ಕಾರ್ಕಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್ )ಕುಲಾಲ ಜನಾಂಗದ ಅಶಕ್ತ ಬಡವರಿಗಾಗಿ, ಸಮಾಜದಲ್ಲಿನ ತೀರಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡಕುಟುಂಬದ ಕಷ್ಟಗಳಿಗೆ ನೆರವಾಗಿ, ಅವರ ಕಣ್ಣೀರನ್ನು ಒರೆಸುವ ಕೆಲಸದೊಂದಿಗೆ ತನ್ನದೇ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಲ್ಪಟ್ಟು ಬಡವರ ಪಾಲಿನ ಆಶಾಕಿರಣವೆಂಬ ಜನಮನ್ನಣೆಯನ್ನು ಪಡೆದ `ಕುಲಾಲ ಚಾವಡಿ’ ವಾಟ್ಸಪ್ ಬಳಗದ ದಶಮಾನೋತ್ಸವ ಕಾರ್ಯಕ್ರಮವು ಏಪ್ರಿಲ್ 28ರಂದು ನಡೆಯಲಿದೆ.
ಕಾರ್ಕಳ ಕುಲಾಲ ಸಂಘದ ಜೋಡುರಸ್ತೆಯಲ್ಲಿರುವ ಸಭಾಭವನದಲ್ಲಿ `ಕುಲಾಲ ಚಾವಡಿ’ ಸ್ಥಾಪಕ ಸಂತೋಷ್ ಕುಲಾಲ್ ಪದವು ಅವರ ಅಧ್ಯಕ್ಷತೆಯಲ್ಲಿ ಸಂಜೆ ಆರರಿಂದ ನಡೆಯಲಿರುವ ಸಮಾರಂಭದಲ್ಲಿ ಕುಲಾಲ ಸಮಾಜದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮುಳುಗುತಜ್ಞ ಈಶ್ವರ್ ಮಲ್ಪೆ, ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಹಾಗು ಹುಮಾನಿಟಿ ಟ್ರಸ್ಟ್ ನ ರೋಷನ್ ಬೆಳ್ಮಣ್ಣು ಮುಂತಾದವರು ಕಾರ್ಯಕ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜದ ನೂರಾರು ಅಶಕ್ತ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸ ತುಂಬಿ ಅವರ ಮುಖದಲ್ಲಿ ಒಂದಿಷ್ಟು ಸಮಾಧಾನದ ನಗು ಅರಳಿಸಿದ `ಕುಲಾಲ ಚಾವಡಿ ‘ಯ ಸಹೃದಯಿ ಮಿತ್ರರು ಸಹಭೋಜನದೊಂದಿಗೆ ದಶಮಾನೋತ್ಸವ ಆಚರಿಸಲಿದ್ದಾರೆ.