಡಿ, “ಸಂಸ್ಕೃತಿ ಎಂಬುದು ನಮ್ಮ ಮೂಲ ಬೇರು ಮತ್ತು ಗುರುತು. ಸಮಾಜದ ಪ್ರತಿಬಿಂಬವಾಗಿರುವ ಮಹಿಳೆಯರು ಪರಂಪರೆಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ,” ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿ, ಸಮಾಜ ಸೇವಕಿಯರಾದ ಪ್ರಿಯದರ್ಶಿನಿ ಸುನಿಲ್ ಕುಲಾಲ್, ನಮ್ರತಾ ಜಗದೀಶ್ ಬಂಜನ್, ದೇವಕಿ ಸುನಿಲ್ ಸಾಲಿಯಾನ್, ಡಾ. ಸುರೇಖಾ ರತನ್ ಕುಲಾಲ್ ಹಾಗೂ ಮುಖ್ಯ ಭಾಷಣಕಾರರಾದ ಗೀತಾ ರಘುರಾಮ ಹೇರಳ ಅವರು ತುಳು ಭಾಷೆಗೆ ಗೌರವ ನೀಡುವುದು, ಲಿಪಿ ಕಲಿಯುವುದು ಮತ್ತು ಮಕ್ಕಳಿಗೆ ಧಾರ್ಮಿಕ ಸಂಸ್ಕಾರವನ್ನು ಕಲಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ಸುಮತಿ ಬಂಜನ್ ಹಾಗೂ ಮಮತಾ ಗುಜರನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜೊತೆಗೆ ದಾನಿಗಳನ್ನು ಮತ್ತು ಸಂಘದ ವಿವಿಧ ವಿಭಾಗಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಮಹಿಳಾ ಸದಸ್ಯರಿಂದ ಹಳದಿ-ಕುಂಕುಮ ಕಾರ್ಯಕ್ರಮ, ವಿವಿಧ ಸ್ಥಳೀಯ ಸಮಿತಿಗಳ ಸದಸ್ಯರು ಹಾಗೂ ಮಕ್ಕಳಿಂದ ಕುಲಾಲ ಸಂಸ್ಕೃತಿ ಆಧಾರಿತ ನೃತ್ಯ ರೂಪಕ ಸ್ಪರ್ಧೆ, ಹಾಸ್ಯ, ಗಾಯನ ಮತ್ತು ವಿವಿಧ ಸಾಂಸ್ಕೃತಿಕ ವೈವಿಧ್ಯಗಳು ಪ್ರೇಕ್ಷಕರನ್ನು ಮನಸೋರೆಗೊಳಿಸಿದವು. ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ, ಸಭಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು.


