ಮೂಡಬಿದಿರೆ : ಆಳ್ವಾಸ್ ನುಡಿಸಿರಿಗೆ ಹೋಗಬೇಕು ಹೋಗಬಾರದು ಎನ್ನುವ ಹಕ್ಕೊತ್ತಾಯದ ಮಧ್ಯೆ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರು ನುಡಿಸಿರಿಯಲ್ಲಿ ಭಾಗವಹಿಸಿದ್ದಾರೆ. ಆದರೆ ಅಲ್ಲಿ ತಾವು ಹೇಳಬೇಕಾದದ್ದನ್ನು ನೇರವಾಗಿ ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಹತ್ಯೆ ಬಗ್ಗೆ ಗಮನ ಸೆಳೆಯಲು, ಕಲಬುರ್ಗಿ ಅವರ ಹತ್ಯೆ ಬಗ್ಗೆ ಎಲ್ಲರೂ ಮಾತನಾಡುವಂತಾಗಬೇಕೆಂದು ಆಶಿಸಿ ಇಡೀ ಕಾರ್ಯಕ್ರಮದ ಉದ್ದಕ್ಕೂ ತಮ್ಮ ಕೊರಳಿಗೆ ಕಪ್ಪು ಬಟ್ಟೆ ಹೊದ್ದಿದ್ದರು. “ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅಹಸಹಿಷ್ಣುತೆ ಸೃಷ್ಠಿಯಾಗಿದೆ. ಇದನ್ನು ಪ್ರತಿಭಟಿಸುವುದಕ್ಕೆ ನುಡಿಸಿರಿಯಲ್ಲಿ ನೀಡುವ ಬಹುಮಾನ, ಭತ್ಯೆಯನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದರು.
ಕುಂ ವೀ ಅವರ ವಿಶೇಷ ಉಪನ್ಯಾಸದ ವಿಷಯ ಸಹಾ “ಸಾಮರಸ್ಯ: ಹೊಸತನದ ಹುಡುಕಾಟ”ವೇ ಆಗಿತ್ತು. ಜಾತಿ-ಜಾತಿಗಳ ಹಾಗೂ ಬಡವ-ಶ್ರೀಮಂತರ ನಡುವೆ ದೊಡ್ಡ ಕಂದಕ ಸೃಷ್ಠಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಎಂಟು ತಿಂಗಳಲ್ಲಿ 600ಕ್ಕೂ ಅಧಿಕ ಕೋಮುಗಲಭೆಗಳಾಗಿವೆ. ಸಾಹಿತಿಗಳಿಗೆ ಸೌಜನ್ಯ ಮತು ಸಿಟ್ಟಿನ ವರ್ತನೆ ಬೇಕು. ರಾಜಕಾರಣವನ್ನು ವಿಮರ್ಶೆ ಮಾಡದ ಲೇಖಕ ಲೇಖಕನೇ ಅಲ್ಲ. ರಾಜಕಾರಣ ಮತ್ತು ಸಾಹಿತ್ಯ ಅನ್ಯೂನ್ಯವಾಗಿ ಸಾಗಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹತ್ಯೆ ಮಾಡುತ್ತಿರುವ ಕೆಲ ಸಂಘಟನೆಗಳು ಜನ ಹಾಕುವ ಬಟ್ಟೆ, ತಿನ್ನುವ ಆಹಾರ, ಕುಡಿವ ನೀರಿನ ಮೇಲೆ ಪ್ರಭುತ್ವವನ್ನು ಸಾಧಿಸಲು ಮುಂದಾಗುತ್ತಿವೆ ಎಂದು ಕಿಡಿಕಾರಿದರು.
ಸಂವಿಧಾನವೇ ನಿಜವಾದ ಧರ್ಮ ಮತ್ತು ಗ್ರಂಥ. ಸಂವಿಧಾನಕ್ಕೆ ಧಕ್ಕೆ ಬಾರದಂತೆ ಆಡಳಿತ ಮಾಡಬೇಕು. ಸರಕಾರ ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸದಿದಲ್ಲಿ ನಾವು ಪ್ರತಿಭಟಿಸಬೇಕು. ಲೇಖಕ ಸಾಮಾಜಿಕ ವೈದ್ಯನಾಗಿ ಆಡಳಿತ ಪಕ್ಷವನ್ನು ಆರೋಗ್ಯವಾಗಿರುವಂತೆ ನೋಡಿಕೋಳ್ಳಬೇಕು ಎಂದು ಹೇಳಿದರು.
ವೈದ್ಧಿಕ ಧರ್ಮ ನಮ್ಮನ್ನು ಸುತ್ತುವರೆದಿದೆ. ವಾಸ್ತು-ಶಿಲ್ಪ ಸಮಾಜಕ್ಕೆ ಮಾರಕ. ಇಂದು ಸಮಾಜವನ್ನು ನಿಯಂತ್ರಿಸುವಲ್ಲಿ ಇವುಗಳ ಪಾತ್ರ ಹೆಚ್ಚುತ್ತದೆ. ಇದು ಭಯೋತ್ಪಾದನೆಗಿಂತಲೂ ಭೀಕರ ಎಂದು ಉಚ್ಚರಿಸಿದರು.
ಅಸಹಿಷ್ಣುತೆಯನ್ನು ಸರಿ ಮಾಡುವ ಶಕ್ತಿ ಭಾರತ್ತಕ್ಕಿದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಕಂಡಿಸುವುದು ಸರಿಯಲ್ಲ. ಮನುಷ್ಯ-ಮನುಷ್ಯನನ್ನು ಯಾವುದೇ ಕಾರಣಕ್ಕೂ ವಿರೋಧಿಸಬಾರದು ಎಂದು ವಿನಂತಿಸಿದರು.
ನುಡಿಸಿರಿಯ ಮುಖ್ಯಸ್ಥರಾದ ಡಾ ಮೋಹನ್ ಆಳ್ವ, ಸಲಹಾ ಮಂಡಳಿಯ ನಾ ದಾಮೋದರ ಶೆಟ್ಟಿ ಈ ಪ್ರತಿಭಟನೆಯನ್ನು ಮೌನವಾಗಿಯೇ ಬರಮಾಡಿಕೊಂಡರು.
ಚಿತ್ರ ಕೃಪೆ : ಅವಧಿ