ಕುಲಾಲ ಸಂಘ ಮುಂಬಯಿ 85ನೇ ವಾರ್ಷಿಕ ಮಹಾಸಭೆ
ಮುಂಬಯಿ: `ಪ್ರತೀ ಸ್ಥಳೀಯ ಸಮಿತಿಯು ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಇದನ್ನು ಸಮಾಜ ಬಾಂಧವರು ಸದುಪಯೋಗಿಸಿಕೊಳ್ಳಬೇಕು. ಸಂಘ ಸದೃಢವಾಗಲು ಸಮಾಜ ಬಾಂಧವರ ಸದಸ್ಯತನದ ಅಗತ್ಯವಿದೆ. ಸಂಘ ಬಲಿಷ್ಠವಾದಾಗ ಸಮಾಜದ ಎಲ್ಲ ಬಂಧುಗಳಿಗೆ ಆಶ್ರಯವಾಗಲು ಸಾಧ್ಯವಾಗುತ್ತದೆ. ಠೇವಣಿ ಮತ್ತು ದೇಣಿಗೆ ಮೂಲಕ ಸಂಘದ ಮಂಗಳೂರಿನ ಸ್ವಂತ ಜಾಗದಲ್ಲಿ ಬೃಹತ್ ಯೋಜನೆ ಶೀಘ್ರಗತಿಯಲ್ಲಿ ಸಾಗುತ್ತಿದೆ. ಇದು ದಾನಿಗಳ ಮತ್ತು ಸಮಾಜ ಬಾಂಧವರ ಸಹಕಾರದಿಂದ ಸಾಧ್ಯವಾಗುತ್ತಿದೆ’ ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ನುಡಿದರು.
ನ. 15ರಂದು ಮಾಟುಂಗಾ ಪೂರ್ವದ ಮೈಸೂರು ಅಸೋಸಿ ಯೇಶನ್ ಸಮೀಪದ ಪಯನೂರು ಎಜುಕೇಶನ್ ಟ್ರಸ್ಟ್ ಸಭಾಗೃಹದಲ್ಲಿ ಜರಗಿದ ಕುಲಾಲ ಸಂಘ ಮುಂಬಯಿ ಇದರ 85ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಮಂಗಳೂರಿನ ಬೃಹತ್ ಯೋಜನೆ ಸಂಪೂರ್ಣವಾಗಿ ರೂಪುಗೊಳ್ಳಲು ತಾವೆಲ್ಲರೂ ಕೈಜೋಡಿಸಬೇಕು’ ಎಂದು ವಿನಂತಿಸಿದರು.
ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಿ. ಐ. ಮೂಲ್ಯ ವಾರ್ಷಿಕ ವರದಿ ಮಂಡಿಸಿದರು. ಗೌರವ ಕೋಶಾಧಿಕಾರಿ ಜಯ ಅಂಚನ್ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟರು. ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ನೂತನ ಸಮಿತಿ ಸದಸ್ಯರ ಹೆಸರನ್ನು ಚುನಾವಣಾಧಿಕಾರಿ ರಾಜೇಶ್ ಬಂಜನ್ ಘೋಷಿಸಿದರು.
ವೇದಿಕೆಯಲ್ಲಿದ್ದ ಸಂಘದ ಉಪಾಧ್ಯಕ್ಷ, ಜ್ಯೋತಿ ಕ್ರೆಡಿಟ್ ಸೊಸೈಟಿ ಕಾರ್ಯದರ್ಶಿ ದೇವದಾಸ ಕುಲಾಲ್ ಮಾತನಾಡಿ, `ಸಮಾಜ ಬಾಂಧವರ ಪ್ರೋತ್ಸಾಹ, ಸಂಘದ ಮೇಲಿನ ಅಭಿ ಮಾನದಿಂದ ಸಂಘ ಸದೃಢವಾಗಿ ಬೆಳೆದಿದೆ. ಎಲ್ಲ ಕಾರ್ಯ ಯೋಜನೆ ಗಳಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಜ್ಯೋತಿ ಕ್ರೆಡಿಟ್ ಸೊಸೈಟಿ ನಾಸಿಕ್ ಮತ್ತು ನಲಸೋಪರದಲ್ಲಿ ಪ್ರಾರಂಭಿಸುವ ಸಿದ್ಧತೆಯಲ್ಲಿದ್ದು ಇದಕ್ಕೆ ಎಲ್ಲರೂ ಸ್ಪಂದಿಸಬೇಕು’ ಎಂದರು.
