ಕಾರ್ಕಳ(ಮೇ.೨೦, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಗಳ ವಿವಾಹಕ್ಕೆ ಹಣ ಹೊಂದಿಸಲಾಗದೇ ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ `ಕುಲಾಲ ಚಾವಡಿ’ ವಾಟ್ಸಾಪ್ ಬಳಗದ ಮಿತ್ರರು ಸೇರಿ ನೆರವು ನೀಡಿ ಮಾನವೀಯತೆಗೆ ಸಾಕ್ಷಿಯಾದರು.
ಕಾರ್ಕಳ ತಾಲೂಕಿನ ನೀರೆ ಗ್ರಾಮದ ಪಾಲಟ್ಟ ದಲ್ಲಿ ವಾಸವಾಗಿರುವ ಬಾಬು ಮೂಲ್ಯ ಹಾಗೂ ಚನ್ನಿ ದಂಪತಿಗಳ ಪುತ್ರಿ ವಿದ್ಯಾ ಅವರ ಮದುವೆ ಖರ್ಚಿಗಾಗಿ ಕುಲಾಲ ಚಾವಡಿ ದಾನಿಗಳ ಮುಂದೆ ಸಹಾಯದ ಬೇಡಿಕೆ ಇಟ್ಟಿದ್ದರು. ಇದಕ್ಕೆ ಉದಾರ ದಾನಿಗಳು ತಕ್ಷಣ ಸ್ಪಂದಿಸಿದ ಪರಿಣಾಮ 23,200 ರೂ ಸಂಗ್ರಹಗೊಂಡಿದ್ದು, ಇದನ್ನು ಮೇ. ೧೮ರಂದು ವಧುವಿನ ಮನೆಗೆ ತೆರೆಳಿ ಹಸ್ತಾಂತರಿಸಲಾಯಿತು. ಈ ಸಂದರ್ಭ ಕುಲಾಲ ಚಾವಡಿ ಬಳಗದ ಸುರೇಶ್ ಕುಲಾಲ್ ರಂಗನಪಲ್ಕೆ, ಸದಾನಂದ ಕುಲಾಲ್ ನೀರೆ, ಹೃದಯ್ ಕುಲಾಲ್ ಕಾರ್ಕಳ, ಸಂದೇಶ್ ಕುಲಾಲ್ ಕಾರ್ಕಳ, ರಶ್ಮಿ ಕುಲಾಲ್ ಪದವು,ರಾಘವೇಂದ್ರ ಕುಲಾಲ್ ಪದವು ,ಅಶೋಕ್ ಕುಲಾಲ್ ಎರ್ಲಪಾಡಿ ಹಾಗೂ ಕುಲಾಲ ಚಾವಡಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ಉಪಸ್ಥಿತರಿದ್ದು, ಶುಭ ಕೋರಿದರು. ವಿದ್ಯಾ ಅವರ ವಿವಾಹ ಸಮಾರಂಭವು ಮೇ ೧೯ರಂದು ಬೈರಂಪಳ್ಳಿಯ ಸಂತೋಷ್ ಅವರ ಜೊತೆ ಸುಸೂತ್ರವಾಗಿ ನಡೆಯಿತು.
ಬಾಬು ಮೂಲ್ಯರ ಕುಟುಂಬವು ಚಿಕ್ಕಪ್ಪನ ಹೆಸರಲ್ಲಿರುವ ಜಾಗದಲ್ಲಿ ಪುಟ್ಟ ಮನೆ ರಚಿಸಿ ತನ್ನ ಮೂರು ವಯಸ್ಕ ಮಕ್ಕಳೊಂದಿಗೆ ಜೀವನ ಸಾಗಿಸಿತ್ತಿದ್ದು, ತೀವ್ರತರ ಕಾಲು ನೋವಿನಿಂದ ಬಳಲುತ್ತಿದ್ದು ಪತ್ನಿಯೂ ಮನೆ ಕೆಲಸದಲ್ಲಿಯೇ ನಿರತರಾಗಿರಬೇಕಾದ ಅನಿವಾರ್ಯತೆ. ಹಿರಿ ಮಗ ಮದುವೆಯಾಗಿ ಅದೇ ಮನೆಯಲ್ಲಿದ್ದರೂ ಮನೆ ಜವಾಬ್ದಾರಿಯಿಂದ ದೂರ ಉಳಿದಿದ್ದಾರೆ ಅನ್ನುವುದು ದುರ್ದೈವ. ಎರಡನೇ ಮಗಳ ಮದುವೆಗಾಗಿ ಧರ್ಮಸ್ಥಳ ಯೋಜನೆಯಿಂದ ಮಾಡಿದ ಸಾಲ ಇನ್ನೂ ಮುಗಿದಿಲ್ಲ. ಕೊನೇ ಮಗಳು ವಿದ್ಯಾ (35)ಗೇರುಬೀಜ ಕಾರ್ಖಾನೆಯಲ್ಲಿ ದುಡಿದು ಹಿರಿ ಜೀವಗಳಿಗೆ ಆಧಾರವಾಗಿದ್ದಾಳೆ. ಜತೆಗೆ ಅಕ್ಕನ ಮದುವೆ ಸಾಲ ತೀರಿಸುವ ಹೊಣೆಯೂ ಇವರ ಮೇಲಿದೆ. ಬಡತನ ಹಾಗೂ ವಯಸಿನ ಕಾರಣಕ್ಕಾಗಿ ಅನೇಕ ಸಂಬಂಧಗಳು ಮುರಿದು ಬಿದ್ದು ಇರೋ ಒಬ್ಬ ಕೊನೇ ಮಗಳ ಸೂಕ್ತ ವಯಸ್ಸಿನಲ್ಲಿ ಮದುವೆ ಮಾಡಿಸಲಾಗಲಿಲ್ಲ ಅನ್ನೋ ಚಿಂತೆಯಲ್ಲಿದ್ದರು. ಈ ಮಧ್ಯೆ ದೇವರು ದಯೆ ಏನೋ ತೋರಿಸಿ ಆ ಮಗಳಿಗೊಂದು ಸಂಬಂಧ ಕರುಣಿಸಿದ್ದು, ಮದುವೆಯ ಖರ್ಚು ನಿಭಾಯಿಸಲು ಹಣಕಾಸಿನ ತೊಂದರೆಯಲ್ಲಿದ್ದು, ಸಂಕಷ್ಟ ಎದುರಿಸುತ್ತಿದ್ದರು. ಇವರ ಕಷ್ಟಕ್ಕೆ ಸ್ಪಂದಿಸಿ ಕುಲಾಲ ಚಾವಡಿ ಸ್ವಲ್ಪಮಟ್ಟಿನ ಹಣ ಸಹಾಯ ಮಾಡಿ ಮಾದರಿಯಾಗಿದೆ.