ಕುಂದಾಪುರ: ಕಷ್ಟ ಪಟ್ಟಾಗ ಮಾತ್ರ ಸುಖ ಕಾಣಲು ಸಾದ್ಯ, ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಗೆ ನಿದರ್ಶನವೆಂಬಂತೆ ಇರುವವರು ಬೆಳ್ಳಾಲ ಗ್ರಾಮದ ಕ್ಯಾಲಾಡಿಯಲ್ಲಿ ವಾಸವಾಗಿರುವ ರಾಜ ಕುಲಾಲ ಮತ್ತು ಅವರ ಕುಟುಂಬ.
ಕೇವಲ ಕೃಷಿಯನ್ನೇ ಜೀವನಬಂಡಿಯ ಗಾಲಿಗಳಾಗಿ ಮಾಡಿಕೊಡು ಬಂದಿರುವ ಈ ಕುಟುಂಬ, ತಮ್ಮ ಮನೆ ಸುತ್ತಮುತ್ತಲಿನ ಕೆಲವು ಜಾಗದಲ್ಲಿ ಸುಮಾರು ಮಲ್ಲಿಗೆ , ಜಾಜಿ ಮತ್ತಿತರ ಹೂವಿನ ಗಿಡಗಳನ್ನು ನೆಟ್ಟು ಅದರಿಂದ ಬಿಡುವ ಹೋಗಳನ್ನು ಕಟ್ಟಿ ಮಾರಾಟ ಮಾಡಿ ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಇವರ ಕುಟುಂಬ ಮಲ್ಲಿಗೆ ಹೂವನ್ನು ಮಾರಿ ತಂದ ಹಣದಿಂದ ತನ್ನ ಜೀವನವನ್ನು ಸಾಗಿಸುತ್ತ ಬಂದು ತಮ್ಮ ಕುಟುಂಬದ 4 ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಜೀವನದಲ್ಲಿ ಸಂತೃಪ್ತಿದಾಯಕ ಬದುಕನ್ನು ಕಟ್ಟಿಕೊಂಡಿದೆ.
ಮೂಲತಃ ಕೃಷಿ ಕುಟುಂಬದಿಂದ ಬಂದ ರಾಜ ಕುಲಾಲ್ ಮನೆಯ ಸಮೀಪದ ಜಾಗದಲ್ಲಿ ಮಲ್ಲಿಗೆ, ಜಾಜಿ ಮತ್ತಿತರ ಹೂವಿನ ಗಿಡಗಳನ್ನು ಬೆಳೆಸಿ ಅದರಲ್ಲಿ ಬಿಡುವ ಹೂಗಳನ್ನು ಕೋಯ್ದು ಕಟ್ಟಿ ಮಾರಾಟ ಮಾಡುತ್ತಾರೆ, ಅದರಲ್ಲೂ ಹೆಚ್ಚಾಗಿ ಮಲ್ಲಿಗೆಯ ಕೃಷಿ ಮಾಡುತ್ತಾರೆ, ಒಂದು ಚೆಂಡಿಗೆ 30ರಿಂದ 40 ರೂಪಾಯಿ ಗೆ ಮಾರಾಟ ಮಾಡುವವ ಇವರು ಸೀಜನ್ ಸಮಯದಲ್ಲಿ ಸುಮಾರು 15 ಸಾವಿರದಿಂದ 20 ಸಾವಿರದ ವರೆಗೆ ಮಲ್ಲಿಗೆ ಹೂಗಳನ್ನು ಕೊಯ್ದು ಕಟ್ಟಿ ಅದನ್ನು