ಕಾರ್ಕಳ (ಸೆ. ೦೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾರ್ಕಳ ಕುಲಾಲ ಸುಧಾರಕ ಸಂಘ ಇದರ ಕೆರ್ವಾಶೆ ಘಟಕದ ದ್ವಿತೀಯ ವಾರ್ಷಿಕ ಮಹಾಸಭೆಯು ಸಾಗರ್ ಸಭಾಭವನ ಕೆರ್ವಾಶೆಯಲ್ಲಿ ಯಶಸ್ವಿಯಾಗಿ ಜರುಗಿತು. ಕು. ಶ್ರೇಯಾರವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಆಗಮಿಸಿದ್ದ ಅತಿಥಿ ಗಣ್ಯರನ್ನು ಜೊತೆ ಕಾರ್ಯದರ್ಶಿ ಸತೀಶ್ ಕಜ್ಜೋಡಿಯವರು ಸ್ವಾಗತಿಸಿದರು. ಕೆರ್ವಾಶೆ ಕುಲಾಲ ಘಟಕದ ಕಾರ್ಯಾಧ್ಯಕ್ಷರಾದ ಸುಧೀರ್ ಬಂಗೇರರವರು ಪ್ರಾಸ್ತಾವಿಕದಲ್ಲಿ ಸಂಘದ ಮಾಸಿಕ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಲಾಲ ಬಾಂಧವರು ಭಾಗವಹಿಸಿ ಸಂಘಟನೆಯನ್ನು ಬಲಿಷ್ಠಗೊಳಿಸಲು ಸಹಕಾರ ನೀಡಬೇಕು ಎಂದು ಕರೆ ನೀಡುದರೊಂದಿಗೆ ಸಂಘದ ಪ್ರಾರಂಭದ ಸಫಲ ಹೆಜ್ಜೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಬೋಜ ಕುಲಾಲ್ ಬೇಳಂಜೆಯವರು ಕಾರ್ಕಳ ಕುಲಾಲ ಸಭಾಭವನದ ಉದ್ಘಾಟನಾ ಸಮಾರಂಭದ ಪ್ರಯುಕ್ತ ರಚನೆಗೊಂಡ ಗ್ರಾಮ ಸಮಿತಿಗಳಲ್ಲಿ ಕೆರ್ವಾಶೆ ಘಟಕದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘೀಸುತ್ತಾ, ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ಶತಾಬ್ದಿಯ ಪ್ರಯುಕ್ತ ಕಾರ್ಕಳ ಕುಲಾಲ ಸಂಘದಿಂದ ಆಯೋಜನೆಗೊಂಡ ಬೈಕ್ ರಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕುಲಾಲ ಯುವ ಸಮುದಾಯದ ಒಗ್ಗೂಡುವಿಕೆಯ ಫಲಶ್ರುತಿ ಇಂದು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತುಗಳಲ್ಲಿ ಕುಲಾಲ ಪ್ರತಿನಿಧಿಗಳನ್ನು ಕಾಣಬಹುದು. ಇದು ಕುಲಾಲರ ಸಂಘಟನೆಯ ಶಕ್ತಿ ಇದು ಇಲ್ಲಿಗೇ ನಿಲ್ಲಬಾರದು ಮುಂದಿನ ದಿನಗಳಲ್ಲಿ ವಿಧಾನ ಸಭೆಯಲ್ಲಿ ಕುಲಾಲ ಪ್ರತಿನಿಧಿಯ ಧ್ವನಿ ಧ್ವನಿಸುವ ತನಕ ನಾವು ವಿಶ್ರಮಿಸಬಾರದು ಎಂದು ನೆರೆದ ಕುಲಾಲ ಬಾಂಧವರಿಗೆ ಕರೆ ಕೊಟ್ಟರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ `ಮಾಧ್ಯಮ ಬಿಂಬ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ವಸಂತ್ ಕುಮಾರ್ ಬೆಳ್ತಂಗಡಿಯವರು ಸಿಂಧೂ ನಾಗರೀಕತೆಗಿಂತ ಹಿಂದಿನಿಂದಲೂ ಕುಂಭಾರಿಕೆ ಇತ್ತು. ಅದಲ್ಲದೇ ದ್ವಾಪರದಲ್ಲಿ ಶ್ರೀ ಕೃಷ್ಣನ ಬಾಲ ಲೀಲೆಯಲ್ಲಿ ಮೊಸರ ಕುಡಿಕೆಯನ್ನು ಒಡೆದು