ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಛತ್ತೀಸ್ ಗಢದಲ್ಲಿ 2006ರಲ್ಲಿ ನಡೆದ ನಕ್ಸಲ್ ತಂಡದೊಂದಿದೆ ನಡೆದ ಹೋರಾಟದಲ್ಲಿ ಹುತಾತ್ಮನಾದ ಮಂಗಳೂರಿನ ವೀರಯೋಧ ಉದಯ ಕುಲಾಲ್ ಕುಟುಂಬಕ್ಕೆ ವ್ಯಕ್ತಿಯೊಬ್ಬ ವಂಚನೆ ನಡೆಸಿ ಯೋಧನ ಕುಟುಂಬದ ಆಸ್ತಿಯನ್ನು ಫೋರ್ಜರಿ ದಾಖಲೆ ಮೂಲಕ ಕಬಳಿಸಿರುವುದು ಬೆಳಕಿಗೆ ಬಂದಿದೆ.
51ನೇ Central Reserve Police Force (CRPF) ಬೆಟಾಲಿಯನ್ ಯೋಧನಾಗಿದ್ದ ಉದಯ ಕುಮಾರ್ 2006 ಆಗಸ್ಟ್ 2ರಂದು ಹುತಾತ್ಮರಾಗಿದ್ದರು. ಆಗ ಅವರಿಗೆ ವಯಸ್ಸು 34 ಮತ್ತು ಎಲ್ ಕೆಜಿ ಮತ್ತು ಒಂದನೇ ತರಗತಿಯಲ್ಲಿ ಮಕ್ಕಳು ಕಲಿಯುತ್ತಿದ್ದರು. ಐದು ದಿವಸಗಳ ಅನಂತರವಷ್ಟೇ ಯೋಧನ ಮೃತದೇಹ ಮಂಗಳೂರು ತಲುಪಿತ್ತು. ಯೋಧನ ನೆನಪಿಗೆ ಮಂಗಳೂರು ಕೆಪಿಟಿ ಯ ಮೊದಲ ಅಡ್ಡರಸ್ತೆಗೆ ಉದಯ ಕುಮಾರ್ ಹೆಸರಿಡಲಾಗಿದೆ.
ಹುತಾತ್ಮನಾದ ಪತಿಯ ಪರಿಹಾರ ಧನದಿಂದ ಮಡದಿ ಯೆಯ್ಯಾಡಿ ಸಮೀಪ ಮನೆಯೊಂದನ್ನು ನಿರ್ಮಿಸಿ ಮನೆಯ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿ ಮನೆ ನಿರ್ವಹಣೆ ಮಾಡುತ್ತಿದ್ದರು. ಹೀಗಿರುವಾಗ ನಾಲ್ಕು ವರ್ಷಗಳ ಹಿಂದೆ ಮನೆ ಬಾಡಿಗೆಗೆ ಆಗಮಿಸಿದ ಸುನೀಲ್ ಕುಮಾರ್ ಎಂಬ ವ್ಯಕ್ತಿಯು ವಾಮಮಾರ್ಗದ ಮೂಲಕ ಮನೆಯ ಒಂದು ಭಾಗವನ್ನು ತನ್ನ ಹೆಸರಿಗೆ ಬರೆಸಿ ದಾಖಲೆ ನಿರ್ಮಿಸಿರುತ್ತಾನೆ.
ಮಾತ್ರವಲ್ಲದೆ, ಕಳೆದ ಮೂರು ವರ್ಷಗಳಿಂದ ಮನೆ ಬಾಡಿಗೆ ನೀಡದೆ ಯೋಧನ ಮಡದಿ ಮತ್ತು ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುತ್ತಾ, ದೇವರು ಮತ್ತು ವಾಮಾಚಾರಾದ ಹೆಸರಿನಲ್ಲಿ ಬೆದರಿಸಿ ಕಿರುಕುಳ ನೀಡುತ್ತಿದ್ದು, ಇದೀಗ ಯೋಧನ ಮಡದಿ ವಸಂತಿ ಅವರು ಪಾಂಡೇಶ್ವರ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಮಧ್ಯೆ, ಸುನೀಲ್ ಎಂಬಾತನ ಇವರ ಮನೆಯ ಆವರಣದೊಳಗೆ ಅತಿಕ್ರಮಣ ಮಾಡಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮಾತ್ರವಲ್ಲದೆ, ಹುತಾತ್ಮ ಯೋಧನ ಉದಯ ಕುಮಾರ್ ಮಕ್ಕಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾನೆ. ವಾಸ್ತವಾಂಶ ಪರಿಶೀಲಿಸದ ಪೊಲೀಸರು ಯೋಧನ ಮಕ್ಕಳಿಬ್ಬರ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದಾರೆ.
