ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಅ. ೩೦ರಂದು ಪ್ರಕಟಿಸಲಾಗಿದ್ದು, ಇದರಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾಯನಕೆರೆ ಕುವೆಟ್ಟು ಗ್ರಾಮದ ಬಿ ಶ್ರೀನಿವಾಸ್ ಕುಲಾಲ್ ( ಬಿ ಎಸ್. ಕುಲಾಲ್) ಅವರಿಗೆ ಪ್ರಶಸ್ತಿ ಲಭಿಸಿದೆ. ಬಿ ಎಸ್. ಕುಲಾಲ್ ಅವರು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ) ಗುರುವಾಯನಕೆರೆ ಇದರ ಮಾರ್ಗದರ್ಶಕರು, ಬೆಳ್ತಂಗಡಿ ತಾಲೂಕಿನ ಹಿರಿಯ ಪತ್ರಕರ್ತರು, ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದಾರೆ. ದ.ಕ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 58 ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಬಿ ಎಸ್. ಕುಲಾಲ್ ಅವರೂ ಒಬ್ಬರಾಗಿದ್ದಾರೆ.
ಇದೇ ವೇಳೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು,ರಾಜ್ಯೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2021 ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ಮೂರು ಸಂಘಸಂಸ್ಥೆ ಸೇರಿದಂತೆ ಒಟ್ಟು 35 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ಕುಲಾಲ ಸಮಾಜದ ಭಿನ್ನ ಸಾಮರ್ಥ್ಯದ ಚಿತ್ರ ಕಲಾವಿದ ಗಣೇಶ್ ಕುಲಾಲ್ ಪಂಜಿಮಾರು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಂಟಕಲ್ಲು ಸಮೀಪದ ಪಂಜಿಮಾರು ಅರಸಿನಹಿತ್ಲು ಮನೆಯ ರಾಮ ಮೂಲ್ಯ ಹಾಗೂ ನಾಗವೇಣಿ ದಂಪತಿಯ ಪುತ್ರನಾದ ಗಣೇಶ್ ಅವರು ಸಾಧಿಸಬೇಕೆಂಬ ಛಲದಿಂದ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಅಪ್ರತಿಮ ಚಿತ್ರಕಲಾವಿದನಾಗಿ ಮಿಂಚುತ್ತಿದ್ದಾರೆ.