ತುಂಟತನವನ್ನು ಮೆರೆದುದನ್ನು ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಿರುದರಿಂದ ದ್ವಾಪರದಿಂದಲೇ ಕುಂಬಾರಿಕೆಯ ಅಸ್ತಿತ್ವವನ್ನು ಕಲ್ಪಿಸಬಹುದು. ತ್ರಿಪದಿ ಕವಿ ಸರ್ವಜ್ಞನ ವಂಶಸ್ಥರು ನಾವು ಸಮಾಜಕ್ಕಾಗಿ ತ್ಯಾಗ ಮನೋಭಾವನೇ ನಮ್ಮ ರಕ್ತಗುಣ ಅದು ಸಮರ್ಪಕವಾಗಿ ಸಮುದಾಯದ ಮೂಲಕ ಸಮಾಜಕ್ಕೆ ಬಳಕೆಯಾಗಿ ಸಮಾಜ ಸೇವೆಯೊಂದಿಗೆ ದೇಶ ಸೇವೆಯ ಸಂತೃಪ್ತಿಯನ್ನು ಪಡೆಯಬೇಕು. ಮತ್ತು ಕರ್ನಾಟಕದಲ್ಲೀಯೇ ಪ್ರಥಮತ ಎಂದು ಉಲ್ಲೇಖಿಸಲ್ಪಟ್ಟ ಸರ್ವಜ್ಞ ವೃತ್ತ ನಮ್ಮ ಸಂಘದ ಮುಖಾಂತರ ಕಾರ್ಕಳದಲ್ಲಿಯೇ ನಿರ್ಮಿಸಲ್ಪಡುವುದು ನಮಗೆ ಹೆಮ್ಮೆ. ಆದರೆ ವೃತ್ತ ನಿರ್ಮಾಣದ ಅಂತಿಮ ಹಂತದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು ಸಮುದಾಯದ ಸಮಸ್ತ ಬಾಂಧವರು ಸರ್ವಜ್ಞ ನಮ್ಮವ ಎನ್ನುವ ಮನೋಭಾವನೆಯಿಂದ ಮನೆಗೆ ನೂರು ರೂಪಾಯಿಗಳಂತೆ ಕೊಟ್ಟರು ಸರ್ವಜ್ಞ ವೃತ್ತ ಅತೀ ಶೀಘ್ರದಲ್ಲಿ ನಿರ್ಮಾಣವಾಗುತ್ತದೆ. ಆದ್ದರಿಂದ ತಮ್ಮ ಸಹಕಾರ ಸಂಘ ಕ್ಕೆ ಈಗ ಅವಶ್ಯ ಎಂದು ಮನಗಾಣಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಹೇಮಂತ್ ಕುಲಾಲ್ ಕಿನ್ನಿಗೋಳಿಯವರು `ಕುಲಾಲ್ ವರ್ಲ್ಡ್’ ನ ಮೂಲಕ ಸಮುದಾಯದ ಅಶಕ್ತ ಬಾಂಧವರ ಸಂಕಷ್ಟಕ್ಕೆ ಸಹಕರಿಸುವ ನನ್ನ ಆತ್ಮ ಸಂತೃಪ್ತಿಯ ಈ ಕೆಲಸವಿಂದು ನನ್ನನ್ನು ಕಿನ್ನಿಗೋಳಿಯಿಂದ ಕೆರ್ವಾಶೆಯಂತ ಪುಟ್ಟ ಗ್ರಾಮದ ವಾರ್ಷಿಕ ಮಹಾಸಭೆಯ ವೇದಿಕೆಯ ಮೇಲೆ ನಿಲ್ಲುವಂತೆ ಮಾಡಿತು. ಇದು ನಾವು ಸಮಾಜಕ್ಕೆ ಕೊಡುವ ಕಿಂಚಿತ್ ಸೇವೆಯ ಬದಲಾಗಿ ಸಮಾಜ ನಮಗೆ ನೀಡುವ ಮಾನ ಸನ್ಮಾನ. `ಕುಲಾಲ್ ವರ್ಲ್ಡ್’ ನಿಂದ ಇಂದು ಸಮಾಜದ ವಿವಿಧ ಸ್ತರದ ಗಣ್ಯಾತಿಗಣ್ಯ ವ್ಯಕ್ತಿಗಳ ಸಂಪರ್ಕವು ಪರಿಚಯ ಸ್ನೇಹದೊಂದಿಗೆ ಬೆಸೆದು ಸಮಾಜದ ದುರ್ಬಲ ವರ್ಗದ ಜನರ ಸಂಕಷ್ಟಕ್ಕೆ ಸಹಕರಿಸುವ ನಮ್ಮ ಈ ಕಾರ್ಯಕ್ಕೆ ಆನೆ ಬಲ ನೀಡಿದೆ. ಈ ನಿಟ್ಟಿನಲ್ಲಿ ಕುಲಾಲ ವರ್ಲ್ಡ್ ನ ರೂವಾರಿ ದಿನೇಶ್ ಬಂಗೇರ ಇರ್ವತ್ತೂರುರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾವು ಸದಾ ನಮ್ಮ ಮನೆ ಮಕ್ಕಳು ಅನ್ನುವ ಸಾಂಸಾರಿಕ ಜಗತ್ತಿನಿಂದ ತುಸು ಹೊರಬಂದು ಸಮಾಜದ ಆಗು ಹೊಗುಗಳತ್ತ ಗಮನವಿಟ್ಟು ಅಲ್ಪ ಸಮಯವನ್ನು ಸಮಾಜಕ್ಕೆ ಮೀಸಲಿಟ್ಟರೆ ಸಮಾಜವು ನಮ್ಮ ಆಪತ್ಕಾಲಕ್ಕೆ ಬೆಂಗಾವಲು ಆಗುತ್ತದೆ ಅಂದರು.
