ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ರಾಜ್ಯದ ಕುಂಬಾರ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಮಹತ್ತರ ಜವಾಬ್ದಾರಿಯೊಂದಿಗೆ, ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಡಾ. ಶ್ರೀನಿವಾಸ ವೇಲು ಅವರು ಇಂದು ಅಧಿಕೃತವಾಗಿ ಪದಗ್ರಹಣ ಮಾಡಿದರು.
ನಗರದ ಡಿ. ದೇವರಾಜ ಅರಸು ಭವನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಮುದಾಯದ ನಾಯಕರು ಹಾಗೂ ಗಣ್ಯರ ಸಮ್ಮುಖದಲ್ಲಿ ಅವರು ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ. ಶ್ರೀನಿವಾಸ ವೇಲು ಅವರು, ರಾಜ್ಯ ಸರ್ಕಾರ ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು. ಕುಂಬಾರ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ನಿಗಮದ ಮೂಲಕ ಹೊಸ ವೇಗ ನೀಡಲಾಗುವುದು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪಾರದರ್ಶಕ ಆಡಳಿತ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಆರ್. ಶ್ರೀನಿವಾಸ್, ಕೆಎಸ್ಆರ್ಟಿಸಿ ನಿರ್ದೇಶಕಿ ಗಾಯಿತ್ರಿ IAS, ಅಖಿಲ ಭಾರತ ಕರ್ನಾಟಕ ಕುಂಬಾರ ಮಹಾಸಭಾದ ಅಧ್ಯಕ್ಷರಾದ ಶಿವಕುಮಾರ ಚೌಡ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾದ ಗುರುರಾಜ್ ಅವರು ಭಾಗವಹಿಸಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಅಲ್ಲದೆ, ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ದೇವದಾಸ್, ವಕೀಲರಾದ ಅನುಸೂಯ, ಡಾ. ಹೇಮಾವತಿ ಶ್ರೀನಿವಾಸ್ ವೇಲು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮುದಾಯದ ಸಕ್ರಿಯ ಮುಖಂಡರಾದ ಸಂಗಮೇಶ, ಚಿಕ್ಕ ವೀರಯ್ಯ ಟಿ.ಎನ್, ವಿಠಲ್ ಶಂಕರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಹಿತೈಷಿಗಳು ಮತ್ತು ಗಣ್ಯರು ಡಾ. ವೇಲು ಅವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮವು ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು.


