ಬೆಳ್ತಂಗಡಿ: ಒಂದು ಸಣ್ಣ ಘಟನೆ ಹೇಗೆ ಒಬ್ಬನ ಬಾಳನ್ನೇ ಕಸಿದುಕೊಳ್ಳಬಹುದು ಎಂಬುದಕ್ಕೆ ಈ ಘಟನೆಯು ಒಂದು ಉದಾಹರಣೆಯಾದೀತು. ಕಬಡ್ಡಿ ಪಂದ್ಯಾಟದ ಸಂದರ್ಭ ದುರಾದೃಷ್ಟವಶಾತ್ ಕತ್ತಿನ ಭಾಗಕ್ಕೆ ಗಂಭೀರ ಏಟು ತಗುಲಿದ್ದರಿಂದ ಯುವಕನೊಬ್ಬ ಕೈ ಹಾಗೂ ಕಾಲಿನ ಬಲ ಕಳೆದುಕೊಂಡಿದ್ದಾನೆ. ಮಿತ್ತಬಾಗಿಲು ಗ್ರಾಮದ ಕೊಪ್ಪ ಕೊರಗಪ್ಪ ಕುಂಬಾರ ಹಾಗೂ ಯಮುನಾ ದಂಪತಿ ಅವಿವಾಹಿತ ಪುತ್ರ ಜಗನ್ನಾಥ ಕುಂಬಾರ ಅವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಇದೀಗ ವಿಧಿಯ ಲೀಲೆಗೆ ಸಿಲುಕಿ ಚಾಪೆ ಹಿಡಿದು ಮಲಗುವಂತಾಗಿದೆ.
ವೇಣೂರಿನ ನಿಟ್ಟಡೆ ಎಂಬಲ್ಲಿ ನಡೆದ ಕಬಡ್ಡಿ ಪಂದ್ಯಾಟದ ವೇಳೆ ಕುತ್ತಿಗೆಗೆ ಬಲವಾದ ಏಟು ತಗುಲಿದ ಅವರು ಆಮೇಲೆ ಎದ್ದು ನಿಲ್ಲಲೇ ಇಲ್ಲ. ಕುತ್ತಿಗೆಯ ಭಾಗದಲ್ಲಿ ಅವರ ನರಕ್ಕೆ ತಗುಲಿದ ಬಲವಾದ ಪೆಟ್ಟಿನಿಂದಾಗಿ (spinal cord injury) ಬಲಗೈ ಮತ್ತು ಕಾಲಿನ ಸ್ವಾಧೀನ ಕಳೆದುಕೊಳ್ಳುವಂತಾಗಿದೆ. ಕಬಡ್ಡಿ ಮತ್ತು ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದ ಜಗನ್ನಾಥ ಅವರು ಗಾರೆ ಕೆಲಸಕ್ಕೆ ಹೋಗುತ್ತಾ ಜೀವನ ನಿರ್ವಹಣೆಯ ದಾರಿಯಲ್ಲಿ ತನ್ನನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ತೃಪ್ತರಾಗಿದ್ದರು.
ಆದರೆ ಅಚಾನಕ್ ಆಗಿ ಸಂಭವಿಸಿದ ಈ ಘಟನೆ ಅವರ ಬಾಳಿನ ದಿಕ್ಕನ್ನೇ ಬದಲಾಯಿಸಿದೆ. ಅಲ್ಲದೆ ಜೀವನದ ಕನಸುಗಳನ್ನು ನುಚ್ಚು ನೂರಾಗಿಸಿದೆ. ಈಗಾಗಲೇ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಅವರ ಆರೈಕೆಗೆ 2 ಲಕ್ಷಕ್ಕೂ ಮಿಕ್ಕಿ ಖರ್ಚಾಗಿದ್ದು, ಇನ್ನೂ ಅಂದಾಜು 3 ಲಕ್ಷ ರೂಪಾಯಿ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟರವರೆಗಿನ ಚಿಕಿತ್ಸೆಗೆ ಜಾತಿ ಬಾಂಧವರು ಹಾಗೂ ಊರವರು ಕಿಂಚಿತ್ ನೆರವು ನೀಡಿದ್ದಾರೆ. ಆದರೆ ಬಡತನದಲ್ಲಿ ದಿನ ದೂಡುತ್ತಿರುವ ಅವರ ಮುಂದಿನ ಚಿಕಿತ್ಸೆಗೆ ದಾರಿ ಕಾಣದೆ ಚಿ೦ತಾಕ್ರಾಂತರಾಗಿದ್ದಾರೆ. ಅವರ ಮುಂದಿನ ಚಿಕಿತ್ಸೆಗೆ ದಾನಿಗಳ ನೆರವು ಅಗತ್ಯವಾಗಿದ್ದು, ದೇಣಿಗೆ ನೀಡಲು ಇಚ್ಛಿಸುವವರು ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.
ಬ್ಯಾಂಕ್ ಖಾತೆ ವಿವರ :
ಜಗನ್ನಾಥ
ವಿಜಯಾ ಬ್ಯಾಂಕ್ , ಮುಂಡಾಜೆ
ಖಾತೆ ಸಂಖ್ಯೆ : 115201231000262 (IFSC : VIJB 0001152)
ಅವರ ಮೊಬೈಲ್ ಸಂಖ್ಯೆ :9482828281