ಕಾರ್ಯಕ್ರಮದ ಕೊನೆಯಲ್ಲಿ ಸಭಾ ಅಧ್ಯಕ್ಷರ ಭಾಷಣದಲ್ಲಿ ಕೆರ್ವಾಶೆ ಕುಲಾಲ ಘಟಕದ ಗೌರವಾಧ್ಯಕ್ಷರಾದ ಜಯರಾಮ್ ಬಂಗೇರರವರು ಹಳ್ಳಿಯ ಬಹಳಷ್ಟು ಜನರಿಗೆ ನಮ್ಮಲ್ಲಿ ಜಾಸ್ತಿ ವಿದ್ಯೆ ಇಲ್ಲ, ಹೆಚ್ಚು ಹಣವಿಲ್ಲ ಎನ್ನುವ ಕೀಳರಿಮೆಯು ಸಮಾಜ ಸಂಘಟನೆಯಲ್ಲಿ ಸಕ್ರಿಯರಾಗಲು ಹಿಂಜರಿಕೆ ಉಂಟು ಮಾಡಿದೆ ಆದರೆ ವಿದ್ಯೆ ಹಣಕ್ಕಿಂತ ಮನಸ್ಸು ಮುಖ್ಯ. ಪ್ರಾರಂಭದಲ್ಲಿ ನಾಲ್ಕು ಐದು ಜನರಿದ್ದ ನಮ್ಮ ಘಟಕ ಇಂದು ಇಪ್ಪತ್ತು ಸಕ್ರಿಯ ಸದಸ್ಯರ ಬಲ ತುಂಬಿದೆ. ನಮ್ಮ ಸಕಾರಾತ್ಮಕ ದೃಷ್ಟಿಕೋನ ಭವಿಷ್ಯದಲ್ಲಿ ಸದೃಢ ಸಂಘಟನೆಗೆ ಮುನ್ನುಡಿ ಬರೆಯಬಹುದು. ಆ ದೃಷ್ಟಿಯಲ್ಲಿ ಕುಲಾಲ ಬಾಂಧವರಿಗೆ ಸಂಘದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಅವಶ್ಯ ಎಂದರು.
ವಾರ್ಷಿಕ ಮಹಾಸಭೆ ಪ್ರಯುಕ್ತ ಸಂಘದ ಮಹಿಳೆಯರಿಗೆ ಮಕ್ಕಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಗಳನ್ನು ಕಾರ್ಕಳ ಕುಲಾಲ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಲಾಲ್ ಪದವುರವುರು ಮುಖ್ಯ ತೀರ್ಪುಗಾರರಾಗಿ ಅತೀ ಮುತುವರ್ಜಿಯಿಂದ ನಡೆಸಿಕೊಟ್ಟರು. ಕೆರ್ವಾಶೆ ಕುಲಾಲ ಘಟಕದ ಹಿರಿಯ ಮಹಿಳಾ ಸದಸ್ಯೆ ಭವಾನಿ ಬಂಗೇರರವರು ರಂಗೋಲಿ ಸ್ಪರ್ಧಾರ್ಥಿ ಆಗಿದಲ್ಲದೆ ಸಭಾ ವೇದಿಕೆಯನ್ನು ಅಲಂಕರಿಸಿ ಮಹಿಳಾ ಸದಸ್ಯೆಯರಿಗೆ ಸ್ಪೂರ್ತಿಯಾದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಎಸ್. ಎಸ್. ಎಲ್. ಸಿ ಗಿಂತ ಮೇಲ್ಪಟ್ಟು ೨೦೧೭ /೧೮ನೇ ಸಾಲಿನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಘಟಕದ ಸದಸ್ಯರಾದ ಕೃಷ್ಣಪ್ಪ ಮೂಲ್ಯರು ಧನ್ಯವಾದ ಸಮರ್ಪಿಸಿದರು. ಕೆರ್ವಾಶೆ ಕುಲಾಲ ಘಟಕದ ಕಾರ್ಯಾಧ್ಯಕ್ಷರಾದ ಸುಧೀರ್ ಬಂಗೇರರವರು ಘಟಕದ ಸಕ್ರಿಯ ಕಾರ್ಯಕರ್ತರಾದ ಜಾರಪ್ಪ ಮೂಲ್ಯ, ಉಪಾಧ್ಯಕ್ಷರಾದ ಡಿ. ಕೆ ಕುಮಾರ್, ಗೋಪಾಲ ಮೂಲ್ಯ ಬಂಡಸಾಲೆ, ನೋಣಯ್ಯ ಮೂಲ್ಯ, ಜನಾರ್ದನ ಮೂಲ್ಯ, ಸುಧೀರ್ ಜೆ ಬಂಗೇರ, ಕೃಷ್ಣಪ್ಪ ಮೂಲ್ಯ, ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಶಶಿಧರ ಕುಲಾಲ್ ರವರು ಕಾರ್ಯಕ್ರಮ ನಿರೂಪಿಸಿದರು.
ವರದಿ: ಸತೀಶ್ ಕಜ್ಜೋಡಿ, ಕೆರ್ವಾಶೆ