ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಜಪಾನ್ ಶೊಟೊಕಾನ್ ಕರಾಟೆ ಅಸೋಸಿಯೇಷನ್ ಇಂಡಿಯಾ (JSKA) ವತಿಯಿಂದ ಕೇರಳದ ತ್ರಿಶೂರ್ನಲ್ಲಿ ಏಪ್ರಿಲ್ 11 ಮತ್ತು 12ರಂದು ಆಯೋಜಿಸಲಾಗಿದ್ದ “48ನೇ ಜೆಎಸ್ ಕೆಎ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ -2026” ರಲ್ಲಿ ಭಾಗವಹಿಸಿದ ಮಂಗಳೂರಿನ ಪ್ರತಿಭೆ ಸಮೃದ್ಧಿ ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಜಾಗತಿಕ ವೇದಿಕೆಯಲ್ಲಿ ಮಿಂಚಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಸಮೃದ್ಧಿ ಅವರು ತಮ್ಮ ಚುರುಕಿನ ನಡೆ ಹಾಗೂ ತಾಂತ್ರಿಕ ಕೌಶಲ್ಯದಿಂದ ಎರಡು ಪ್ರಮುಖ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಕುಮಿಟೆ ವಿಭಾಗದಲ್ಲಿ ಅಪ್ರತಿಮ ಹೋರಾಟ ಪ್ರದರ್ಶಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡರೆ ಕಟಾ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ. ಸಮೃದ್ಧಿ ಅವರು ತೋಕೂರು ರಾಮಣ್ಣ ಶೆಟ್ಟಿ ಸಿ.ಬಿ.ಎಸ್.ಇ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಸುರತ್ಕಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದು, ತರಬೇತುದಾರರಾದ ನಿತಿನ್ ಎನ್. ಸುವರ್ಣ ಹಾಗೂ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ಪಕ್ಷಿಕೆರೆಯ ನಿವಾಸಿಗಳಾದ ಮನೋಜ್ ಕುಮಾರ್ ಮತ್ತು ಗೀತಾ ಮನೋಜ್ ದಂಪತಿಯ ಸುಪುತ್ರಿಯಾಗಿರುವ ಸಮೃದ್ಧಿ, ಕ್ರೀಡಾ ಕ್ಷೇತ್ರದಲ್ಲಿ ತೋರುತ್ತಿರುವ ಈ ಸಾಧನೆಗೆ ಶಾಲಾ ಮಂಡಳಿ, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.


