ಮಂಗಳೂರು(ಅ.೩೧, ಕುಲಾಲ್ ವರ್ಲ್ಡ್ ನ್ಯೂಸ್): ದ.ಕ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಮಂಗಳವಾರ ಪ್ರಕಟಿಸಿದ್ದು, ಕುಲಾಲ ಸಮುದಾಯದ ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಂದಾಳು ಕೃಷ್ಣ ಸಾಲ್ಯಾನ್ ಏಳಿಂಜೆ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಮಗ್ರ ಸಾಧನೆಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೃಷಿಯಲ್ಲಿ ಲಾಭವಿಲ್ಲ ಎಂದು ದೂರ ಸರಿದು ಇತರ ಉದ್ಯೋಗಗಳಿಗೆ ಮಾರುಹೋಗುವವರ ಮಧ್ಯೆ ಕೃಷ್ಣ ಸಾಲ್ಯಾನ್ ಅವರು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಈ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದವರಾಗಿದ್ದಾರೆ.
ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಸಾಲ್ಯಾನ್ ಅವರು ಐಕಳ ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಏಳಿಂಜೆ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಪೆರುಗುಂಡಿ ಏತ ನೀರಾವರಿ ಸಮಿತಿ ಸದಸ್ಯರಾಗಿಯೂ ಸಾಲ್ಯಾನ್ ಕಾರ್ಯ ನಿರ್ವಹಿಸಿದ್ದು, ದ.ಕ ಕುಲಾಲ ಮಾತೃ ಸಂಘದ ಹಿರಿಯ ಸದಸ್ಯರೂ ಆಗಿದ್ದಾರೆ.
ಈ ಬಾರಿ ಜಿಲ್ಲಾಡಳಿತವು ರಾಜ್ಯೋತ್ಸವ ಪ್ರಶಸ್ತಿ ಅಂಗವಾಗಿ 16 ಕ್ಷೇತ್ರದಲ್ಲಿ 16 ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ನವೆಂಬರ್ ೧ರಂದು ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.