ಸಾಲು ಸಾಲು ದೀಪಗಳ ಜೊತೆಗೆ ಬಾಂಧವ್ಯವನ್ನು ವೃದ್ಧಿಸುವ ದೀಪಾವಳಿ ಹಬ್ಬ ಮುಗಿದು ವಾರ ಕಳೆಯುವುದರೊಳಗಾಗಿ ಅದೇ ಹಬ್ಬವನ್ನು ನೆನಪು ಮಾಡುವ ಕಿರು ದೀಪಾವಳಿ ಮತ್ತೆ ಬಂದಿದೆ. ಅದೇ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ತುಳಸಿ ಪೂಜೆ. ಎಲ್ಲ ಹಬ್ಬದಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಈ ಹಬ್ಬವನ್ನು ಹಿಂದು ಸಂಪ್ರದಾಯದಂತೆ ಪ್ರತೀವರ್ಷ ಸಂಭ್ರಮ-ಸಡಗರದಿಂದ ಆಚರಸಲಾಗುತ್ತದೆ. ಪವಿತ್ರವಾದ ತುಳಸಿಯನ್ನು ಪೂಜಿಸುವುದು ಈ ದಿನದ ವಿಶೇಷತೆಗಳಲ್ಲಿ ಒಂದಾಗಿದೆ.
ಭಗವಂತನನ್ನು ಬರಮಾಡಿಕೊಳ್ಳುವುದು :
ಕಾರ್ತಿಕ ಮಾಸದ ಹಬ್ಬಗಳಲ್ಲಿ ಅತ್ಯಂತ ಪವಿತ್ರವಾದುದು ಉತ್ಥಾನ ದ್ವಾದಶಿ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಈ ದಿನದಂದು ಭಗವಂತನಾದ ನಾರಾಯಣನು ಹಾಲ್ಗಡಲಲ್ಲಿ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತದಿಂದ ಹಲವು ಕಡೆ ಆಚರಿಸುವರು. ಆದುದರಿಂದ ಈ ದಿನದಂದು ತುಳಸಿ ಕಟ್ಟೆಯ ಸುತ್ತಲೂ ರಂಗೋಲಿಯಿಂದ ಅಲಂಕರಿಸಿ ತಳಿರು ತೋರಣಗಳನ್ನು ಕಟ್ಟಿ ತುಳಸಿಯನ್ನು ಸಿಂಗರಿಸಿ ಭಗವಂತನನ್ನು ಬರಮಾಡಿಕೊಳ್ಳುವುದು ನಂಬಿಕೆಯಾಗಿ ಬಂದಿದೆ.
ತುಳಸಿ ವಿವಾಹ:
ಸಾಮಾನ್ಯವಾಗಿ ಹಿಂದು ಧರ್ಮದಲ್ಲಿ ಹೆಚ್ಚಿನ ಮುತ್ತೈದೆಯರು, ಯುವತಿಯರು ಮುಂಜಾನೆ ಎದ್ದು ಸ್ನಾನ ಮಾಡಿ ತುಳಸಿ ಕಟ್ಟೆಗೆ ನೀರನ್ನು ಎರೆದು ಪೂಜೆಯನ್ನು ಮಾಡುವುದನ್ನು ನೋಡುತ್ತೇವೆ. ಆದರೆ ತುಳಸಿ ಪೂಜೆಯಂದು ಮನೆಮಂದಿಯೆಲ್ಲಾ ಸಂಜೆ ಅಥವಾ ಗೋದೂಳಿ ಸಮಯದಲ್ಲಿ ತುಳಸಿಯನ್ನು ಆರಾಧನೆ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ತುಳಸಿ ಪೂಜೆಯನ್ನು ಶ್ರದ್ಧಾಭಕ್ತಿಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಕೃಷ್ಣ ಹಾಗೂ ತುಳಸಿಯ ವಿವಾಹ ಈ ದಿನದಂದೇ ಆಯಿತು ಎಂಬ ನಂಬಿಕೆಯೂ ಇದೆ. ಆದ್ದರಿಂದ ಈ ದಿನದಂದು ತುಳಸಿಯನ್ನು ಮದುಮಗಳಂತೆ ಸಿಂಗರಿಸಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಗುತ್ತದೆ.
