ಬೆಳ್ತಂಗಡಿ ತಾಲೂಕು ಕುಲಾಲ ಕ್ರೀಡೋತ್ಸವ
ಕುಕ್ಕೇಡಿ: ಪ್ರತಿಯೊಬ್ಬ ಯುವಕನೂ ದೇಶದ ಆಸ್ತಿ. ಆಧುನಿಕತೆಯ ಬದಲಾವಣೆಯೊಂದಿಗೆ ಹಿರಿಯರು ಹಾಕಿದ ಮೆಟ್ಟಿಲುಗಳನ್ನು ಸ್ಮರಣಿಸುತ್ತಾ ನಾನಾ ಕ್ಷೇತ್ರದಲ್ಲಿ ಸಾಧಿಸಲು ಮುಂದಾಗಬೇಕು. ಆದರೆ ಬದಲಾವಣೆಯ ನೆಪದಲ್ಲಿ ಸಂಸ್ಕೃತಿಯನ್ನು ಮರೆಯಬಾರದು. ಕುಲಾಲರು ಪ್ರಾಮಾಣಿಕರು, ಸತ್ಯವಂತರು. ಆದರೆ ಕುಲಾಲ ಸಮುದಾಯದಲ್ಲಿನ ಸಾಧಕರಿಗೆ ಪ್ರೋತ್ಸಾಹದ ಕೊರತೆ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಿ.ಎಂ. ಕುಲಾಲ್ ಹೇಳಿದರು.
ಅವರು ನ. 22 ರಂದು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ಸರ್ವಜ್ಞ ಟ್ರೋಫಿ ತಾಲೂಕು ಕುಲಾಲರ ಕ್ರೀಡಾಕೂಟದಲ್ಲಿ ಮಾತನಾಡಿದರು.
ಧಾರ್ಮಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಕುಲಾಲರು ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದಿರುವುದು ಖೇದಕರ. ಸಮುದಾಯದ ಸಂಘಟನೆಗಳನ್ನು ಬಲಪಡಿಸುವುದರ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಬೆಳ್ತಂಗಡಿ ಕುಲಾಲರ ಯಾನೆ ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ಸಿವಿಲ್ ಇಂಜಿನಿಯರ್ ಲ| ಹರೀಶ್ ಕಾರಿಂಜ ನಾವೂರು ಹೇಳಿದರು.
ಆರ್ಥಿಕವಾಗಿ ಅಭಿವೃದ್ಧಿ ಕಂಡಿರುವ ಕುಂಬಾರರ ಸಂಘದಿಂದ ಸ್ವಜಾತಿ ಸೇರಿದಂತೆ ಎಲ್ಲಾ ಜಾತಿ ಬಾಂಧವರ ಸಹಾಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಗುರುವಾಯನಕೆರೆ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಪದ್ಮ ಮೂಲ್ಯ ಅನಿಲಡೆ ಹೇಳಿದರು.
ಕ್ರ್ರೀಡೋತ್ಸವದ ಉದ್ಘಾಟನೆಯನ್ನು ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕರಾದ ಸೋಮಯ್ಯ ಹನೈನಡೆ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟಡೆ ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಪೆರ್ಮುಡ ವಹಿಸಿದ್ದರು.
ರಾಷ್ಟ್ರೀಯ ವಿದ್ಯಾ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಕುಂಭಶ್ರೀ ವಿದ್ಯಾ ಸಂಸ್ಥೆಯ ಸಂಚಾಲಕ ಗಿರೀಶ್ ಕೆ.ಎಚ್., ವೇಣೂರಿನ ಸಾಮಾಜಿಕ ಕಾರ್ಯಕರ್ತ ಉಮೇಶ್ ನಡ್ತಿಕಲ್ಲು, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಬಿ.ಕೆ. ಬಂದಾರು, ಹೊಕ್ಕಾಡಿ ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ವಿಠಲ ಮೂಲ್ಯ, ವಾಸ್ತುತಂತ್ರಜ್ಞ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕರುಣಾಕರ ಕುಲಾಲ್, ಕುಕ್ಕೇಡಿ ಗ್ರಾ.ಪಂ. ಸದಸ್ಯೆ ಗೌರಿ, ಗ್ರಾಮಕರಣಿಕ ಉಮೇಶ್, ಕುವೆಟ್ಟು ಗ್ರಾ.ಪಂ. ಸದಸ್ಯೆ ರೋಹಿಣಿ, ಪ್ರಗತಿಪರ ಕೃಷಿಕ ಪೂವಪ್ಪ ಮೂಲ್ಯ ಫಂಡಿಂಜೆ ಕುಕ್ಕೇಡಿ ಗುರಿಕಾರ ಬೂಬ ಕುಲಾಲ್ ನೀಲಂಬೋಡಿ, ಅಂಡಿಂಜೆ ಗ್ರಾ.ಪಂ. ಸದಸ್ಯ ದಯಾನಂದ ಕುಲಾಲ್, ಖ್ಯಾತ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್, ಪತ್ರಕರ್ತ ಪದ್ಮನಾಭ ವೇಣೂರು, ಹೊಸಂಗಡಿ ಗ್ರಾ.ಪಂ.ನ ಸತೀಶ್ ಪೆರಿಂಜೆ, ಪುತ್ತೂರು ಜಿಲ್ಲಾ ಭಜರಂಗದಳದ ಗೋ ರಕ್ಷಕ್ ಪ್ರಮುಖ್ ಶ್ರೀನಿವಾಸ ಕುಲಾಲ್ ಚಾರ್ಮಾಡಿ, ವೇಣೂರು ಕೃ.ಪ.ಸ.ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ವೇಣೂರು ಶಿಶು ಮಂದಿರದ ಮಾತಾಜಿ ಹೇಮಾವತಿ ಮುದ್ದಾಡಿ, ಬೆಳ್ತಂಗಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ಕಾರ್ಯದರ್ಶಿ ಉಮೇಶ್ ಕುಲಾಲ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕುಕ್ಕೇಡಿ-ನಿಟ್ಟಡೆ ಕುಲಾಲ ಸಂಘದ ಪದಾಧಿಕಾರಿಗಳು ಸಹಕರಿಸಿದರು.
ಶೃತಿ ಬಳಗ ಪ್ರಾರ್ಥಿಸಿದರು. ಸುಧಾಕರ ಪ್ರಾಸ್ತಾವಿಕವಾಗಿ ಮಾತನಾಡಿ ಸಂತೋಷ್ ಕುಮಾರ್ ಸಿದ್ದಕಟ್ಟೆ ನಿರೂಪಿಸಿದರು. ಸೋಮನಾಥ ಕೆ.ವಿ. ಸ್ವಾಗತಿಸಿ ದಿನಕರ ಕುಲಾಲ್ ವಂದಿಸಿದರು.
ವರದಿ : ಪದ್ಮನಾಭ ಕುಲಾಲ್, ವೇಣೂರು