ಹುಟ್ಟು ವಿಶೇಷಚೇತನನ ಬಾಳ ಬಂಡಿ ಇತರರಿಗೆ ಮಾದರಿ
ಬದುಕಿನ ಬಂಡಿಯನ್ನು ಸಾಗಿಸಲು ಪ್ರತಿಯೊಬ್ಬರೂ ಒಂದೊಂದು ದಾರಿಯನ್ನು ಕಂಡುಕೊಳ್ಳುತ್ತಾರೆ. ದುಡಿಯುವ ಮನಸ್ಸಿದ್ದವರಿಗೆ ಎಲ್ಲಿಯೂ ಕೆಲಸ ಸಿಗುತ್ತದೆ. ಹುಟ್ಟು ವಿಶೇಷಚೇತನರೊಬ್ಬರು ತನ್ನ ಬದುಕಿನ ಬಂಡಿಯನ್ನು ಸಾಗಿಸಲು ಆಯ್ಕೆ ಮಾಡಿದ್ದು ಸ್ವಉದ್ಯೋಗ. ಮನೆಯಲ್ಲೇ ಕುಳಿತು ಮಡಕೆ ತಯಾರಿಸುವ ವೃತ್ತಿ ಮಾಡುವ ಮೂಲಕ ತಾನು ಯಾಗಿಗೂ ಕಮ್ಮಿಯಿಲ್ಲ ಎಂಬಂತೆ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.
ಇವರು ಬಾಬು ಮೂಲ್ಯ. ಪುತ್ತೂರು ಮಾಡ್ನೂರು ಗ್ರಾಮದ ಕಾವು ಮದ್ಲ ನಿವಾಸಿ. ಸುಮಾರು 65ರ ಹರೆಯದಲ್ಲಿದ್ದಾರೆ. ಹುಟ್ಟುವಾಗಲೇ ಇವರ ಎರಡೂ ಕಾಲುಗಳು ಬಲಹೀನವಾಗಿದ್ದವು. ವಿಶೇಷಚೇತನರಾಗಿ ಜನ್ಮ ಪಡೆದ ಇವರಿಗೆ ಚಿಕಿತ್ಸೆ ನೀಡಿದರೂ ಕಾಲುಗಳಿಗೆ ಶಕ್ತಿ ಬರಲೇ ಇಲ್ಲ. ಮನೆಯಲ್ಲೇ ಇದ್ದ ಇವರು ತನ್ನ ತಂದೆ ಮಾಡುತ್ತಿದ್ದ ಕುಂಬಾರಿಕೆ ವೃತ್ತಿಯನ್ನು ಕರಗತ ಮಾಡಿಕೊಂಡರು. ತನ್ನ ತಂದೆ ತೀರಿ ಹೋದ ಬಳಿಕ 25ನೇ ವಯಸ್ಸಿನಲ್ಲಿ ಕುಂಬಾರಿಕೆ ವೃತ್ತಿಯನ್ನು ಸ್ವಯಂ ಮಾಡತೊಡಗಿದರು. ಈ ಆದಾಯವನ್ನೇ ನಂಬಿ ವಿವಾಹವಾಗಿ 5 ಮಂದಿ ಪುತ್ರಿಯರ ಸಂಸಾರವೂ ಇವರದಾಯಿತು.
ಮಡಕೆಯೇ ಆಧಾರ : ಮಕ್ಕಳ ವಿದ್ಯಾಭ್ಯಾಸಕ್ಕೆ ಮನೆ ಖಚರ್ಿಗೆ ಎಲ್ಲದಕ್ಕೂ ಮಡಕೆಯೇ ಆಧಾರ. ಎದ್ದು ನಿಲ್ಲಲೂ ಸಾಧ್ಯವಾಗದ ಅವರಿಗೆ ಸಾಥ್ ನೀಡಿದವರು ಪತ್ನಿ ರಾಧಾ. ಗಂಡನ ಕೆಲಸಕ್ಕೆ ಸಹಾಯ ನೀಡುವ ಮೂಲಕ ಮನೆಯನ್ನೇ ಗುಡಿ ಕೈಗಾರಿಕಾ ಕೇಂದ್ರವನ್ನಾಗಿ ಮಾಡಿದರು. ಅವರ ಮಡಕೆಗೆ ಎಲ್ಲಿಲ್ಲದ ಬೇಡಿಕೆ. ಮಡಕೆಯನ್ನು ಕೌಡಿಚ್ಚಾರ್ ಕುಂಬಾರರ ಗುಡಿ ಕೈಗಾರಿಕೆಗೆ ಮಾರಾಟ ಮಾಡುತ್ತಿದ್ದರೆ, ವಾರಕ್ಕೊಮ್ಮೆ ಸುಳ್ಯ ಸಂತೆಗೆ ತೆರಳಿ ಮಾರಾಟ ಮಾಡಿ ಬರುತ್ತಿದ್ದರು. ಈ ಆದಾಯವನ್ನು ಬಿಟ್ಟರೆ ಅವರಿಗೆ ಬೇರೆ ಯಾವುದೇ ಆದಾಯದ ಮೂಲವಿಲ್ಲ.
