ದೀಪಾವಳಿ ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
ದೀಪಾವಳಿ ಅರ್ಥ ಏನು?
ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.
ಮೊದಲಾಗಿ ದೀಪಾವಳಿ ಆಚರಣೆ ಬಗ್ಗೆ ಬರೆಯುವುದಿದ್ದರೆ ಮೂಲವಾಗಿ ಪೌರಾಣಿಕವಾಗಿ ಅಂತಹಾ ಮಹತ್ವವಿಲ್ಲದಿದ್ದರೂ ಅಂದಾಜು ೩ ಸಾವಿರ ವರ್ಷದ ಅಧಿಕೃತ ಇತಿಹಾಸವಿದೆ. ಅದು ದೀಪಾವಳಿಯಾಗಿ ಆಚರಣೆಯಲ್ಲಿತ್ತು. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ದೀಪಗಳ ಸಾಲು ಸಾಲನ್ನೇ ಹಚ್ಚುವ ಉದ್ದೇಶವೇನು? ಅದರ ಹಿನ್ನೆಲೆಯೇನು? ನಂತರ ಅದರ ಹಿಂದೆ ಮುಂದೆ ಸೇರಿದ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲೀಂದ್ರಪೂಜಾ, ಲಕ್ಷ್ಮೀಪೂಜಾ, ಯಮದ್ವಿತೀಯ, ಗೋಪೂಜಾದಿಗಳು ಹೇಗೆ ಸೇರಿದವು ಎಂಬುದರ ಬಗ್ಗೆ ಕೂಡ ಚಿಂತಿಸಬೇಕಿದೆ.
ನೀರು ತುಂಬುವ ಹಬ್ಬ :-
ರೈತಾಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎಂದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಆಚರಣೆಗೂ ಧೈವೀಕ ಹಿನ್ನೆಲೆ ಕೊಡುವುದು ಶಿಷ್ಟಾಚಾರ. ಹಾಗಾಗಿನರಕಾಸುರ ವಧೆಯ ಶುದ್ಧ್ಯರ್ಥ ಸ್ನಾನವೆಂದರು. ನರಕಾಸುರ ಭೂಮಿಪುತ್ರ. ವರಾಹಸ್ವರೂಪಿ ನಾರಾಯಣನ ಮಗ. ಇಲ್ಲಿ ಜುಂಗುಗಳೂ ಭೂ ಉತ್ಪನ್ನಗಳೇ. ಕೃಷಿಯಿಂದ ಬಂದದ್ದಲ್ಲ. ಎಲ್ಲರಿಗೂ ತುರಿಕೆ ಒಂದು ವಿಚಿತ್ರ ಕಾಟವೇ. ಆಡಲಾರದ, ಅನುಭವಿಸಲಾರದ ಕಷ್ಟ. ಅದರ ನಾಶವೆಂದರೆ ಸತ್ಯವೇ ಅಲ್ಲವೆ? ಒಟ್ಟಾರೆ ಈ ಶರದೃತುವಿನಲ್ಲಿ ಹೆಚ್ಚಿನವರು ಚರ್ಮ ರೋಗಾದಿ ಬಾಧೆಗಳನ್ನು ಅನುಭವಿಸುವುದು ಸತ್ಯ. ಇನ್ನು ಶ್ರೀಕೃಷ್ಣನು ತನ್ನ ಸರಳ ಜೀವನದಲ್ಲಿಯೂ ಇದನ್ನು ಆಚರಿಸಿ ತೋರಿದ್ದರಿಂದ ಕೃಷ್ಣನಿಗೆ ಈ ದಿನವನ್ನು ಸಮರ್ಪಿಸಿ ಹಬ್ಬ ಆಚರಿಸುವುದು ಸಾಧುವಲ್ಲವೆ? ನಂತರ ಅಮಾವಾಸ್ಯೆಯಂದು ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ.
ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ :
ರೈತಾಪಿ ವರ್ಗ ತಾವು ಬೆಳೆದ ಧಾನ್ಯಗಳನ್ನು ಒಟ್ಟಾಗಿ ರಾಶಿ ಹಾಕಿ ಗೌರವಿಸುವುದು ಉತ್ತಮ ಸಂಪ್ರದಾಯ. ಹಾಗೇ ಬಲಿಚಕ್ರವರ್ತಿಯ ದಾನ ಪ್ರವೃತ್ತಿಯಿಂದಾಗಿ ಸೋಮಾರಿತನ ಹೆಚ್ಚಿಸಿಕೊಂಡ ಜನರಿಗೆ ಸದ್ಬುದ್ಧಿ ಬೋಧಿಸಿದ. ಕಾಯಕವೇ ಕೈಲಾಸವೆಂದು ಸಾರಿದ ಶುಭದಿನದ ಹಬ್ಬ ಆಚರಣೆಯೂ ಶುಭಪ್ರದವೇ. ಹಾಗೇ ಗೋಪೂಜಾ:- ಹಿಂದಿನ ಕಾಲದಲ್ಲಿ ಸಂಪತ್ತು ಎಂದರೆ ಗೋವುಗಳೇ. ಅವುಗಳ ವಿನಿಮಯವೇ ವ್ಯಾಪಾರವಾಗಿತ್ತು. ಹಾಗಾಗಿ ಧನಲಕ್ಷ್ಮೀಪೂಜೆ, ಭಗಿನೀ ದ್ವಿತೀಯಾ ಅಥವಾ ಯಮದ್ವಿತೀಯ. ಇದೂ ಕೂಡ ಅದರಲ್ಲಿ ಸೇರಿತು. ಧರ್ಮಮೂರ್ತಿಯಾದ ಯಮನಿಗೆ ನಾವೆಲ್ಲಾ ಧರ್ಮ ಆಚರಣೆ ಪೂರ್ವಕ ಭಾಗಿನೇಯತ್ವದಲ್ಲಿ ಭಗಿನಿಯರಾಗಿ ಆಚರಿಸುವ ಹಬ್ಬ ಅರ್ಥಪ್ರದವಲ್ಲವೇ? ನಾವು ತಿನ್ನುವ ಅನ್ನ, ಬಳಸುವ ಶಕ್ತಿ, ನಮಗೆ ಆದರ್ಶ ಪ್ರಾಯರಾದವರ ನೆನಪಿನ ಆಚರಣೆ ನೂರಾರು. ಆಗಿ ಹೋದ ಸತ್ಪುರುಷರು ದೇಶದ ಧರ್ಮದ ಕಣ್ಮಣಿಗಳು. ಹಲವಾರು ಜನ ಅವರ ಹೆಸರಿನಲ್ಲಿ ಒಂದೊಂದು ದೀಪ ಹಚ್ಚಿದರೂ ಸಾವಿರಾರು ಆಗುತ್ತದೆ. ಅದೇ “ದೀಪಾವಳಿ”.
ಇಂತಹಾ ದೇವರ, ಪುಣ್ಯಪುರುಷರ, ಆದರ್ಶ ವ್ಯಕ್ತಿಗಳನ್ನು ನೆನಪಿಸುವ ದಿನವಾಗಿ ಆಚರಿಸುತ್ತಾ ಅವರ ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ಸಂಸ್ಕೃತಿ ದೀಪಾವಳಿಯಾಯ್ತು. ನಿಧಾನವಾಗಿ ಯಾವುದು ಯಾವುದೋ ಕಾರಣಕ್ಕೆ ಪೌರಾಣಿಕ ಮಹತ್ವ ಪಡೆದುಕೊಂಡಿತು. ಅದು ಹಬ್ಬವಾಗಿ ಆಚರಣೆಗೆ ಬಂತು. ಆದರೆ ಆಗೆಲ್ಲಾ ಈ ಪಟಾಕಿಗಳಿರಲಿಲ್ಲ; ದೀಪಗಳೇ. ದೊಡ್ಡ ದೊಡ್ಡ ದೀಪ, ಎತ್ತರೆತ್ತರದ ದೀಪ ಇವೆಲ್ಲಾ ಇತ್ತು. ಅಂದಾಜು ೨೦೦೦ ವರ್ಷದ ಹಿಂದೆ ಲೋಹಶಾಸ್ತ್ರದಲ್ಲಿ ಉಂಟಾದ ಒಂದು ವಿಶಿಷ್ಟ ಆವಿಷ್ಕಾರದಿಂದ ಅಗ್ನಿದಂಡ = ಈಗಿನ ಮ್ಯಾಗ್ನೇಷಿಯಂ ಕಡ್ಡಿ ಆವಿಷ್ಕಾರಗೊಂಡಿತು. ಈ ವಿಶಿಷ್ಟವಾದ ಲೋಹವು ತನ್ನಲ್ಲಿ ಉಂಟಾದ ಉಷ್ಣತೆಯಿಂದ ತನಗೆ ತಾನೇ ಹತ್ತಿ ಉರಿಯುತ್ತಿತ್ತು. ಆಕರ್ಷಕವಾಗಿತ್ತು. ಅದನ್ನು ಆಗಿನ ಕಾಲದಲ್ಲಿ “ಅಗ್ನಿದಂಡ” ಎನ್ನುತ್ತಿದ್ದರು. ಅದನ್ನು ಉರಿಸುವುದರಿಂದ ಒಂದು ರೀತಿಯ ಪ್ರಖರ ಬೆಳಕು ಬರುತ್ತಿದ್ದುದರಿಂದ ಕೆಲ ರಾಜ ಮಹಾರಾಜರು ತಮ್ಮ ಅರಮನೆಯ ಗೋಪುರದ ಮೇಲೆ ಅದನ್ನು ಉರಿಯುವಂತೆ ಮಾಡಿ ತಮ್ಮ ಹೆಚ್ಚುಗಾರಿಕೆಯೆಂದು ಪ್ರಕಟಿಸುತ್ತಿದ್ದರು. ಆದರೆ ಅದು ಪಟಾಕಿಯಲ್ಲ, ಸ್ಫೋಟಕವಲ್ಲ, ವಿಚ್ಛಿದ್ರಕಾರಿಯೂ ಅಲ್ಲ.
ತೀರಾ ಇತ್ತೀಚೆಗೆ ಅಂದರೆ ೬೦೦ ವರ್ಷದಿಂದ ಈಚೆಗೆ ಈ ಸುಡುಮದ್ದು ತಂತ್ರಜ್ಞಾನ ಬೆಳಕಿಗೆ ಬಂದಿದೆ. ಇದು ಯುದ್ಧಾದಿಗಳಲ್ಲಿ ರಾಜರು ಮಾತ್ರಾ ಬಳಸುತ್ತಿದ್ದ ವಸ್ತು, ಸಾರ್ವಜನಿಕವಾಗಿ ಬಳಕೆಗೆ ಬಂದು ಹತ್ತಿರ ೨೫೦ ವರ್ಷವೂ ಆಗಿಲ್ಲ. ಆದರೆ ಈಗ ಅದು ದೇಶದ ಒಂದ ವಿಚ್ಛಿದ್ರಕಾರಿ ಶಕ್ತಿಯಾಗಿ, ವಾತಾವರಣ ಕೆಡಿಸುವ ದೂಷಿತವಾಗಿ, ವರ್ಷವರ್ಷವೂ ಸಾವಿರಾರು ಮಕ್ಕಳ ಮೃತ್ಯು ಸ್ವರೂಪವಾಗಿ ತೆರೆದುಕೊಂಡಿರುತ್ತದೆ. ಫ್ಯಾಕ್ಟರಿಗಳಲ್ಲಿ, ಸಾಗಾಟದಲ್ಲಿ, ಮಾರಾಟ ಕಾಲದಲ್ಲಿ, ಬಳಕೆಯಾಗುವ ಕಾಲದಲ್ಲಿ, ನಾನಾ ರೀತಿಯಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಇದನ್ನು ತಡೆಯುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ. ಆದ್ದರಿಂದ ಪ್ರಜೆಗಳೇ ಅದರ ಬಳಕೆ ಮಾಡದೇನೇ ವಾತಾವರಣವನ್ನೂ, ದೇಶವನ್ನೂ, ನಮ್ಮ ಮುಂದಿನ ಪ್ರಜೆಗಳನ್ನೂ ಉಳಿಸಬೇಕಾಗಿದೆ.