ದೋಹಾ(ಕುಲಾಲ್ ವರ್ಲ್ಡ್ ಡಾಟ್ ಕಾಮ್ ): ದೋಹಾ ಕತಾರ್ ನಲ್ಲಿ ನೆಲೆಸಿರುವ ಸಮಾನ ಮನಸ್ಕ ಕುಲಾಲರ 15ನೇ ವಾರ್ಷಿಕೋತ್ಸವ ಸಂಭ್ರಮ ಹಾಗೂ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ದಶಮಾನೋತ್ಸವ ಆಚರಣೆಯು ಫೆಬ್ರವರಿ 6 ಹಾಗೂ 7ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಕತಾರಿನ ಕ್ಯುಕೆಮ್ ಇದರ ಅಧಿಕಾರಿ ಆನಂದ ಕುಂಬಾರ ಅವರ ಮುಂದಾಳುತ್ವದಲ್ಲಿ ಈ ಕಾರ್ಯಕ್ರಮವನ್ನು ಕತಾರ್ ರಾಜಧಾನಿ ದೊಹಾ ಹೊರವಲಯದ ಉಮ್ ಸಲಾಲ್ ನ ಅಲ್ ಮಹಾ ರೆಸಾರ್ಟ್ ಇಲ್ಲಿ ಆಯೋಜಿಸಲಾಗಿತ್ತು.
`ದೋಹಾ ಕುಲಾಲ್ಸ್’ ಆರಂಭಗೊಂಡು ಹದಿನೈದು ವರ್ಷ ಹಾಗೂ ಕುಲಾಲ ವರ್ಲ್ಡ್ ಡಾಟ್ ಕಾಮ್ ಗೆ ಹತ್ತು ವರ್ಷ ಪೂರ್ಣಗೊಂಡ ಶುಭಾವಸರದಲ್ಲಿ ಸಂಭ್ರಮದವನ್ನು`ದೋಹಾ ಕುಲಾಲ್ಸ್’ ಸ್ಥಾಪಕ ಆನಂದ್ ಕುಂಬಾರ ಹಾಗೂ ಕುಲಾಲ್ ವರ್ಲ್ಡ್ ಡಾಟ್ ಕಾಂನ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ಹಿತಕರವಾದ ಹವಾಮಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲು ಹಾಗೂ ಎಲ್ಲಾ ಸದಸ್ಯರು ಅತ್ಯುತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನವನ್ನು ನೀಡಿತು. ಈ ಸ್ನೇಹಕೂಟದ ಮನರಂಜನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಭ್ರಮಿಸಿದರು. ಪುಟಾಣಿಗಳಾದ ರಿಶಾಲ್, ಶಾರ್ವಿ ಹಾಗೂ ಅವ್ನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸತೀಶ್ ಬಂಗೇರ ಕೊಲ್ಯ ವರದಿ ವಾಚಿಸಿದರೆ, ದಿನೇಶ್ ಬಂಗೇರ ಇರ್ವತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಕುಂಬಾರ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ಇದೇ ಸಂದರ್ಭ ಆನಂದ್ ಕುಂಬಾರ- ಜಯಲಕ್ಷ್ಮೀ ದಂಪತಿಗಳ ಮೂವತ್ತನೇ ವಿವಾಹ ವಾರ್ಷಿಕೋತ್ಸವ, ಪುಟಾಣಿ ಯಕ್ಷ್ ಅವರ ಹುಟ್ಟುಹಬ್ಬವನ್ನೂ ಸಂಭ್ರಮದಿಂದ ಆಚರಿಸಲಾಯಿತು. ದೋಹಾ ಕುಲಾಲ್ಸ್ ಇದರ ಮಹಿಳಾ ಘಟಕದ ಸದಸ್ಯರಿಂದ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.