ಅಮೃತದಿಂದ ಜನಿಸಿದವಳು:
ಆಚರಣೆಯ ಹಿಂದೆ ಆ ಹಬ್ಬದ ಬಗ್ಗೆ ಪ್ರತ್ಯೇಕವಾದ ಹಿನ್ನೆಲೆ ಇರುತ್ತದೆ. ತುಳಸಿ ಪೂಜೆಯ ಬಗ್ಗೆ ಹೇಳಬೇಕೆಂದರೆ ಪುರಾಣ ಗ್ರಂಥಗಳ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ರಾಕ್ಷಸರಿಗೂ, ದೇವತೆಗಳಿಗೂ ಅಮೃತಕ್ಕಾಗಿ ಪೈಪೋಟಿ ನಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಅಮೃತ ಕಳಸವನ್ನು ಶ್ರೀ ವಿಷ್ಣು ಪಡೆದುಕೊಳ್ಳುತ್ತಾನೆ. ಆಗ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿ ಗಿಡವಾಯಿತು. ಅಮೃತದಿಂದ ಜನಿಸಿದವಳು ತುಳಸಿಯಾದುದರಿಂದ ತುಳಸಿಯನ್ನು ಯಾವ ವಿಧವಾಗಿ ಪೂಜಿಸಿದರೂ ಸಹ ಅದು ಶ್ರೇಷ್ಠ ಎಂಬ ನಂಬಿಕೆ ಇದೆ. ಪವಿತ್ರಳಾದ ತುಳಸಿಯನ್ನು ಕಂಡರೆ ಶ್ರೀಮನ್ನಾರಾಯಣನಿಗೆ ಲಕ್ಷ್ಮೀಯಷ್ಟೇ ಪ್ರಿಯಳು ಎಂಬ ಮಾತೂ ಇದೆ. ಆದ್ದರಿಂದ ಸರ್ವಶೇಷ್ಠವಾದ ತುಳಸಿ ಪೂಜೆಯಿಂದ ಸರ್ವರಿಗೂ ಕೂಡ ಒಳಿತಾಗುತ್ತದೆ ಅನ್ನೋ ಬಲವಾದ ನಂಬಿಕೆ ಇದೆ.
ವೃಂದಾಳಿಂದ ಶಾಪ:
ಮಹಾನ್ ಪವಿತ್ರಳಾದ ವೃಂದಾಳು ಅಸುರನಾದ ಜಲಂಧರನ ಹೆಂಡತಿ. ಅಷ್ಟೇ ಅಲ್ಲದೆ ಈಕೆ ಹರಿಯ ಪರಮ ಭಕ್ತಳೂ ಕೂಡ. ದೇವತೆಗಳೆಂದರೆ ಸಹಿಸದ ಜಲಂಧರನು ಒಂದಲ್ಲ ಒಂದು ರೀತಿಯಲ್ಲಿ ದೇವತೆಗಳಿಗೆ ಹಿಂಸಿಸಿರುತ್ತಾನೆ. ರಾಕ್ಷಸನಾದ ಜಲಂಧರನ ಕಿರುಕುಳವನ್ನು ತಾಳಲಾರದೆ ದೇವತೆಗಳು ವಿಷ್ಣುವಿನ ಮೊರೆಹೊಗುತ್ತಾರೆ. ಜಲಂಧರನಿಗೆ ಸಾವು ಬರಬೇಕಾದರೆ ವೃಂದಾಳ ಪಾವಿತ್ರ್ಯತೆಗೆ ಧಕ್ಕೆ ಬರಬೇಕು. ಆದ್ದರಿಂದ ಜಲಂಧರ ಯುದ್ಧಕ್ಕೆ ಹೋದ ಸಂಧರ್ಭದಲ್ಲಿ ವಿಷ್ಣುವು ಜಲಂಧರನ ವೇಷದಲ್ಲಿ ವೃಂದಾಳಲ್ಲಿಗೆ ಬರುತ್ತಾನೆ. ತನ್ನ ಪತಿಯೆಂದು ತಿಳಿದ ವೃಂದಾ ವಿಷ್ಣುವಿನ ಜೊತೆ ಸೇರುತ್ತಾಳೆ. ಆದರೆ ಇದು ತನ್ನ ಪತಿಯಲ್ಲ ವಿಷ್ಣುವೆಂದು ತಿಳಿದ ವೃಂದಾ ಕೋಪಗ್ರಸ್ಥಳಾಗಿ ವಿಷ್ಣುವಿಗೆ ಶಾಪವನ್ನು ಕೊಡುತ್ತಾಳೆ. ಆದರೆ ವೃಂದಾ ಪಾವಿತ್ರ್ಯತೆ ಹಾಗೂ ಅವಳ ಭಕ್ತಿಗೆ ಹರಿಯು ಮುಂದಿನ ಜನ್ಮದಲ್ಲಿ ನೀನು ತುಳಸಿಯಾಗಿ ಹುಟ್ಟಿ ಅತ್ಯಂತ ಪವಿತ್ರಾಳಾಗು ಎಲ್ಲರೂ ನಿನ್ನನ್ನು ಪೂಜಿಸಲಿ ಎಂದು ವರವನ್ನು ಕರುಣಿಸುತ್ತಾನೆ ಅನ್ನೋದು ಪುರಾಣದಲ್ಲಿ ಉಲ್ಲೇಖವಾಗಿದೆ.
