ಸುರತ್ಕಲ್(ಕುಲಾಲ ವರ್ಲ್ಡ್ ಡಾಟ್ ಕಾಮ್): ಯೋಗ ಶಿಕ್ಷಕಿಯಾಗಿ ಜನಪ್ರಿಯತೆ ಗಳಿಸಿದ್ದ ಸುರತ್ಕಲ್ ನ ಮಲ್ಲಿಕಾ ಕುಲಾಲ್ ಮನನೊಂದು ಯೋಗ ದಿನಾಚರಣೆಯ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಖೇದಕರ ಘಟನೆ ಮೈಸೂರಿನ ಗೋಕುಲಂನಲ್ಲಿ ನಡೆದಿದೆ.
ಗೋಕುಲಂ ಮೂರನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿದ್ದ ಯೋಗ ಶಿಕ್ಷಕಿ ಮಲ್ಲಿಕಾ ಅವರಿಗೆ ಆರೇಳು ವರ್ಷಗಳ ಹಿಂದೆ ವಿಚ್ಛೇದನವಾಗಿದ್ದು, ಮೂರು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದರು. ಯೋಗ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದರಾದರೂ ಕುಟುಂಬ ಹಾಗೂ ಸಂಬಂಧಿಕರಿಂದ ದೂರವಿದ್ದ ಕಾರಣ ನೋವಿನಲ್ಲಿದ್ದರು ಎನ್ನಲಾಗಿದೆ. ಶನಿವಾರ ಬೆಳಗ್ಗೆ 9:30ರ ಸಮಯದಲ್ಲಿ ಕಸದ ಡಬ್ಬಿಯನ್ನು ಮನೆಯ ಹೊರಗೆ ಇಟ್ಟಿದ್ದನ್ನು ನೆರೆ ಹೊರೆಯವರು ಗಮನಿಸಿದ್ದಾರೆ. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ನಿತ್ಯ ಯೋಗಾಭ್ಯಾಸಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳು ಬಂದು ಎಷ್ಟು ಬಾಗಿಲು ತಟ್ಟಿದರೂ ಬಾಗಿಲು ತೆರೆದಿಲ್ಲ. ಇದರಿಂದ ಅನುಮಾನಗೊಂಡು 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮನೆ ಹಿಂಭಾಗದಿಂದ ಹೋಗಿ ಕಿಟಿಕಿಯಲ್ಲಿ ನೋಡಿದಾಗ ಮಲ್ಲಿಕಾ ಅವರು ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಕಣ್ಣಿಗೆ ಬಿದ್ದಿದೆ. ಪೊಲೀಸರ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಮಲ್ಲಿಕಾ ಅವರ ಅಕ್ಕ ಮತ್ತು ಭಾವ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿರುವ ಮೃತದೇಹವನ್ನು ಭಾನುವಾರ ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಳಿಕ ವಾರಸುದಾರಿಗೆ ಒಪ್ಪಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ. ಮಲ್ಲಿಕಾ ಕುಲಾಲ್ ಅವರು ಕರಾವಳಿ ಕುಲಾಲ ಕಂಬಾರರ ಯುವ ವೇದಿಕೆ ಸಂಸ್ಥಾಪಕ ಸಲಹೆಗಾರರಲ್ಲಿ ಒಬ್ಬರಾದ ದಿ. ಎಂ. ಆರ್. ನಾರಾಯಣ ಇವರ ಪುತ್ರಿಯಾಗಿದ್ದಾರೆ.