ಸೈಕಲ್ಲಿನಲ್ಲಿ ಸಮೀಪದ ಕೆರಾಡಿ, ಮಾರಣಕಟ್ಟೆ ,ನೇರಳಕಟ್ಟೆ ಪ್ರದೇಶದ ಅಂಗಡಿ ಹಾಗೂ ಮನೆಗಳಿಗೆ ಅಲ್ಲದೆ ದೂರದ ಕುಂದಾಪುರ, ಗಂಗೊಳ್ಳಿ, ಹೆಬ್ರಿ, ಭಟ್ಕಳಗಳಿಗೂ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ದೂರದ ಪ್ರದೇಶಗಳಿಗೆ ಬಸ್ಸಿನಲ್ಲಿ ಕಳಿಸುವ ಕೆಲಸ ಮಾಡುತ್ತಾರೆ, ಅಲ್ಲದೆ ಇವರ ಹೂವಿಗೆ ಬೆಂಗಳೂರಿನಲ್ಲು ಬೇಡಿಕೆ ಇದೆ. ಬಸ್ಸ್ ವ್ಯವಸ್ಥೆ ಇಲ್ಲದಿದ್ಧಾಗ ಸೈಕಲ್ಲಿನಲ್ಲೇ ಹೋಗಿ ಕೊಟ್ಟುಬರಬೇಕಾಗಿರುತ್ತದೆ. ಅಲ್ಲದೆ ರಾಜ ಇವರು ಭಟ್ಕಳದವರೆಗೆ ತನ್ನ ಸೈಕಲ್ಲಿನಲ್ಲೇ ಹೋಗಿ ಹೂವನ್ನು ಮಾರಾಟ ಮಾಡಿ ಬಂದಿದ್ಧು ಇದೆ ಎನ್ನುತ್ತಾರೆ. ಇತ್ತೀಚೆಗೆ ಮಾರಾಟಕ್ಕೆ ಬೈಕ್ ತೆಗೆದುಕೊಂಡು ಅದರ ಮೂಲಕ ಕ್ಲಪ್ತ ಸಮಯಕ್ಕೆ ಸರಿಯಾಗಿ ಹೂಗಳನ್ನು ತಲುಪಿಸುವ ಕೆಲಸ ಆಗುತ್ತಿದೆ.
ರಾಜ ಅವರ ತಂದೆ ಕೊರ್ಗು ಕುಲಾಲ್ ಹಾಗೂ ಸಹೋದರರುಗಳು ಮನೆಯಲ್ಲಿ ಹೂವಿನ ಗಿಡಗಳ ಪಾಲನೆ ಪೋಷನೆ ಮಾಡಿ ಹೂಗಳನ್ನು ಎಲ್ಲರು ಸೇರಿ ಕಟ್ಟುವ ಕೆಲಸ ಮಾಡುತ್ತಾರೆ, ಮಾರಾಟ ಮಾಡುವ ಕೆಲಸ ರಾಜ ಮಾಡುತ್ತಾನೆ. ಕಷ್ಟ ಪಟ್ಟು ಜೀವನ ಸಾಗಿಸುವ ಕೆಲಸ ಈ ಕುಟುಂಬದವರದ್ದಾಗಿದೆ, ಮಲ್ಲಿಗೆಯ ಕೃಷಿ ಇವರ ಜೀವನವನ್ನು ಬದಲಾವಣೆಯತ್ತ ಕೊಂಡೊಯ್ಯುವ ಕೆಲಸ ಮಾಡಿದೆ. ಮಲ್ಲಿಗೆ, ಜಾಜಿ, ಮುತ್ತುಮಲ್ಲಿಗೆ, ಕಾಕಡ, ಮೊದಲಾದ ಹೂವಿನ ಕೃಷಿಯ ಜೊತೆಗೆ ಮನೆಯ ಸುತ್ತಮುತ್ತ ಸಂಡಿಗೆಮೆಣಸು, ಬೆಂಡೆ, ಹರಿವೆ, ಮರಗೆಣಸು ಇನ್ನಿತರ ಕೃಷಿಗಳನ್ನು ಇವರು ಮಾಡಿಕೊಂಡು ಬಂದಿದ್ದಾರೆ.
