`ಕುಲಾಲ್ ವರ್ಲ್ಡ್ ಡಾಟ್ ಕಾಂ ‘ನ ಗೌರವ ಸಂಪಾದಕ, ಹಿರಿಯ ಚಿಂತಕ, ಪತ್ರಕರ್ತ, ಸಾಹಿತಿ, ಕಥೆಗಾರ ಹೀಗೆ ಬಹುಮುಖ ಪ್ರತಿಭೆಯ ಚಿದಂಬರ ಬೈಕಂಪಾಡಿ ಅವರಿಗೆ ಈ ಬಾರಿಯ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಶುಕ್ರವಾರ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ವಿವಿಧ ಜಿಲ್ಲೆಗಳಿಂದ ಒಟ್ಟು 40 ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕನ್ನಡದಿಂದ ಚಿದಂಬರ ಬೈಕಂಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಗಾರು, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಧಾನ ವರದಿಗಾರರಾಗಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸಿದ್ದ ಚಿದಂಬರ ಅವರು ಪ್ರಸ್ತುತ `ಸೀ ಅಂಡ್ ಸೇ ‘ ವೆಬ್ ಪೋರ್ಟಲ್ ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೆಸರೇ ಸೂಚಿಸುವಂತೆ ಮೂಲತಃ ಬೈಕಂಪಾಡಿಯವರಾದ ಚಿದಂಬರ ಅವರು, ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಸಂಘದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮಂಗಳೂರಿನ ಕೆಪಿಟಿಯಲ್ಲಿ `ಡಿಪ್ಲೊಮಾ ಇನ್ ಪಾಲಿಮಾರ್ ಟೆಕ್ನಾಲಜಿ’ ಕಲಿತರೂ ಬರವಣಿಗೆಯ ಮೇಲೆ ಆಸಕ್ತಿಯಿಂದ,ಮಾಧ್ಯಮ ರಂಗದತ್ತ ದಾಪುಗಾಲು ಹಾಕಿದರು. ವಡ್ಡರ್ಸೆ ರಘುರಾಮ ಶೆಟ್ಟರ `ಮುಂಗಾರು’ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದರು. ಕಾರಣಾಂತರದಿಂದ ಅದು ಪ್ರಕಟಣೆ ನಿಲ್ಲಿಸಿದಾಗ, `ಕನ್ನಡಪ್ರಭ’ಕ್ಕೆ ಪ್ರಧಾನ ವರದಿಗಾರರಾಗಿ ನಿಯುಕ್ತಿಗೊಂಡು, ಬಳಿಕ ಮಂಗಳೂರು ಬ್ಯೂರೊ ಮುಖ್ಯಸ್ಥರಾಗಿದ್ದರು. ವಿ-೪ ಮಿಡಿಯ ನ್ಯೂಸ್ ಚಾನಲ್ ನ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದ ಬೈಕಂಪಾಡಿ, ಕಥೆ, ಕವನ, ಲೇಖನ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಚಿದಂಬರ ಬೈಕಂಪಾಡಿ ತಮ್ಮ ಭಿನ್ನ ಶೈಲಿಯ ವರದಿಗಾರಿಕೆಗೆ ಹೆಸರಾದವರು.
ಇವರ ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ ಕವನ ಸಂಕಲನಗಳನ್ನು ‘ಮಲ್ಲಿಗೆ’ – ತುಳು ಪ್ರೇಮ ಗೀತೆಗಳ ಧ್ವನಿ ಸುರುಳಿ, `ಇದು ಮುಂಗಾರು’ ಕೃತಿಯನ್ನು ಪ್ರಕಟಿಸಿದ್ದಾರೆ. ಇವರು ಬರೆದ ಪತ್ರಕರ್ತ ಪಗೋ ಅವರ ಜೀವನ ಚಿತ್ರದ ಲೇಖನ ಮಾಲಿಕೆಯೊಂದು ಸದ್ಯವೇ ಪುಸ್ತಕ ರೂಪದಲ್ಲಿ ಹೊರಬರಲಿದೆ.
ಚಿದಂಬರ ಬೈಕಂಪಾಡಿ ಅವರು, ಅತ್ಯುತ್ತಮ ತನಿಖಾ ವರದಿಗಾರ ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ, ಬೆಂಗರೆ ಬಾನುಲಿ ಸಾಕ್ಷ್ಯರೂಪಕಕ್ಕೆ ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ, ಜೆಸಿ ಅತ್ಯುತ್ತಮ ಯುವ ಪ್ರಶಸ್ತಿ, ಇನ್ ಲ್ಯಾಂಡ್ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ರತ್ನ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಜೊತೆಗೆ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಪಘಾತದಿಂದ ಚೇತರಿಕೆ :
ವಾರದ ಹಿಂದೆ ಚಿದಂಬರ ಬೈಕಂಪಾಡಿ ಅವರು ನಗರದಲ್ಲಿ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಬ್ರೈನ್ ಹ್ಯಾಮರೇಜ್ (ಮೆದುಳಿನ ರಕ್ತಸ್ರಾವ) ಆಗಿ ಸ್ಕೂಟರ್ನಿಂದ ಬಿದ್ದು ಅಪಘಾತ ಸಂಭವಿಸಿತ್ತು. ಭಾಗಶಃ ಪಕ್ಷವಾತವೂ ಆಗಿತ್ತು. ಬಳಿಕ ಗಂಭೀರ ಸ್ಥಿತಿಯಲ್ಲಿ ಮಂಗಳೂರು ಎ.ಜೆ.ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎರಡು ದಿನಗಳಲ್ಲಿ ಅವರ ಆರೋಗ್ಯ ಸುಧಾರಿಸಿದ್ದು, ಚೇತರಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅವರನ್ನು ಐಸಿಯುನಿಂದ ವಾರ್ಡಿಗೆ ಶಿಫ್ಟ್ ಮಾಡಲಾಗಿದ್ದು, ಸದ್ಯವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.