ಕಾಯಕವೇ ಕೈಲಾಸ :
ಕಾಯಕವೇ ಕೈಲಾಸ ಎಂದು ಬಗೆದ ಬಾಬು ಮೂಲ್ಯ ತನ್ನ ಐವರು ಪುತ್ರಿಯರಿಗೂ ಮದುವೆ ಮಾಡಿಸಿದ್ದಾರೆ. ಮಡಕೆ ಮಾರಿ ಬಂದ ಆದಾಯದಿಂದ ಒಂದು ಸಣ್ಣ ಮನೆಯನ್ನೂ ಮಾಡಿಕೊಂಡಿದ್ದಾರೆ.
ಇದುವರೆಗೂ ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದ ಇವರಿಗೆ ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಡಕೆ ತಯಾರಿಸಲು ಮಣ್ಣು ಸಿಗುತ್ತಿಲ್ಲ. ಯಾರಾದರೂ ಮಣ್ಣು ತಂದು ಕೊಟ್ಟರೂ ವಮಡಕೆ ಮಾಡುವ ಸ್ಥಿತಿಯಲ್ಲಿ ಇವರಿಲ್ಲ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮನೆಯಲ್ಲಿ ದಂಪತಿಗಳಿಬ್ಬರು ಮಾತ್ರ ಈಗ ವಾಸವಗಿದ್ದು, ಪತ್ನಿ ಕೂಲಿ ಕೆಲಸಕ್ಕೆ ತೆರಳಿ ಜೀವನ ನಡೆಸುತ್ತಿದ್ದಾರೆ. ಬದುಕಿನಲ್ಲಿ ಎದ್ದು ನಿಲ್ಲಲು ಸಹಾಯ ಮಾಡಿದ ಕುಂಬಾರಿಕೆ ವೃತ್ತಿಗೆ ಕಳೆದೊಂದು ತಿಂಗಳಿನಿಂದ ಬಾಬು ಮೂಲ್ಯ ನಿವೃತ್ತಿ ಘೋಷನೆ ಮಾಡಿದ್ದಾರೆ. ಈಗ ಅವರಿಗಿರುವ ಚಿಂತೆ ಒಂದೇ ಬದುಕಿರುವಷ್ಟು ದಿನ ಏನು ಮಾಡುವುದು. ಸಾಧಕರನ್ನು ಸನ್ಮಾನಿಸಿ ಗೌರವಿಸುವ ಮಂದಿ ಅವರನ್ನೂ ಗೌರವಿಸಿ, ಸಹಾಯಹಸ್ತ ನೀಡಬೇಕಿದೆ. ಶ್ರಮಜೀವಿಯಾಗಿ ಬದುಕಿ ಇನ್ನೊಬ್ಬರಿಗೆ ಆದರ್ಶವಾದ ಈ ವಿಶೇಷಚೇತನರ ಬಗ್ಗೆ ಸ್ಥಳೀಯವಾಗಿ ಎಲ್ಲರಿಗೂ ಗೌರವವಿದೆ.
———————————————-
`ನಾನು 25 ವರ್ಷ ಕುಂಬಾರಿಕೆ ವೃತ್ತಿಯನ್ನೇ ಮಾಡಿ ಬದುಕು ಸಾಗಿಸಿದೆ. ಇನ್ನು ನನ್ನಿಂದ ಸಾಧ್ಯವಿಲ್ಲ. ಸರಕಾರದಿಂದ 1200 ಮಾಸಾಸನ ಬರುತ್ತಿದೆ. ಮುಂದಿನ ಬದುಕಿಗೆ ಸರಕಾರದ ಮಾಸಾಸನವೇ ಆಧಾರ. ನನ್ನ ಪತ್ನಿಗೂ ವಯಸ್ಸಾಗಿದೆ. ನಾನು ಜೀವನದಲ್ಲಿ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ನನ್ನ ವೃತ್ತಿ ಕೊಟ್ಟಿದೆ. ದೇಹದ ಶಕ್ತಿಯನ್ನು ಕಳೆದುಕೊಂಡ ನನ್ನ ಕೈಗಳ ಶಕ್ತಿಯೂ ಈಗ ಕಡಿಮೆಯಾಗಿದೆ. ಕುಂಬಾರ ವೃತ್ತಿ ನನ್ನಬದುಕಿನ ಭಾರವನ್ನೇ ಹೋಗಲಾಡಿಸಿತು. ಮಾಡುವ ವೃತ್ತಿಯಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ವೃತ್ತಿಯೇ ನಮಗೆ ಬದುಕು ಕೊಡುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಮನುಷ್ಯ ದುಡಿದು ತಿನ್ನುವ ಮೂಲಕ ಬದುಕಬೇಕು’ –ಬಾಬು ಮೂಲ್ಯ ಮದ್ಲ
ಚಿತ್ರ-ವರದಿ : ಸಿದ್ದಿಕ್ ಕುಂಬ್ರ