ಮನೆ ಸಾಲದ ಕಂತು ಪಾವತಿಸಿಸ ಉಳಿಕೆಯಾಗುವ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದ, ಮಹಿಳೆಗೆ ಈಗ ಮಕ್ಕಳಿಗೆ ಶಿಕ್ಷಣ ಮುಂದುವರಿಸುವುದೇ ಸವಾಲಾಗಿದೆ. ಸ್ವಾಭಿಮಾನಿ ಮಹಿಳೆಯು ಯಾರೊಂದಿಗೆ ತನ್ನ ಕಷ್ಟ ಹೇಳಿಕೊಂಡಿರಲಿಲ್ಲ.
ಇದೀಗ Central Reserve Police Force (CRPF) ಬೆಂಗಳೂರಿನ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಚಾರ ತರಲಾಗಿದ್ದು, ಕುಟುಂಬದ ಪರವಾಗಿ ನಿಲ್ಲುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಬೆಂಗಳೂರಿನ ಸಿ ಆರ್ ಪಿ ಎಫ್ ಅಧಿಕಾರಿಗಳು ವಿಚಾರವನ್ನು ರಾಜ್ಯ ಸರಕಾರ ಗಮನಕ್ಕೆ ತಂದಿದ್ದು, ನ್ಯಾಯ ಕೊಡುವಂತೆ ವಿನಂತಿಸಿದ್ದಾರೆ. ಮಾತ್ರವಲ್ಲದೆ, ಸಿ ಆರ್ ಪಿ ಎಫ್ ಅಧಿಕಾರಿಗಳ ತಂಡವೊಂದು ಸೋಮವಾರ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಆಗಲಿದ್ದಾರೆ.
ಬಾಡಿಗೆಗೆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿಯು ಯೋಧನ ಮಕ್ಕಳನ್ನು ಜೈಲಿಗೆ ಹಾಕಿ, ಯೋಧನ ಮಡದಿಯನ್ನು ಬೀದಿ ಪಾಲು ಮಾಡುವುದಾಗಿ ಆಕೆಗೆ ಬೆದರಿಕೆ ಹಾಕಿರುವುದನ್ನು ವಸಂತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ಥಳೀಯರು ಯೋಧನ ಕುಟುಂಬದ ಬೆಂಬಲ ನೀಡಿದ್ದು, ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ನ್ಯಾಯ ಒದಗಿಸಲು ಮನವಿ ಮಾಡಲಿದ್ದಾರೆ. ಯೋಧನ ಮೃದ ದೇಹ ಮಂಗಳೂರಿಗೆ ತಲುಪುವಾಗ ಐದು ದಿವಸಗಳು ವಿಳಂಬವಾದ ಪರಿಣಾಮ ಯೋಧನ ಮಡದಿಯು ಕೆಲವು ದಿನಗಳ ಮಂಗಳೂರಿನ ಎಸ್ ಸಿ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಮನಸ್ಸಿಗೆ ತೀವೃತರವಾದ ನೋವು, ಕೆಲವು ದಿನಗಳ ಸ್ಮೃತಿ ಇಲ್ಲದ ಕಾರಣ ಮಹಿಳೆಗೆ ತೀವೃ ಮಾನಸಿಕ ಒತ್ತಡ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದೇ ಕಾರಣದಿಂದಾಗಿ ಪರಿಹಾರ ರೂಪದಲ್ಲಿ ಉದ್ಯೋಗ ಕೂಡ ದೊರಕಿರಲಿಲ್ಲ ಎನ್ನಲಾಗಿದೆ. ಮಹಿಳೆಯ ಆರೋಗ್ಯ ಸಮಸ್ಯೆ, ಅತಿಯಾದ ದೈವಿ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿರುವ ಆರೋಪಿಯು ವಂಚನೆಯ ಮೂಲಕ ಆಸ್ತಿಯ ಫೋರ್ಜರಿ ದಾಖಲೆ ಸೃಷ್ಟಿಸಿರುವ ಸಾಧ್ಯತೆ ಇದೆ. ಹುತಾತ್ಮ ಯೋಧನ ಮಡದಿಗೆ ಮತ್ತು ಕುಟುಂಬಕ್ಕೆ ನ್ಯಾಯ ಒದಗಿಸುವುದು ಕೇವಲ ಸರಕಾರಿ ಅಧಿಕಾರಿಗಳಲ್ಲದೆ, ನಾಗರಿಕ ಸಮಾಜದ ಕರ್ತ್ಯವ್ಯ ಕೂಡ ಆಗಿರುತ್ತದೆ.