ಮಂಗಳೂರು : ಶೋಷಿತ ಕುಲಾಲ/ಕುಂಬಾರ ಜನಾಂಗಕ್ಕೆ ರಾಜಕೀಯ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಪರಿಗಣಿಸಿರುವ ಬಿಜೆಪಿಯು ಈ ಬಾರಿ ನಡೆಯಲಿರುವ ದ. ಕ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಇಬ್ಬರು ಮಹಿಳಾಮಣಿಗಳಿಗೆ ಅವಕಾಶ ನೀಡಿದೆ.
ಬಿಜೆಪಿಯಿಂದ ಪ್ರತಿಷ್ಠಿತ ಕಟೀಲು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸ್ಪರ್ಧಿಸಲು ಕಸ್ತೂರಿ ಪಂಜ ಹಾಗೂ ಕುರ್ನಾಡು ಜಿ. ಪ ಕ್ಷೇತ್ರಕ್ಕೆ ಶಕಿಲಾ ಜನಾರ್ಧನ್ ಕುಲಾಲ್ ಅವರ ಹೆಸರು ಅಂತಿಮಗೊಂಡಿದ್ದು, ಸದ್ಯವೇ ನಾಮಪತ್ರ ಸಲ್ಲಿಸಲಿದ್ದಾರೆ. ಕಟೀಲು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಕಳೆದ ಬಾರಿ ಈಶ್ವರ್ ಕಟೀಲ್ ಸ್ಪರ್ಧಿಸಿ ಗೆದ್ದಿದ್ದರೆ, ಕುರ್ನಾಡ್ ನಿಂದ ಸಂತೋಷ್ ಕುಮಾರ್ ರೈ ಆಯ್ಕೆಯಾಗಿದ್ದರು. ಸ್ಥಳೀಯವಾಗಿ ಪರಿಚಿತರಾಗಿದ್ದು, ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿರುವ ಶಕಿಲಾ ಅವರು ಈ ಬಾರಿ ಕಾಂಗ್ರೇಸ್ ನ ಹಿರಿಯ ನಾಯಕಿ ಮಮತಾಗಟ್ಟಿಯವರನ್ನು ಎದುರಿಸಲಿದ್ದಾರೆ.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷೆ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆಯೂ ಆಗಿರುವ ಕಸ್ತೂರಿ ಪಂಜ ಸ್ಥಳೀಯವಾಗಿ ಬಿಜೆಪಿಯನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಾತ್ರವಲ್ಲದೆ ಸ್ಥಳೀಯ ಮಹಿಳಾ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದಾರೆ. ಕಸ್ತೂರಿ ಅವರ ಹೆಸರು ಕಳೆದ ಬಾರಿ ಮೂಲ್ಕಿ-ಮೂಡಬಿದರೆ ವಿಧಾನ ಸಭೆ ಚುನಾವಣಾ ಸ್ಪರ್ಧೆಗೂ ಕೇಳಿ ಬಂದಿತ್ತು.
ಚುನಾವಣಾ ಕಣದಲ್ಲಿರುವ ಸಮೂದಾಯದ ಅಭ್ಯರ್ಥಿಗಳನ್ನು ಸಮಾಜದ ಎಲ್ಲರೂ ಬೆಂಬಲಿಸಬೇಕು ಎಂದು ಕುಲಾಲ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.