ಬೆಂಗಳೂರು ಜಾಲಹಳ್ಳಿ ಬಿಡಿಎ ಲೇಔಟ್ನಲ್ಲಿ 15 ಸಾವಿರ ಚ.ಅ ನಿವೇಶನ ಮಂಜೂರು
ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಳೆದ 40 ವರ್ಷಗಳಿಂದ ತಮ್ಮ ಸಂಘಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳಬೇಕು ಎಂದು ದೃಢ ಸಂಕಲ್ಪ ಮಾಡಿದ್ದ ಬೆಂಗಳೂರಿನ ಕುಲಾಲ್ ಸಂಘದ ಸಂಕಲ್ಪ ಕೊನೆಗೂ ನೆರವೇರಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮೂಲಕ ಬೆಂಗಳೂರು ಕುಲಾಲ ಸಂಘದವರು ಬಿಡಿಎ ಲೇಔಟ್ನಲ್ಲಿ ಜಾಗ ಮಂಜೂರಾತಿಯನ್ನು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಕುಲಾಲ ಸಂಘದ ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ ಚೆಂಡ್ಲರವರು ನಮ್ಮ ಸಂಘ 53 ನೇ ವರ್ಷದ ಸಂಭ್ರಮದಲ್ಲಿದೆ. ಈ ವೇಳೆ ನಮಗೆ ಪುತ್ತೂರು ಶಾಸಕ ಅಶೋಕ್ ರೈ ಅವರ ಮೂಲಕ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಿವೇಶನ ಮಂಜೂರಾಗಿದೆ. ಅತ್ಯಂತ ಬೆಲೆ ಬಾಳುವ ಜಾಗ ಇದಾಗಿದೆ, ನಾವು ಹಣ ಕೊಟ್ಟು ಖರೀದಿಸಲು ಸಾಧ್ಯವೇ ಇಲ್ಲದಂತ ಜಾಗವಾಗಿದೆ. ಸರಕಾರದ ನಿಗದಿತ ಮೊತ್ತವನ್ನು ಪಾವತಿಸುವ ಮೂಲಕ ನಮಗೆ ಆ ಜಾಗವನ್ನು ಶಾಸಕರು ಕೊಡಿಸಿದ್ದಾರೆ. ಇದನ್ನು ಮರೆಯಲು ಸಾಧ್ಯವಿಲ್ಲದ ಒಂದು ಐತಿಹಾಸಿಕ ದಿನವಾಗಿ ನಾವು ಪರಿಗಣಿಸಿದ್ದೇವೆ. ಈ ಹಿಂದೆ ಅನೇಕ ಜನಪ್ರತಿನಿಧಿಗಳ ಬಳಿ ನಾವು ಮನವಿ ಸಲ್ಲಿಸಿದ್ದರೂ ಯಾರೂ ಅದಕ್ಕೆ ಮಾನ್ಯತೆ ನೀಡಿರಲಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಅಶೋಕ್ ರೈ ಒಬ್ಬ ದಿಟ್ಟ ಜನಪ್ರತಿನಿಧಿಯಾಗಿ ನಮ್ಮ ಮುಂದಿದ್ದಾರೆ. ಮುಂದೆ ಈ ಜಾಗದಲ್ಲಿ ನಾವು ಸಭಾಂಗಣ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸುವ ಕೇಂದ್ರವಾಗಿ ರೂಪೀಕರಿಸಲಿದ್ದೇವೆ ಎಂದು ತಿಳಿಸಿದರು.
