ಮುಂಬಯಿ : “ಅಮೂಲ್ಯದ 17ನೇ ವರ್ಷದ ಹುಟ್ಟುಹಬ್ಬ ಸಂಚಿಕೆಯನ್ನು ಬಿಡುಗಡೆ ಮಾಡಲು ಆನಂದವಾಗುತ್ತಿದೆ. ಅಮೂಲ್ಯದ ಗುಣಮಟ್ಟ ಉತ್ತಮವಾಗಿದ್ದು, ಉತ್ತಮ ಬರಹ, ಲೇಖನಗಳನ್ನು ಒಳಗೊಂಡಿದೆ. ಪ್ರತಿ ಬಾರಿಯೂ ಉತ್ತಮ ಮುಖ ಪುಟದೊಂದಿಗೆ ಓದುಗರನ್ನು ಆಕರ್ಷಿಸುತ್ತಿದೆ. ಅಮೂಲ್ಯದ ಬೆಳವಣಿಗೆ ಬೆರಗು ಹುಟ್ಟಿಸುವಂತಿದೆ. ಪತ್ರಿಕೆಯ ಗುಣ ಮಟ್ಟ ಇನ್ನಷ್ಟು ಎತ್ತರಕ್ಕೆ ಏರುತ್ತಿ ರಲಿ ಎಂದು ಹಾರೈಸುತ್ತಿದ್ದೇನೆ” ಎಂದು ನಾಸಿಕ್ ಹೋಟೆಲ್ ಉದ್ಯಮಿ ಸಂಜೀವ ಕೆ. ಬಂಗೇರ ನುಡಿದರು.
ನ. 15ರಂದು ಮಾಟುಂಗ ಪೂರ್ವದ ಪಯ್ಯನೂರ್ ಎಜುಕೇಶನ್ ಟ್ರಸ್ಟ್ ಸಭಾಗೃಹದಲ್ಲಿ ಜರಗಿದ ಕುಲಾಲ ಸಂಘ ಮುಂಬಯಿ ಇದರ ಮುಖವಾಣಿ ಅಮೂಲ್ಯ ಪತ್ರಿಕೆಯ 17ನೇ ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಮಂಗಳೂರು ಕುಲಾಲ ಭವನದ ಕಾರ್ಯಕ್ಕೆ ಸಂಘದ ಸದಸ್ಯರೆಲ್ಲರೂ ದೇಣಿಗೆ ನೀಡಿ ಸಹಕರಿಸಿದರೆ ಶೀಘ್ರದಲ್ಲಿ ಪೂರ್ಣಗೊಳ್ಳಲು ಸಾಧ್ಯ. ಈ ಭವನವು ನಮ್ಮ ಮುಂದಿನ ತಲೆಮಾರಿಗೆ ಪ್ರಯೋಜನಕಾರಿಯಾದೀತು” ಎಂದರು.
ಸಂಸ್ಥೆಯ ಪದಾಧಿಕಾರಿ ಶಂಕರ ವೈ. ಮೂಲ್ಯ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಾಲ ಸಂಘ-ಮುಂಬಯಿಯ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಮಾತನಾಡಿ, “ಅಮೂಲ್ಯದ ಬೆಳವಣಿಗೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳು ಸಮಾಜ ಬಾಂಧವರ ಮನೆ-ಮನ ತಲುಪುವಲ್ಲಿ ಅಮೂಲ್ಯದ ಸೇವೆ ಅಪಾರವಾಗಿದೆ” ಎಂದು ನುಡಿದರು.
ಪತ್ರಿಕೆಯ ಉಪ ಸಂಪಾದಕ ಶಂಕರ್ ವೈ. ಮೂಲ್ಯ, ಪ್ರಕಾಶಕ ಡಿ. ಐ. ಮೂಲ್ಯ ಮತ್ತು ಸಂಪಾದಕ ಮಂಡಳಿ ಸದಸ್ಯರಾದ ಶೇಖರ ಮೂಲ್ಯ, ರಘುನಾಥ ಕರ್ಕೇರ, ಸೂರಜ್, ಆನಂದಿ ಮೂಲ್ಯ ಮೊದಲಾದವರು ವೇದಿಕೆಯಲ್ಲಿದ್ದರು.
ಅಮೂಲ್ಯದ ಸಂಪಾದಕ ನಾರಾಯಣ ನೆತ್ರಕೆರೆ ಸ್ವಾಗತಿಸಿ ಮಾತನಾಡಿ, ಅಮೂಲ್ಯದ ಹುಟ್ಟು, ಅದು ನಡೆದು ಬಂದ ದಾರಿಯನ್ನು ವಿವರಿಸಿ, ಪ್ರಸ್ತುತ ಅಮೂಲ್ಯ ತುಳು ಕನ್ನಡಿಗರ ಸಾಹಿತ್ಯ ಬಳಗದಲ್ಲಿ ಒಂದು ಆಕರ್ಷಕ ಪತ್ರಿಕೆಯಾಗಿ ಬೆಳೆದು ನಿಂತಿದೆ ಎಂದರು. ನಾಸಿಕ್ ಉದ್ಯಮಿ ಸಂಜೀವ ಕೆ. ಬಂಗೇರ ಪ್ರಾಯೋಜಿತ ಅಮೂಲ್ಯ ಮಕ್ಕಳ ಫೋಟೊ ಸ್ಪರ್ಧೆಯ ವಿಜೇತರ ಯಾದಿಯನ್ನು ಶಂಕರ ವೈ. ಮೂಲ್ಯ ಘೋಷಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸ್ಪರ್ಧೆಯಲ್ಲಿ ಜಯಿಸಿದ ಪುಟಾಣಿಗಳಿಗೆ ನಗದು ಬಹುಮಾನವನ್ನು ಸಂಜೀವ ಬಂಗೇರ ವಿತರಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಹಾಗೂ ಯುವ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.