ಬ್ರಹ್ಮಾವರ(ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರರ ಸಮಗ್ರ ಏಳಿಗೆಗಾಗಿ ರಾಜ್ಯದಲ್ಲಿ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವತಂತ್ರ ಕುಂಭ ನಿಗಮ ಸ್ಥಾಪನೆ ಮಾಡುವುದು ನಮ್ಮ ಗುರಿ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
ಬ್ರಹ್ಮಾವರ ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಚೇರ್ಕಾಡಿ ಶಾರದಾ ಪ್ರೌಢ ಶಾಲೆಯಲ್ಲಿ ನಡೆದ ಸಂಘದ ವಾರ್ಷಿಕೋತ್ಸವ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕುಂಬಾರರ ಬದುಕು ಬವಣೆ ಕುರಿತು ಸಂಪೂರ್ಣ ತಿಳಿದುಕೊಂಡಿರುವ ಯಡಿಯೂರಪ್ಪ ಅವರು ಈ ಹಿಂದೆ ಕುಂಭ ನಿಗಮ ಸ್ಥಾಪನೆ ಮಾಡಿ, ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ಈ ನಿಗಮ ಅರ್ಧದಲ್ಲೇ ನಿಂತಿದ್ದು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕುಂಬಾರ ನಾಯಕರನ್ನು ಕರೆದೊಯ್ದು ಸ್ವತಂತ್ರ ಕುಂಭ ನಿಗಮ ಸ್ಥಾಪನೆ ಮಾಡುವುದು ಶತಸಿದ್ಧ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ,ಮೀನುಗಾರಿಕಾ ಹಾಗು ಯುವಜನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಈ ಬಾರಿಯಿಂದ ಜಿಲ್ಲಾಡಳಿತ ವತಿಯಿಂದ ಅದ್ಧೂರಿ ಸರ್ವಜ್ಞ ಜಯಂತಿ ಆಚರಣೆ ಮಾಡಲು ಕ್ರಮ ಕೈಕೊಳ್ಳಲಾಗುವುದು. ಅಲ್ಲದೆ ಪದಾಧಿಕಾರಿಗಳ ಬೇಡಿಕೆಯಂತೆ ಸಂಘದ ಸಮುದಾಯ ಭವನಕ್ಕೆ ನಿವೇಶನವನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.
ಕುಂಬಾರರ ಕಡೆಗಣನೆ :
ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರು, ಕುಂಬಾರಿಕೆ ಮೂಲ ವೃತ್ತಿ ಮಾಡಿಕೊಂಡು ಆ ಮೂಲಕ ಬೆಳೆದು ಬಂದ ರಾಜ್ಯದಲ್ಲಿರುವ 20 ಲಕ್ಷ ದಷ್ಟಿರುವ ಕುಂಬಾರ ಸಮುದಾಯದವರಿಗೆ ಸಾಮಾಜಿಕ ನ್ಯಾಯದ ನೆಲೆಯಲ್ಲಿ ರಾಜಕೀಯ ಮನ್ನಣೆಯನ್ನ ಕಳೆದ 70 ವರ್ಷಗಳಲ್ಲಿ ಯಾವುದೇ ರಾಜಕೀಯ ಪಕ್ಷ ಗಳು ನೀಡಿಲ್ಲ. ಯಾವುದೇ ಪಕ್ಷಗಳನ್ನ ಗೆಲ್ಲಿಸುವ ಯಾ ಸೋಲಿಸುವ ಶಕ್ತಿ ಕುಲಾಲ ಸಮಾಜಕ್ಕಿದೆ. ಕರಾವಳಿಯಲ್ಲಿ ಕುಲಾಲ್ ಸಮುದಾಯದ ಕಡಗಣನೆ ಖಂಡಿತಾ ಸಲ್ಲದು ಎಂದರು.
ಜಾತಿ ಸಂಘಟನೆಗಳ ಹುಟ್ಟು ಆಗಿರುವುದು ಜಾತಿಯನ್ನ ಸಾಮಾಜಿಕ ಶೈಕ್ಷಣಿಕ ಹಾಗು ರಾಜಕೀಯವಾಗಿ ಮೇಲೆತ್ತಿ ಆ ಮೂಲಕ ಆ ಜನಾಂಗಕ್ಕೆ ನೈತಿಕ ಶಕ್ತಿ ತುಂಬಲು. ಇದು ಸಂಘಟನೆಗಳ ಮೂಲ ಕರ್ತವ್ಯ. ಅದನ್ನ ಮರೆತು ದೇವಸ್ಥಾನ ಕಟ್ಟಿ ಅಲ್ಲಿ ನಾಗಮಂಡಲ ಬ್ರಹ್ಮ ಕಲಶ ಮಾಡುವುದಲ್ಲ. ಈ ಮಾತು ಕಹಿಯಾದರೂ ಕಟು ಸತ್ಯ. ಧಾರ್ಮಿಕ ಸೇವೆ ಹಾಗು ಕೆಲಸ ಮಾಡಲು ಅದಕ್ಕೆಂದೇ ಬೇರೆ ಮಠ ಮಂದಿರ ಸ್ವಾಮೀಜಿಗಳು ಧಾರ್ಮಿಕ-ಸಂಘ ಸಂಸ್ಥೆ ಗಳ ಧಾರ್ಮಿಕ ನಾಯಕರಿದ್ದಾರೆ. ಆ ಕೆಲಸ ಜಾತಿ ಸಮುದಾಯದ ಸಾಮಾಜಿಕ ಏಳಿಗೆಗಾಗಿ ಹುಟ್ಟಿಕೊಂಡ ಸಂಘ ಸಂಸ್ಥೆ ಗಳ ಹೆಗಲಿಗೆ ಬೀಳಲೇ ಬಾರದು. ಜನರಿಗೆ ಮಾರ್ಗದರ್ಶನ ಮಾಡಿ ಮಾನಸಿಕ, ಸಾಮಾಜಿಕ -ಶೈಕ್ಷಣಿಕ ರಾಜಕೀಯ -ಆರ್ಥಿಕ ಭದ್ರತೆಯನ್ನ ಒದಗಿಸುವ ಕೆಲಸ ಜಾತಿ ಸಂಘಗಳು ಆದ್ಯತೆಯ ಮೇಲೆ ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿತ್ಯಾನಂದ ಶೆಟ್ಟಿ ಹಾರಾಡಿ, ಹರೀಶ್ ಶೆಟ್ಟಿ ಚೇರ್ಕಾಡಿ, ಕರಾವಳಿ ಕುಲಾಲ ಕುಂಬಾರ ಯುವ ವೇದಿಕ ಉಡುಪಿ ಜಿಲ್ಲೆಯ ನಾಯಕರುಗಳಾದ ರಾಜೀವ ಕುಲಾಲ್ ಸತೀಶ್ ಕುಲಾಲ್ ನಡೂರು, ರಾಮಣ್ಣ ಕುಲಾಲ್, ಐತು ಕುಲಾಲ್, ಭೋಜ ಕುಲಾಲ್, ಮಂಜುನಾಥ ಕುಲಾಲ್, ಸಂತೋಷ್ ಕುಲಾಲ್, ಬಸವರಾಜ್ ಕುಲಾಲ್, ಸುಧಾಕರ ಕುಲಾಲ್, ಕಾಳು ಕುಲಾಲ್, ಗಣೇಶ್ ಕುಲಾಲ್, ರವಿಂದ್ರ ಕುಲಾಲ,, ಗಣೇಶ್ ಕುಲಾಲ ಆರೂರು, ಶಂಕರ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.