ಗೌರವ ಕೋಶಾಧಿಕಾರಿ ಜಯ ಅಂಚನ್ ಮಾತನಾಡಿ, ಮಂಗಳೂರಿನ ಬೃಹತ್ ಯೋಜನೆಗೆ ಸಮಾಜ ಬಾಂಧವರು ಪ್ರತಿದಿನ ಒಂದಿಷ್ಟು ಹಣ ಸಂಗ್ರಹಿಸುವ ಮೂಲಕ ಸಂಘದ ಯೋಜನೆಗೆ ನಿಧಿ ಸಂಗ್ರಹ ರೂಪದಲ್ಲಿ ಸಮರ್ಪಿಸಬೇಕು ಎಂದು ಹೇಳಿದರು. ನಿಧಿ ಸಂಗ್ರಹ ಸಮಿತಿ ಕಾರ್ಯ ದರ್ಶಿ ಪಾದೆಬೆಟ್ಟು ಶೇಖರ ಮೂಲ್ಯ ತನ್ನ ಅನಿಸಿಕೆ ವ್ಯಕ್ತಪಡಿಸಿ, ಸಂಘ ನಿರ್ಣಯಿಸಿದ ಯೋಜನೆಗಳಿಗೆ ಬಹು ದೊಡ್ಡ ಮೊತ್ತ ಸಂಗ್ರಹವಾಗುವಲ್ಲಿ ಸಮಾಜ ಬಾಂಧವರು ಅರ್ಥಿಕ ನೆರವು ನೀಡಬೇಕು’ ಎಂದರು.
`ನಾನು ಕಳೆದ ವರ್ಷದಂತೆ ದಿನನಿತ್ಯ ಸಂಗ್ರಹಿಸಿದ ದುಡ್ಡಿನ ಡಬ್ಬವನ್ನು ಈ ಬಾರಿಯೂ ಸಂಘದ ಅಧ್ಯಕ್ಷರಿಗೆ ಸಮರ್ಪಿಸಿದ್ದು, ಪ್ರತಿಯೊಬ್ಬರು ಈ ರೀತಿ ನಿಧಿ ಸಂಗ್ರಹಿಸಬೇಕು’ ಎಂದು `ಅಮೂಲ್ಯ’ ಪತ್ರಿಕೆಯ ಉಪ ಸಂಪಾದಕ ಶಂಕರ್ ವೈ. ಮೂಲ್ಯ ಹೇಳಿದರು. `ಸಂಘ ಈ ವರ್ಷ ಗೋಡ್ಬಂದರ್ನಲ್ಲಿರುವ ಜಾಗದಲ್ಲಿ ಆಯೋಜಿಸಿದ ಗಣೇಶೋತ್ಸವ, ನೃತ್ಯ ಪರ್ವ ಮುಂತಾದ ಕಾರ್ಯಗಳು ಯಶಸ್ವಿಗೊಳ್ಳುವಲ್ಲಿ ಸಮಾಜ ಬಾಂಧವರ ಹಾಗೂ ಸಂಘದ ಸದಸ್ಯರ ಅಪಾರ ಕೊಡುಗೆಯಿದೆ’ ಎಂದು ನವಿಮುಂಬಯಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಹೇಳಿದರು.ಕಟ್ಟಡ ನಿರ್ಮಾಣ ಸಮಿತಿ ಕಾರ್ಯಾ ಧ್ಯಕ್ಷ ಕಲ್ಲಮಾರು ಗೋಪಾಲ ಬಂಗೇರ ಅವರು, ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಘದ ಜತೆ ಕಾರ್ಯದರ್ಶಿಗಳಾದ ಶಶಿಕುಮಾರ್ ವಿ. ಕುಲಾಲ್ , ಸುನಿಲ್ ಕುಲಾಲ್ , ಜತೆ ಕೋಶಾಧಿಕಾರಿ ರಾಜೇಶ್ವರಿ ನೇತ್ರಕೆರೆ, ನಿಧಿ ಸಂಗ್ರಹ ಸಮಿತಿ ಕೋಶಾಧಿಕಾರಿ ಕರುಣಾಕರ ಬಿ. ಸಾಲ್ಯಾನ್, ಅಮೂಲ್ಯ ಸಂಪಾದಕ ನಾರಾಯಣ ನೇತ್ರಕೆರೆ, ಸದಸ್ಯ ನೋಂದಣಿ ಸಮಿತಿ ಕಾರ್ಯಾಧ್ಯಕ್ಷ ಅಣ್ಣಿ ಸಿ. ಮೂಲ್ಯ, ಸಿಎಸ್ಟಿ – ಮುಲುಂಡ್ ಸ್ಥಳೀಯ ಸಮಿತಿ ಉಪ ಕಾರ್ಯಾಧ್ಯಕ್ಷ ಸುಂದರ್ ತೊಕ್ಕೊಟ್ಟು, ಚರ್ಚ್ಗೇಟ್ – ದಹಿಸರ್ ಸಮಿತಿ ಕಾರ್ಯಾಧ್ಯಕ್ಷ ಡಾ| ನಿಕೇಶ್ ಮೂಲ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ್ ಸಾಲ್ಯಾನ್, ಮಮತಾ ಗುಜರನ್, ಲ. ಜಯರಾಮ ಮೂಲ್ಯ, ಮೀರಾ -ವಿರಾರ್ ಸಮಿತಿ ಕಾರ್ಯದರ್ಶಿ ಮೋಹನ್ ಬಂಜನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಡಿ. ಐ. ಮೂಲ್ಯ ವಂದಿಸಿದರು.
