ಕುಂಬಾರರಿಗೆ ರಾಜಕೀಯ ಸ್ಥಾನಮಾನ ನೀಡಿ : ಅಣ್ಣಯ್ಯ ಕುಲಾಲ್ ಉಳ್ತೂರು ಒತ್ತಾಯ
ಬೆಳ್ತಂಗಡಿ : `ಪಂಚಭೂತಗಳೊಂದಿಗೆ ಬದುಕು ಕಟ್ಟಿಕೊಂಡು ಕುಲಕಸುಬು ನಡೆಸುತ್ತಿರುವ ಕುಂಬಾರರು ಅತ್ಯಂತ ಪ್ರಾಮಾಣಿಕವಾಗಿ ಸಮಾಜದಲ್ಲಿ ಜೀವನ ನಡೆಸುತ್ತಿದ್ದಾರೆ. ತ್ಯಾಗಿಗಳಾಗಿ ಸಮಾಜದ ಎಲ್ಲಾ ರಂಗಗಳಲ್ಲೂ ಸಕ್ರಿಯವಾಗಿದ್ದರೂ ಗುರುತಿಸಿಕೊಳ್ಳುವಲ್ಲಿ ವಿಫ಼ಲರಾಗಿ ಸಾಮಾಜಿಕ ನ್ಯಾಯದಲ್ಲಿ ಕುಂಬಾರರಿಗೆ ಅನ್ಯಾಯವಾಗುತ್ತಿದೆ. ರಾಜಕೀಯವಾಗಿ ಎಲ್ಲಾ ಪಕ್ಷದಲ್ಲಿ ಕೇವಲ ಕಾರ್ಯಕರ್ತರಾಗಿ ಮಾತ್ರ ದುಡಿಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕುಂಬಾರರಿಗೆ ರಾಜಕೀಯ ಸ್ಥಾನಮಾನ ನೀಡಬೇಕು’ ಎಂದು ಕರಾವಳಿ ಕುಂಬಾರ/ಕುಲಾಲ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ಇತ್ತೀಚೆಗೆ ನಡೆದ ಕುಂಬಾರರ ಸೇವಾ ಸಂಘ ಶ್ರೀರಾಮ ನಗರ ಬಂದಾರು ಇದರ ದ್ವಿತೀಯ ವಾರ್ಷಿಕ ಸಭೆಯಲ್ಲಿ ನೂತನ ಗ್ರಾ ಪಂ ಸದಸ್ಯರಿಗೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದನಾ ಭಾಷಣ ಮಾಡಿದ ಅವರು, `ಸಾಮಾನ್ಯ ವ್ಯಕ್ತಿಯು ನಾಯಕನಾಗುವ ಮೂಲಕ ಕುಂಬಾರ ಸಮಾಜವನ್ನು ಸಂಘಟನೆ ಮಾಡಲು ಯತ್ನಿಸಬೇಕು’ ಎಂದರು.
ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್ ಕೆ ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರದ ಅನೇಕ ಯೋಜನೆಗಳನ್ನು ಜನಪ್ರತಿನಿಧಿಗಳು ಜನರಿಗೆ ತಲುಪಿಸಲು, ಜನರು ಇವರ ಮೂಲಕ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆoದರು.
ಮುಖ್ಯ ಅತಿಥಿಯಾಗಿ ನಿವೃತ್ತ ಕಂದಾಯ ನಿರೀಕ್ಷಕ ಹಾಗೂ ರಾಜ್ಯ ಕುಂಬಾರ ಮಹಾ ಸಂಘದ ಸಂಘಟನಾ ಕಾರ್ಯದರ್ಶಿ ಪದ್ಮಕುಮಾರ್ ಮಾತನಾಡಿ, `ಕುಂಬಾರರು ಸಾಮಾಜಿಕ, ಧಾರ್ಮಿಕ, ರಾಜಕೀಯವಾಗಿ ತೊಡ ಗಿಸಿಕೊಂಡರೂ, ಗುರುತಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿಯ ರಕ್ಷಣೆಗಾಗಿ ಕುಂಬಾರರ ಕೊಡುಗೆ ಅಪಾರ ‘ ಎಂದರು.
ರಾಜ್ಯ ಕುಂಬಾರ/ಕುಲಾಲ ಯುವ ವೇದಿಕೆಯ ಅಧ್ಯಕ್ಷ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ತೆಜಸ್ವೀರಾಜ್ , ತಾಲೂಕು ಕುಂಬಾರ/ಕುಲಾಲ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಕಾರಿಂಜ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಸಮಾಜದ ನೂತನ ಗ್ರಾ ಪಂ ಅಧ್ಯಕ್ಷ, ಸದಸ್ಯರಿಗೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸಂದರ್ಭ ಸನ್ಮಾನಿಸಲಾಯಿತು. ಕುಂಬಾರರ ಸೇವಾ ಸಂಘದ ಅಧ್ಯಕ್ಷ ಗುರುವಪ್ಪ ಕುಂಬಾರ, ನ್ಯಾಯವಾದಿ ಉದಯ ಕುಮಾರ್ , ವೆಂಕಪ್ಪ ಕುಂಬಾರ, ಹರೀಶ್ ಮುಂತಾದವರು ಕಾರ್ಯಕ್ರಮ ನಡೆಸಿಕೊಟ್ಟರು.