ವೇಣೂರು: ದೇವರ ನಂಬಿಕೆ, ಭಕ್ತಿ, ಸಾಮ್ಯತೆಯು ದೀರ್ಘಯುಷ್ಯ ಹಾಗೂ ಆರೋಗ್ಯವಂತ ಜೀವನಕ್ಕೆ ಸಹಕಾರಿ. ಯುವಕರು ಸದಾ ಗುರು ಹಿರಿಯರಿಗೆ ದಾಸರಾಗಿದ್ದಾಗ ಯೋಗಗಳು ಪ್ರಾಪ್ತಿಯಾಗುತ್ತದೆ. ನಡುಬೊಟ್ಟು ಕ್ಷೇತ್ರಕ್ಕೆ ಅಳದಂಗಡಿ ಅರಮನೆ ಖಾವಂದರ, ಸ್ವಜಾತಿ ಬಾಂಧವರ ಜತೆಗೆ ಕುಕ್ಕೇಡಿ-ನಿಟ್ಟಡೆ ಕುಲಾಲ ಸಂಘದ ಸಹಕಾರ ಅವಿಸ್ಮರಣೀಯ ಎಂದು ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ಧರ್ಮದರ್ಶಿ ರವಿ ಎನ್. ಹೇಳಿದರು.
ಅವರು ಮೂಲ್ಯರ ಯಾನೆ ಕುಂಬಾರರ ಸಂಘ ಕುಕ್ಕೇಡಿ-ನಿಟ್ಟಡೆ ವತಿಯಿಂದ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಜರಗಿದ ಸರ್ವಜ್ಞ ಟ್ರೋಫಿ ತಾಲೂಕು ಕುಲಾಲರ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಗುರು ಮುನಿಸಿಕೊಂಡರೆ ದೇವರೂ ಕೂಡಾ ಆಶೀರ್ವಾದ ಮಾಡುವುದಿಲ್ಲ. ಹಾಗಾಗಿ ಗುರುವಿನ ತೀರ್ಪನ್ನು ಮುರಿಯಬಾರದು ಎಂದು ಧರ್ಮದರ್ಶಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ನಿಟ್ಟಡೆ ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉಚ್ಛ ನ್ಯಾಯಾಲಯದ ನ್ಯಾಯವಾದಿ ಹರೀಶ್ ಪೂಂಜಾ, ನಡುಬೊಟ್ಟು ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ನಡುಬೊಟ್ಟು, ಮಂಗಳೂರು ಮೂಲ್ಯರ ಯಾನೆ ಮಾತೃ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ, ಮಂಗಳೂರು ವಾಣಿಜ್ಯ ತೆರಿಗೆ ನಿರೀಕ್ಷಕ ಯತೀಶ್ ಸಿರಿಮಜಲು, ತಾಲೂಕು ಕುಲಾಲರ ಸಂಘದ ಕಾರ್ಯದರ್ಶಿ ಮೋಹನ್ ಕಂಚಿಂಜ, ಕುಂಭಶ್ರೀ ಆಂಗ್ಲಮಾಧ್ಯಮ ಶಾಲಾ ಸಂಚಾಲಕಿ ಉಷಾ ಗಿರೀಶ್, ಗುರುವಾಯನಕೆರೆ ತಾಲೂಕು ಕ್ರೀಡಾ ಸಮಿತಿಯ ಅಧ್ಯಕ್ಷ ಲೋಕೇಶ್ ಕೆ., ಮಚ್ಚಿನ ಗ್ರಾ.ಪಂ. ಸದಸ್ಯೆ ವಸಂತಿ, ವೇಣೂರು ಶಿಶು ಮಂದಿರದ ಮಾತಾಜಿ ಹೇಮಾವತಿ ಮುದ್ದಾಡಿ, ಮಡಂತ್ಯಾರು ಗ್ರಾ.ಪಂ. ಸದಸ್ಯ ರಮೇಶ್ ಮೂಲ್ಯ, ನಿಟ್ಟಡೆ ಕುಲಾಲ ಸಂಘದ ಗೌರವಾಧ್ಯಕ್ಷ ಮಾಯಿಲ ಮೂಲ್ಯ, ಉಜಿರೆ ವಿವೇಕಾನಂದ ನಗರ ವಿವೇಕ ಕುಂಬಾರರ ಸಂಘದ ಅಧ್ಯಕ್ಷ ಸಂಜೀವ ಕುಂಬಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಶೀನ, ಮಹೇಶ್ ಶೆಟ್ಟಿ, ಮಿಥುನ್ ಕುಲಾಲ್ ಮಡಂತ್ಯಾರು, ಅಜಿತ್ ಶೆಟ್ಟಿ, ಗೋಪಾಲ ಕುಲಾಲ್, ರಮೇಶ್ ಮೂಲ್ಯ, ಗಿರೀಶ್ ಕುಲಾಲ್ ತೀರ್ಪುಗಾರರಾಗಿ ಸಹಕರಿಸಿದರು. ಸಂತೋಷ್ ಕುಮಾರ್ ಸಿದ್ದಕಟ್ಟೆ ನಿರೂಪಿಸಿದರು. ಸೋಮನಾಥ ಕೆ.ವಿ. ಸ್ವಾಗತಿಸಿ ದಿನಕರ ಕುಲಾಲ್ ವಂದಿಸಿದರು.
ವರದಿ : ಪದ್ಮನಾಭ ಕುಲಾಲ್ ವೇಣೂರು