ಗಿಡಗಳ ನಿರ್ವಹಣೆ
ಪ್ರತಿ ದಿನ ಫಸಲು ನೀಡುವ ಮಲ್ಲಿಗೆ ಗಿಡಗಳನ್ನು ಯಾವುದೆ ಕ್ರಿಮಿಕೀಟಗಳ ಮತ್ತು ಕಾಯಿಲೆಗಳಿಂದ ದೂರವಿಡಲು ವಾರಕ್ಕೆ ಒಂದು ಸಾರಿ ಗಿಡಗಳಿಗೆ ಕೀಟನಾಶಕಗಳ ಸಿಂಪಡನೆ ಮಾಡಲಾಗುತ್ತದೆ ಇನ್ನು ಅನೇಕ ನಿರ್ವಹಣೆಯ ಕೆಲಸಗಳನ್ನು ಮಾಡಲಾಗುತ್ತದೆ, ಗಿಡಗಳನ್ನು ಸರಿಯಾಗಿ ರಾಸಾಯಣಿಕ ಗೊಬ್ಬರ, ಮತ್ತು ಎರೆಹುಳು ಗೊಬ್ಬರವನ್ನು ಮಿಶ್ರಮಾಡಿ ವರ್ಷಕ್ಕೆ ಒಂದು ಸಾರಿಯಂತೆ ಬುಡಮಾಡಲಾಗುತ್ತದೆ. ಸರಿಯಾಗಿ ಬುಡದ ನಿರ್ವಹಣೆಯಾದಾಗ ಎಪ್ರಿಲ್ ಮೇ ತಿಂಗಳಿನಲ್ಲಿ ಸರಾಸರಿ 40ರಿಂದ 50 ಸಾವಿರ ಹೂವನ್ನು ಬಿಡುತ್ತವೆ, ಹಾಗೆ ಮೆಣಸಿನ ಗಿಡಕ್ಕೂ ಕೂಡ ಹಾಗೆ ನಿರ್ವಹಣೆ ಮಾಡಲಾಗುತ್ತದೆ, ತಿಂಗಳಿಗೆ ಒಂದು ಸಾರಿ ಗಿಡಗಲಿಗೆ ಬುಡ ಮಾಡಲಾಗುತ್ತದೆ ಹಾಗೂ ಪ್ರತೀ ಒಂದು ವಾರಕ್ಕೆ ಮೆಣಸನ್ನು ಕೊಯ್ದು ಮಾರಾಟ ಮಾಡಲಾಗುತ್ತದೆ.
ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದುವೆ ಶುಭ ಸಮಾರಂಭಗಳಿಗೆ ಹೂವನ್ನು ಇವರಿಂದಲೆ ತರುತ್ತಿದ್ದೇವೆ. ಯಾವ ದಿನ ಬೇಕು ಎಂದು ಮುಂಗಡವಾಗಿ ಹೇಳಿದರೆ ಸಾಕು, ಆ ಸಮಯಕ್ಕೆ ಸರಿಯಾಗಿ ಮನೆಯ ಬಾಗಿಲಿಗೆ ತಂದು ಕೊಡುವ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ನಾವು ಈ ವೃತ್ತಿಯನ್ನು ಸುಮಾರು 15 ವರ್ಷಗಳಿಂದ ಮಾಡಿಕೊಂಡು ಬಂದಿದ್ಧೇವೆ. ನಮಗೆ ಈ ಕೆಲಸ ಕಷ್ಟಕರ ಎಂದು ಯಾವತ್ತು ಎನಿಸಲೇ ಇಲ್ಲ ಇದರಿಂದ ನಮ್ಮ ಜೀವನವನ್ನು ರೂಪಿಸಿಕೊಂಡಿದ್ದೇವೆ . ಈ ಕೃಷಿಯೆ ನಮಗೆ ಜೀವನಾಡಿಯಾಗಿದೆ. ಸಂತೃಪ್ತಿಯ ಜೀವನ ಸಾಗುವಲ್ಲಿ ನಮಗೆ ಕೃಷಿ ಆಧಾರವಾಗಿದೆ ಎನ್ನುತ್ತಾರೆ ರಾಜ ಕುಲಾಲ.
ಚಿತ್ರ-ವರದಿ : ಸತೀಶ ಎಂ.ಬಿ, ಕಾವ್ರಾಡಿ