ತುಳಸಿಯ ಜೊತೆಗೆ ನೆಲ್ಲಿಕಾಯಿ ಸಿಂಗಾರ:
ಪ್ರತಿಯೊಂದು ಹಿಂದುಗಳ ಮನೆಯ ಅಂಗಳದಲ್ಲಿ ನೆಲೆಸಿರುವ ತುಳಸಿ ಬಹುಪಯೋಗಿ ಔಷಧಿಯ ಗಿಡಗಳಲ್ಲಿ ಒಂದು. ತುಳಸಿಯನ್ನು ಸಂಜೀವಿನಿಗೆ ಹೋಲಿಸಲಾಗಿದ್ದು, ಇದು ಹಿಂದುಗಳಿಗೆ ಪೂಜಿಸುವ ದೇವರಾದರೆ ಇತರ ಧರ್ಮದವರಿಗೆ ಔಷಧಿಯ ಗುಣವನ್ನು ಹೊಂದಿರುವ ಸಂಜೀವಿನಿ. ತುಳಸಿ ಹಬ್ಬ ಎಲ್ಲ ಮನೆಯಲ್ಲಿ ರಾತ್ರಿಯ ಹೊತ್ತಿನಲ್ಲಿ ಆಚರಿಸುವ ಕಾರಣ ಈ ದಿನದಂದು ತುಳಸಿಯನ್ನು ಚೆನ್ನಾಗಿ ತೊಳೆದು ಕಬ್ಬುಗಳಿಂದ ಸಿಂಗರಿಸಿ, ತಳಿರು-ತೋರಣವನ್ನು ಕಟ್ಟಿ ತುಳಸಿಕಟ್ಟೆಯ ಸುತ್ತಲೂ ಹೂವಿನ ಜೊತೆಗೆ ಸುತ್ತಲೂ ರಂಗೋಲಿಯನ್ನು ಬಿಡಿಸಿ ಸಂಜೆಯ ಹೊತ್ತಿಗಾಗುವಾಗ ತುಳಸಿಯ ಜೊತೆ ನೆಲ್ಲ್ಲಿಕಾಯಿಯನ್ನು ಕಟ್ಟುತ್ತಾರೆ. ತಳಿರು-ತೋರಣಗಳಿಂದ ಸಿಂಗರಿಸಿದ ತುಳಸಿಯ ಜೊತೆಗ ಶ್ರೀಕೃಷ್ಣನ ಫೋಟೋವನ್ನು ಇಟ್ಟು ಪೂಜಿಸಿದರೆ ಇನ್ನೂ ಉತ್ತಮ. ತುಳಸಿಯನ್ನು ಹೀಗೆಯೇ ಸಿಂಗರಿಸಬೇಕು ಎಂಬ ನಿಯಮವೇನಿಲ್ಲ. ಅವರವರ ಅನೂಕೂಲಕ್ಕೆ ತಕ್ಕದಾಗಿ ತುಳಸಿಯನ್ನು ಅಲಂಕರಿಸುತ್ತಾರೆ. ತುಳಸಿಯಷ್ಟೇ ಔಷಧಿಯ ಗುಣವನ್ನು ಹೊಂದಿರುವ ಬೆಟ್ಟದ ನೆಲ್ಲಿಕಾಯಿಯ ಗಿಡ ಅತ್ಯಂತ ಪಾಮುಖ್ಯವಾದುದರಿಂದ ಹಬ್ಬದ ದಿನದಂದು ಈ ಗಿಡಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚಿನ ಕಡೆಗಳಲ್ಲಿ ನೆಲ್ಲಿಕಾಯಿಯ ಆರತಿಯನ್ನೇ ಬೆಳಗುವುದು ಇನ್ನೊಂದು ವಿಶೇಷ. ಕೆಲವೊಂದು ಕಡೆಗಳಲ್ಲಿ ಪೂಜೆಯ ವೇಳೆಗೆ ಬಾಳೆ ಎಲೆಯನ್ನು ತುಳಸಿಕಟ್ಟೆಯ ಎದುರು ಇಟ್ಟು ಅದಕ್ಕೆ ಅವಲಕ್ಕಿ, ಬೆಲ್ಲ, ತೆಂಗಿನ ಕಾಯಿ, ಹಣ್ಣು-ಹಂಪಲು, ಸಿಹಿತಿಂಡಿಗಳನ್ನು ತುಳಸಿಯ ಎದುರು ಇಟ್ಟು ಬಡಿಸಲಾಗುತ್ತದೆ. ಕೊನೆಯಲ್ಲಿ ಮಂಗಳಾರತಿಯನ್ನು ಮಾಡಿ ಮನೆಮಂದಿಯೆಲ್ಲ ತುಳಸಿಯನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ.
ಸರ್ವಶ್ರೇಷ್ಠ ತುಳಸಿ:
ತುಳಸಿಯ ಮಹಿಮೆ ಅನುಪಮ. ತುಳಸಿಗಿಂತ ಪವಿತ್ರವಾದುದು ಮತ್ತೊಂದಿಲ್ಲ. ಯಾವುದೇ ವ್ಯಕ್ತಿಯು ಸಾಯುವ ಸಮಯದಲ್ಲಿ ಆತನ ಬಾಯಿಗೆ ತುಳಸಿ ನೀರನ್ನು ಬಿಡುವ ಶಾಸ್ತ್ರವಿದೆ, ಅಂದರೆ ಯಮದೂತನು ಬರುವ ಮೊದಲಿಗೆ ವಿಷ್ಣು ಸೇವಕರು ಬಂದು ಆ ಜೀವಕ್ಕೆ ವಿಷ್ಣು ಸಾಯುಜ್ಯವನ್ನೂ ನೀಡುವುದಾಗಿ ಪರಶಿವನು ನಾರದನಲ್ಲಿ ಹೇಳಿದ್ದಾನೆ ಅಂತವರ ಪಾಪಗಳು ಪರಿಹಾರವಾಗಿ ಸ್ವರ್ಗ ಪ್ರಾಪ್ತಿ ಆಗುತ್ತದೆ ಅನ್ನೋ ಪ್ರತೀತಿಯೂ ಇದೆ.
ತುಳಸಿ ಇಲ್ಲದೇ ಯಾವುದೇ ಸಾಲಿಗ್ರಾಮದ ಪೂಜೆಯಿಲ್ಲ, ತುಳಿಸಿಯನ್ನು ಹಾಲಿನಿಂದ ಪೂಜಿಸಿದರೆ ಲಕ್ಷ್ಮಿ ಪ್ರಸನ್ನಳಾಗುವಳು ಎಂಬುವ ನಂಬಿಕೆ ಹಲವರದು. ಆರ್ಯುವೇದದಲ್ಲೀ ಕೂಡಾ ತುಳಸಿಯ ಉಪಯೋಗ ಅನೇಕ. ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಕ್ರಿಮಿ ಕೀಟಗಳು ಕಡಿಮೆಯಾಗುತ್ತದೆ, ಇದರ ಶುದ್ಧವಾದ ಗಾಳಿಯನ್ನು ನಾವು ಸೇವಿಸುವುದು ಆರೋಗ್ಯಕ್ಕೂ ಒಳ್ಳೆಯದು.
ಲೇಖನ: ವಜ್ರಾ ಗುಜರನ್, ಮಂಗಳೂರು