ವಿದ್ಯಾರ್ಜನೆಗೆ ಆತ್ಮವಿಶ್ವಾಸ ಅಗತ್ಯ: ರಾಜೇಂದ್ರ ಅಳಪೆ
ಬೆಳ್ತಂಗಡಿ : `ಆತ್ಮವಿಶ್ವಾಸ ಬೆಳೆಸಿಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಮುಂದುವರಿಯಬೇಕು. ಪೋಷಕರು ಸಹ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಕಠಿಣ ಪರಿಶ್ರಮವೇ ನಮ್ಮನ್ನು ಮೇಲೆತ್ತಬಲ್ಲದು. ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವುದರ ಜೊತೆಗೆ ನಾಯಕತ್ವ ಗುಣ ಅಳವಡಿಸಿಕೊಂಡು ರಾಜಕೀಯವಾಗಿ ಮುಂದುವರಿಯಲು ಕುಲಾಲರು ಹಿಂದೇಟು ಹಾಕಬಾರದು’ ಎಂದು ಮಂಗಳೂರು ದ.ಕ. ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ರಾಜೇಂದ್ರ ಅಳಪೆ ಹೇಳಿದರು.
ಅವರು ರವಿವಾರ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಜರಗಿದ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಮತ್ತು ಬೆಳ್ತಂಗಡಿ ಕುಲಾಲ-ಕುಂಬಾರರ ಯುವ ವೇದಿಕೆಯ ಜಂಟಿ ಆಶ್ರಯದಲ್ಲಿ ತಾಲೂಕಿನ ಸ್ವಜಾತಿ ಪ್ರತಿಭಾವಂತ ಮತ್ತು ಬಡ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ನೂತನ ಗ್ರಾ.ಪಂ. ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಲಾಲ ಜಾತಿಯಲ್ಲಿ ಹುಟ್ಟುದ ನಾವು ಹೆಮ್ಮೆ ಪಡಬೇಕು. ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಜನೆಯಲ್ಲಿ ಮುಂದುವರಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಮಂಗಳೂರು ಕೃಷಿ ಇಲಾಖೆಯ ತಾಂತ್ರಿಕ ಸಹಾಯಕರಾದ ಕು| ಲಿಖಿತರಾಜ್ ಹೇಳಿದರು.
ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಾಜಿ ಅಧ್ಯಕ್ಷ ಗೋವಿಂದ ಮೂಲ್ಯ ಕೊಂಟುಪಲ್ಕೆ ಕಾರ್ಯಕ್ರಮ ಉದ್ಘಾಟಿಸಿದರು.
ಚಿತ್ರ-ವರದಿ : ಪದ್ಮನಾಭ ಕುಲಾಲ್, ವೇಣೂರು