ನುಡಿದಂತೆ ನಡೆದ ಅಶೋಕ್ ರೈ-ದಿವಾಕರ ಮೂಲ್ಯ: ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ ಮಾತನಾಡಿ ಒಂದು ವರ್ಷದ ಹಿಂದೆ ಪುತ್ತೂರು ಶಾಸಕರು ನಿವೇಶನ ಮಂಜೂರಾತಿ ಮಾಡಿಸಿಕೊಡುವ ಎಂದು ಭರವಸೆ ನೀಡಿದ್ದರೂ ಅದರಂತೆ ನಡೆದುಕೊಂಡಿದ್ದಾರೆ. ಬೆಲೆ ಬಾಳುವ ಸೈಟನ್ನು ನಮಗೆ ಒದಗಿಸಿಕೊಟ್ಟಿದ್ದಾರೆ. ಓರ್ವ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಅಶೋಕ್ ರೈ ನಿದರ್ಶನವಾಗಿದ್ದಾರೆ. ನಮ್ಮ ಸಂಘಕ್ಕೆ ನಿವೇಶನ ಮಂಜೂರಾತಿ ಮಾಡಿದ್ದ ಶಾಸಕರನ್ನು ಅವರ ಬೆಂಗಳೂರು ನಿವಾಸಕ್ಕೆ ತೆರಳಿ ಗೌರವಿಸುವ ಕೆಲಸವನ್ನು ಮಾಡಿದ್ದೇವೆ. ಕುಲಾಲ ಸಮಾಜದ ಪಾಲಿಗೆ ಆಪತ್ಪಾಂಧವನಾಗುವ ಮೂಲಕ ನಮಗೆ ನೆರವಾಗಿದ್ದಾರೆ. ಮುಂದೆ ನಾವು ಅವರಿಗೆ ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಸನ್ಮಾನಿಸಿದ ಸಂಘದ ಪ್ರಮುಖರು:
ನಿವೇಶನ ಮಂಜೂರುಗೊಳಿಸಿದ ಶಾಸಕ ಅಶೋಕ್ ಕೈ ಅವರನ್ನು, ಅವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಕುಲಾಲ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸಂಘದ ಮಾಜಿ ಅಧ್ಯಕ್ಷ ವಿಠಲ್ ಕನೀರ್ ತೋಟ, ಕಾರ್ಯದರ್ಶಿ ಆಶಾನಂದ್, ಮಾಜಿ ಅಧ್ಯಕ್ಷ ಎ ಎನ್ ಕುಲಾಲ್, ಉಪಾಧ್ಯಕ್ಷ ರಮಾನಾಥ್ ಏತಡ್ಕ, ಜೊತೆ ಕಾರ್ಯದರ್ಶಿ ಭಾಸ್ಕರ ಸಾಲಿಯಾನ್, ವಿಶ್ವನಾಥ ಕುಲಾಲ್, ಸದಸ್ಯರಾದ ರಮಾನಂದ ಕುಲಾಲ್ ಉಪಸ್ಥಿತರಿದ್ದರು.
ಬೇಡಿಕೆ ಈಡೇರಿಸಿದ್ದೇನೆ- ಅಶೋಕ್ ರೈ:
ಕಳೆದ ಬಾರಿ ನಾನು ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿದ್ದ ವೇಳೆ ನಮ್ಮ ಜೊತೆ ಕುಲಾಲ ಸಂಘದವರು ಸೇರಿಕೊಂಡಿದ್ದರು. ಆ ಬಳಿಕ ನನ್ನನ್ನು ಭೇಟಿಯಾದ ಸಂಘದ ನಿಯೋಗ ನಾವು 40 ವರ್ಷಗಳಿಂದ ನಮ್ಮ ಸಂಘಕ್ಕೆ ಜಾಗ ಮಂಜೂರಾತಿಗೆ ಹೋರಾಟವನ್ನು ಮಾಡುತ್ತಿದ್ದೇವೆ, ಎಲ್ಲರಲ್ಲೂ ಮನವಿ ಮಾಡಿಯಾಗಿದೆ, ಇನ್ನು ಯಾರಲ್ಲೂ ಬಾಕಿ ಇಲ್ಲ. ನಿಮ್ಮ ಮುಖಾಂತರ ನಮಗೆ ಜಾಗ ಮಂಜೂರಾಗಬಹುದು ಎಂಬ ಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದರು. ಆ ಬಳಿಕ ನಾನು ಕುಲಾಲ ಸಂಘದ ಪ್ರಮುಖರನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಳಿ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದು ಆ ಬಳಿಕ ಬಿಡಿಎ ಅಧ್ಯಕ್ಷ ಹ್ಯಾರಿಸ್ ಅವರ ಬಳಿಯೂ ಮಾತುಕತೆ ನಡೆಸಿದ್ದೆವು. ಕುಲಾಲ ಸಂಘಕ್ಕೆ ಮಂಜೂರಾದ ಜಾಗವನ್ನು ಬೇರೆಯವರೂ ತಮಗೆ ಕೊಡಬೇಕೆಂದು ಒತ್ತಡ ಹಾಕಿದ್ದರೂ ಉಪ ಮುಖ್ಯಮಂತ್ರಿಗಳ ಜೊತೆ ಪದೇ ಪದೇ ಒತ್ತಡ ಹಾಕಿ ಅದನ್ನು ಕುಲಾಲ ಸಂಘಕ್ಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದಿನ ಚುನಾವಣೆಯಲ್ಲೂ ಕುಲಾಲ ಸಮುದಾಯ ನನ್ನನ್ನು ಬೆಂಬಲಿಸುತ್ತದೆ ಎಂಬ ಪೂರ್ಣ ವಿಶ್ವಾಸವೂ ನನ್ನಲ್ಲಿದೆ. ಮುಂದಿನ ದಿನಗಳಲ್ಲಿ ಮಂಜೂರಾದ ನಿವೇಶನದಲ್ಲಿ ಸಂಘದ ಚಟುವಟಿಕೆ ನಡೆಸಲು ಸಹಾಯವಾಗುವಂತ ಅನುದಾನವನ್ನು ಒದಗಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


