ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಇಂದಿನ ಯುವ ಸಮುದಾಯ ದುಶ್ಚಟಗಳನ್ನು ದೂರವಿಟ್ಟು ,ದೇಸಿ ಸಂಸ್ಕ್ರತಿ,ಪರಂಪರೆಯನ್ನು ಗೌರವಿಸುವ ಮೂಲಕ ಪರಿವರ್ತನೆಗೆ ಸಂಕಲ್ಪ ಮಾಡಬೇಕು. ಯುವ ಪೀಳಿಗೆಯಿಂದಲೇ ಮೌಲ್ಯಯುತ ಸಮಾಜ ಸೃಷ್ಟಿಯಾಗಲು ಸಾಧ್ಯ ಎಂದು ಮಾಣಿಲ ಮೋಹನದಾಸ ಸ್ವಾಮೀಜಿ ಹೇಳಿದರು. ಕುಲಾಲ ಸಂಘ ಕೊಲ್ಯ ಇದರ ಆಶ್ರಯದಲ್ಲಿ ಸೋಮೇಶ್ವರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನವನ್ನು ಏ. 10 ಭಾನುವಾರದಂದು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಅವರು, ಯುವ ಜನಾಂಗಕ್ಕೆ ಸತ್ಪಥದ ಮಾರ್ಗದರ್ಶನ ನೀಡಿ, ಸ್ವಾವಲಂಬನೆಯೊಂದಿಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳಲು ನಾವೆಲ್ಲರೂ ಚಿಂತನೆ ನಡೆಸಬೇಕು ಎಂದು ಹೇಳಿದರು.
ವಿಧಾನ ಸಭೆಯ ವಿಪಕ್ಷ ಉಪನಾಯಕ , ಶಾಸಕ ಯು. ಟಿ. ಖಾದರ್ ಸಭಾಂಗಣ ಉದ್ಘಾಟಿಸಿ ಮಾತನಾಡಿ ಈ ಸಮುದಾಯ ಭವನ ಕುಲಾಲರ ಸ್ವಾಭಿಮಾನದ ಸಂಕೇತ. ಮುಂದಿನ ಪೀಳಿಗೆಗೆ ಇದೊಂದು ದೊಡ್ಡ ಕೊಡುಗೆ. ಇದೇ ರೀತಿ ಪರಿಶ್ರಮಪಟ್ಟು ಕುಲಾಲ ಸಮುದಾಯದ ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಬಗ್ಗೆ ಸಲಹೆ ನೀಡಿದರು. ವೇದಿಕೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಸಚಿವ ಕೊಟ ಶ್ರೀನಿವಾಸ ಪೂಜಾರಿ, ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಭಾಸ್ಕರ ಕುತ್ತಾರು, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅನಿಲ್ ದಾಸ್ ಅಂಬಿಕಾ ರೋಡ್ ,ಕುಲಾಲ ಮಾತೃ ಸಂಘದ ಜಿಲ್ಲಾಧ್ಯಕ್ಷ ಮಯೂರ್ ಉಳ್ಳಾಲ್, ಕೊಲ್ಯ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿತ್ ಉಚ್ಚಿಲ, ಪದಾಧಿಕಾರಿಗಳಾದ ತಾರೇಶ್, ಚೈತೇಶ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.