ಸಮ್ಮಾನ, ಗೌರವ
ಈ ಸಂದರ್ಭ ಸಂಘದ ಸಕ್ರಿಯ ಕಾರ್ಯಕರ್ತರಾದ ಪದ್ಮನಾಭ ಕೆ. ಬಂಗೇರ ದಂಪತಿ ಡೊಂಬಿವಲಿ, ಕಣ್ಣಪ್ಪ ಮೂಲ್ಯ ದಂಪತಿ ಸಾಕಿನಾಕ, ಬಾಬು ಟಿ. ಕುಲಾಲ್ ದಂಪತಿ ಭಿವಂಡಿ ಅವರನ್ನು ಸಮ್ಮಾನಿಸಲಾಯಿತು. ದಿ| ಬಾಬು ಸಾಲ್ಯಾನ್ ಅವರ ಸ್ಮರಣಾರ್ಥ ರೋಲಿಂಗ್ ಶೀಲ್ಡ್ ಅನ್ನು ಶ್ರುತಿ ಜಯ ಅಂಚನ್, ದಿ| ಡಾ| ಸುಬ್ಬಯ್ಯ ಸ್ಮರಣಾರ್ಥ ರೋಲಿಂಗ್ ಶೀಲ್ಡನ್ನು ದೀಕ್ಷಿತಾ ಎಸ್. ಗುಜರನ್, ದಿ| ಸುಂದರ ಕರ್ಮರನ್ ರೋಲಿಂಗ್ ಶೀಲ್ಡ್ ಅನ್ನು ದಿಶಾ ಮೂಲ್ಯ ಅವರಿಗೆ ಪ್ರದಾನಿಸಲಾಯಿತು. ವರ್ಷದ ಅತ್ಯುತ್ತಮ ಸಮಾಜ ಸೇವಕರಾಗಿ ಚಂದ್ರಶೇಖರ ಕುಲಾಲ್ ಭಾಯಂದರ್, ಅರುಣ್ ಧರ್ಮಣ್ಣ ಬಂಗೇರ ಗೋರೆಗಾಂವ್ ಅವರು ಆಯ್ಕೆಯಾಗಿದ್ದು, ಅವರನ್ನು ಗೌರವಿಸಲಾಯಿತು.
22ರಂದು ವಾರ್ಷಿಕೋತ್ಸವ, ಡಿ. 31ರಂದು ಕ್ರೀಡಾಕೂಟ
ನ. 22ರಂದು ಥಾಣೆ – ಭಿವಂಡಿ ಸ್ಥಳೀಯ ಸಮಿತಿಯ ವಾರ್ಷಿಕೋತ್ಸವ ನಡೆಯಲಿದೆ. ಡಿ. 31ರಂದು ಸಮಿತಿ ಆಶ್ರಯದಲ್ಲಿ ಕ್ರೀಡಾ ಕೂಟ ನಡೆಯಲಿದೆ ಎಂದು ಥಾಣೆ – ಭಿವಂಡಿ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಮೂಲ್ಯ ಹೇಳಿದರು.
ಚಿತ್ರ, ವರದಿ : ಈಶ್ವರ ಎಂ. ಐಲ್